ಚಿಕ್ಕಬಳ್ಳಾಪುರ: ಕೋವಿಡ್ ಸೋಂಕು ಈಗ ಜಿಲ್ಲೆಗೆ ಕಾಲಿಟ್ಟಿದೆ. ಜಿಲ್ಲೆಯಲ್ಲಿ 4 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ ಗೌರಿಬಿದನೂರು ತಾಲ್ಲೂಕಿನ 7 ತಿಂಗಳ ಗರ್ಭಿಣಿ, ಬಾಗೇಪಲ್ಲಿ ತಾಲ್ಲೂಕಿನ 6 ತಿಂಗಳ ಗರ್ಭಿಣಿ, ಚಿಂತಾಮಣಿ ತಾಲ್ಲೂಕಿನ 17 ವರ್ಷದ ಯುವಕ, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 30 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ.
ಶುಕ್ರವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಅಧ್ಯಕ್ಷತೆಯಲ್ಲಿ ಕೋವಿಡ್ ನಿಯಂತ್ರಣ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಭೆ ನಡೆಯಿತು.
ಡಾ.ಎನ್ ಭಾಸ್ಕರ್ ಮಾತನಾಡಿ, ಪರೀಕ್ಷೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ವೈದ್ಯಕೀಯ ಸಂಸ್ಥೆಗೆ ಜಿಲ್ಲೆಯಿಂದ ಕಳುಹಿಸಿರುವ 13 ಗಂಟಲು ಸ್ರಾವ ಮಾದರಿಗಳಲ್ಲಿ 4 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಕೋವಿಡ್–19 ನಿಯಂತ್ರಣಕ್ಕೆ ಜಿಲ್ಲಾಡಳಿತದ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
2020 ರಿಂದ 2023ರ ವರೆಗೆ 3 ರಿಂದ 5 ಕೋವಿಡ್ ಅಲೆಗಳನ್ನು ಕಂಡಿದ್ದೇವೆ. ಗರ್ಭಿಣಿಯರಲ್ಲಿ, 60 ವರ್ಷ ಮೇಲ್ಪಟ್ಟಿರುವ ಸಕ್ಕರೆ ಕಾಯಿಲೆ, ಬಿ.ಪಿ, ಕಿಡ್ನಿ ತೊಂದರೆ ಇರುವವವರಿಗೆ ಹಾಗೂ ಮಕ್ಕಳಲ್ಲಿ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಿದರು.
ತೀವ್ರ ಜ್ವರ, ತಲೆ ನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯೂಮೋನಿಯಾ ಮತ್ತು ಆಯಾಸ, ವಾಸನೆ ಮತ್ತು ರುಚಿ ನಷ್ಟ ರೋಗದ ಲಕ್ಷಣಗಳಾಗಿವೆ ಎಂದರು.
ಸೋಂಕು ಪೀಡಿತರ ಸಂಪರ್ಕದಿಂದ ದೂರವಿರುವುದು. ಶಂಕಿತ ರೋಗಿಯು ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು. ವೈಯಕ್ತಿಕ ಸ್ಚಚ್ಛತೆ ಕಾಪಾಡಿಕೊಳ್ಳುವುದು ಮತ್ತು ಸಾಬೂನಿನಿಂದ ಕೈ ತೊಳೆಯಬೇಕು. ಕೆಮ್ಮುವಾಗ ಮತ್ತು ಸೀನುವಾಗ ಎಲ್ಲೆಂದರಲ್ಲಿ ಉಗುಳಬಾರದು. ಉಸಿರಾಟದ ತೊಂದರೆ ಆದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸಬೇಕು. ಸುರಕ್ಷಿತವಲ್ಲದ ಕಾಡು ಪ್ರಾಣಿ ಅಥವಾ ಸಾಕು ಪ್ರಾಣಿಗಳನ್ನು ಮುಟ್ಟಬಾರದು ಎಂದು ಸಲಹೆ ನೀಡಿದರು.
ಸೋಂಕಿತ ವ್ಯಕ್ತಿಯು ಸೀನಿದಾಗ ಮತ್ತು ಕೆಮ್ಮಿದಾಗ, ಸೋಂಕಿತ ವ್ಯಕ್ತಿಯ ಜೊತೆ ನಿಕಟ ಸಂಪರ್ಕದಲ್ಲಿರುವಾಗ, ಸೋಂಕಿತರ ಹಸ್ತ ಲಾಘವ ಮತ್ತು ಮುಟ್ಟುವುದರಿಂದ ಸೋಂಕಿತ ವ್ಯಕ್ತಿಯು ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದಾಗ. ಸ್ವಚ್ಛಗೊಳಿಸದ ಅಥವಾ ಸುರಕ್ಷಿತವಲ್ಲದ ಕೈಗಳಿಂದ ಕಣ್ಣು, ಮೂಗು, ಬಾಯಿ ಮುಟ್ಟುವುದರಿಂದ ಸೋಂಕು ಹರಡುತ್ತದೆ ಎಂದರು.
ಆಗಾಗ್ಗೆ ಸೋಪು ಅಥವಾ ನೀರಿನಿಂದ ಕೈ ತೊಳೆಯುವುದನ್ನು ಅಭ್ಯಾಸ ಮಾಡಬೇಕು. ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್‌ಗಳನ್ನು ಬಳಸಿ ಕೈಗಳು ಸ್ವಚ್ಛವಾಗಿದ್ದರೂ ಸೋಪು ಮತ್ತು ನೀರಿನಿಂದ ಕೈ ತೊಳೆಯಬೇಕು. ರೋಗ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರನ್ನು ಭೇಟಿ ಮಾಡುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಲು ಮಾಸ್ಕ್ ಧರಿಸಬೇಕು. ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್, ಕರವಸ್ತ್ರ ಉಪಯೋಗಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು ಎಂದು ಸಲಹೆ ನೀಡಿದರು.
ರೋಗಲಕ್ಷಣಗಳು, ಚಿಹ್ನೆಗಳಿದ್ದರೆ 24/7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅತೀಕ್ ಪಾಷಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್, ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ಎಂ.ಎಸ್ ಕೃಷ್ಣಪ್ರಸಾದ್, ಡಾ. ಶಿವಕುಮಾರ್, ತಾಲ್ಲೂಕು ಅಬಕಾರಿ ಅಧೀಕ್ಷಕ ದೀಪಕ್, ಸಾರಿಗೆ ಇಲಾಖೆಯ ಎಂ ಶ್ರೀನಿವಾಸ್, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.