ADVERTISEMENT

ಕೋವಿಡ್ ಗೆದ್ದವರ ಕಥೆಗಳು | ಜಾಗೃತಪ್ರಜ್ಞೆ ಕೊರೊನಾಗೆ ಉತ್ತಮ ಮದ್ದು

ಸೋಂಕಿನಿಂದ ಗುಣಮುಖರಾದ ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಡಿ.ಲೋಹಿತ್ ಸಲಹೆ

ಈರಪ್ಪ ಹಳಕಟ್ಟಿ
Published 28 ಜುಲೈ 2020, 13:29 IST
Last Updated 28 ಜುಲೈ 2020, 13:29 IST
ಡಿ.ಲೋಹಿತ್
ಡಿ.ಲೋಹಿತ್   

ಚಿಕ್ಕಬಳ್ಳಾಪುರ: ‘ಒಂದು ಕ್ಷಣ ನಿಮ್ಮ ಮನೆಯವರಲ್ಲಿ, ನೆರೆಹೊರೆಯವರಲ್ಲಿ ಕೋವಿಡ್ ಬಂದಿದೆ ಎಂದು ಕಲ್ಪಿಸಿಕೊಳ್ಳಿ. ಆಗ ನಿಮ್ಮ ದೈನಂದಿನ ದಿನಚರಿ ಹೇಗಿರುತ್ತೆ ಊಹಿಸಿಕೊಳ್ಳಿ. ಆ ಊಹೆಯಂತೆ ಸದ್ಯದ ಪರಿಸ್ಥಿತಿ ತಿಳಿಗೊಳ್ಳುವವರೆಗೂ ಎಚ್ಚರಿಕೆಯಿಂದ ವ್ಯವಹರಿಸಿದರೆ ಸಾಕು. ಕೋವಿಡ್ ಭಯವಿಲ್ಲದೆ ಬದುಕಬಹುದು’

ಕೋವಿಡ್‌ 19 ಸೋಂಕಿನಿಂದ ಗುಣಮುಖರಾಗಿ ಕರ್ತವ್ಯಕ್ಕೆ ಮರಳಿದ ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಡಿ.ಲೋಹಿತ್‌ ಅವರು ಹೇಳಿದ ಅನುಭವದ ಮಾತಿದು.

‘ನಾವು ಸಮಾಜದಲ್ಲಿ ಪ್ರತಿಯೊಬ್ಬರಲ್ಲಿಯೂ ಕೋವಿಡ್‌ ಇದೆ ಎಂಬ ಜಾಗೃತ ಪ್ರಜ್ಞೆ ಕಾಯ್ದುಕೊಂಡು ಅಂತರ ಕಾಯ್ದುಕೊಂಡು ವ್ಯವಹರಿಸಿದರೆ ಖಂಡಿತ ಕೋವಿಡ್‌ ನಿಯಂತ್ರಿಸಬಹುದು’ ಎನ್ನುತ್ತಾರೆ ಲೋಹಿತ್. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ಹೇಳಿದಿಷ್ಟು...

ADVERTISEMENT

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾದ ದಿನದಿಂದ ಈವರೆಗೂ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸುತ್ತಿದ್ದೆವೆ. ನಾನು ಸದಾ ಜನರ ನಡುವೆ ಇರುವುದರಿಂದ ಸೋಂಕು ಎಲ್ಲಿ, ಹೇಗೆ ತಗುಲಿತು ಎಂಬುದು ಈವರೆಗೆ ತಿಳಿಯಲಿಲ್ಲ.

ಜುಲೈ ಮೊದಲ ವಾರದಲ್ಲಿ ಜ್ವರ, ಮೈ ಕೈ ನೋವು ಕಾಣಿಸಿಕೊಂಡಿತು. ಅದು ಕೋವಿಡ್ ಇರಲಾರದು ಎಂದೆಣಿಸಿ ಆಗಾಗ ವಿಶ್ರಾಂತಿ ಪಡೆದು ಕೆಲಸ ಮಾಡುತ್ತಿದ್ದೆ. ಜ್ವರ ಪದೇ ಪದೇ ಕಾಣಿಸಿಕೊಂಡ ಕಾರಣಕ್ಕೆ ಜುಲೈ 10 ರಂದು ಪರೀಕ್ಷೆ ಮಾಡಿಸಿದಾಗ ವರದಿಯಲ್ಲಿ ಕೋವಿಡ್ ತಗುಲಿರುವುದು ತಿಳಿಯಿತು.

ಬಳಿಕ ಕುಟುಂಬದವರನ್ನು ಪರೀಕ್ಷೆ ಮಾಡಿಸಿದಾಗ ಪತ್ನಿ, ಮಗ, ಮಾವ ಮತ್ತು ಬಾಮೈದನಿಗೆ ಹೀಗೆ ಒಟ್ಟು ಐದು ಜನರಿಗೆ ಸೋಂಕು ತಗುಲಿತ್ತು. ಹೀಗಾಗಿ, ಮನೆಯಲ್ಲಿಯೇ ಸ್ವಯಂ ಕ್ವಾರಂಟೈನ್‌ ಆಯ್ಕೆ ಮಾಡಿಕೊಂಡೆವು.

ವಯಸ್ಸಾಗಿರುವ ಮಾವನಿಗೆ ಬಿಪಿ, ಶುಗರ್ ಇದೆ. ಮಗನಿಗೆ ಇನ್ನೂ ಐದೂವರೆ ವರ್ಷ ಚಿಕ್ಕವನು. ಹೀಗಾಗಿ ಆರಂಭದಲ್ಲಿ ಆ ಇಬ್ಬರ ಬಗ್ಗೆಯೂ ಭಯ, ಆತಂಕ ಕಾಡಿತ್ತು. ಮಾವನ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗಲಿಲ್ಲ. ಮಗನಲ್ಲಿ ಸೋಂಕಿನ ಸಣ್ಣ ಲಕ್ಷಣ ಕೂಡ ಕಾಣಿಸಿಕೊಳ್ಳಲಿಲ್ಲ. ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟೆವು.

ಕೋವಿಡ್‌ಗೆ ಹೆದರಿಕೊಳ್ಳುವ ಅಗತ್ಯವಿಲ್ಲ. ಹಾಗಂತ ಮೈಮರೆತು ವರ್ತಿಸುವುದು ಕ್ಷೇಮಕರವಲ್ಲ. ಜಾಗೃತ ಪ್ರಜ್ಞೆಯೊಂದಿಗೆ ವ್ಯವಹರಿಸುವುದೇ ಜಾಣ್ಮೆಯ ನಡೆ. ಪ್ರತಿಯೊಬ್ಬರೂ ಬಿಸಿನೀರು ಕುಡಿಯುವ ಜತೆಗೆ ಯೋಗ, ಪ್ರಾಣಾಯಾಮ ಮಾಡಿದರೆ ಈ ಸೋಂಕು ಎದುರಿಸುವುದು ತುಂಬಾ ಸರಳ.

ಪ್ರತಿಯೊಬ್ಬರು ಮನೆಯಲ್ಲಿ ಬಿಸಿ ನೀರು ಉಪಯೋಗಿಸಬೇಕು. ಪ್ರತಿ ಎರಡು ಗಂಟೆಗೊಮ್ಮೆ ಬಿಸಿ ನೀರು ಕುಡಿಯಬೇಕು. ದಿನಕ್ಕೆ ಕನಿಷ್ಠ ಮೂರು ಲೀಟರ್‌ ನೀರಾದರೂ ಕುಡಿಯಬೇಕು. ಇದರಿಂದ ಒಂದೊಮ್ಮೆ ಕೋವಿಡ್‌ ಬಂದರೂ ತಿಳಿಯುವುದೇ ಇಲ್ಲ.

ಮೈಕೈ ನೋವು, ಜ್ವರ ಕಾಣಿಸಿಕೊಂಡ ತಕ್ಷಣವೇ ಪರೀಕ್ಷೆ ಮಾಡಿಸಿಕೊಂಡು ಮುಂಜಾಗ್ರತಾ ಕ್ರಮಗಳು, ಮಾತ್ರೆಗಳನ್ನು ತೆಗೆದುಕೊಳ್ಳುವುದು ಒಳಿತು. ಪ್ರತಿ ಮನೆಯಲ್ಲಿ ಪಲ್ಸ್ ಆಕ್ಸಿಮೀಟರ್‌ ಇಟ್ಟುಕೊಂಡರೆ ಉತ್ತಮ. ಅದರಿಂದ ನಿತ್ಯ ಮನೆಯಲ್ಲಿರುವ ಹಿರಿಯ ನಾಗರಿಕರು, ಕಾಯಿಲೆ ಪೀಡಿತರಲ್ಲಿನ ಆಮ್ಲಜನಕ ಪ್ರಮಾಣ ಅರಿತುಕೊಂಡು ಅಗತ್ಯವಿದ್ದರೆ ಚಿಕಿತ್ಸೆ ಕೊಡಿಸಲು ಅನುಕೂಲವಾಗುತ್ತದೆ.

ಮೊದಲೇ ಹೇಳಿದಂತೆ ಪ್ರತಿಯೊಬ್ಬರಲ್ಲಿ ಕೋವಿಡ್ ಇದೆ ಎಂಬ ಭಾವನೆ ನಮ್ಮಲ್ಲಿ ಇದ್ದಾಗ ಮನಸ್ಸು ತನ್ನಿಂದತಾನೇ ಎಚ್ಚರ ಸ್ಥಿತಿಯಲ್ಲಿ ಇರುತ್ತದೆ. ಊಟ, ತಿಂಡಿ, ಸಿಗರೇಟ್‌ ಮುಂತಾದವುಗಳನ್ನು ಪರಸ್ಪರ ಹಂಚಿಕೊಂಡು ಅಪಾಯ ಆಹ್ವಾನಿಸಿಕೊಳ್ಳುವ ಸ್ಥಿತಿ ಬರಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.