ADVERTISEMENT

ಚಿಕ್ಕಬಳ್ಳಾಪುರ: ಕೋವಿಡ್ ಹೊಸ ಮಾರ್ಗಸೂಚಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 5:18 IST
Last Updated 22 ಏಪ್ರಿಲ್ 2021, 5:18 IST

ಚಿಕ್ಕಬಳ್ಳಾಪುರ: ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯದಾದ್ಯಂತ ಬುಧವಾರ (ಏಪ್ರಿಲ್ 21)ದಿಂದ ಮೇ 4ರವರೆಗೆ ರಾತ್ರಿ 9 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಹಾಗೂ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಈ ಹೊಸ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲೂ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿ ಅನುಷ್ಠಾನ ಬಗ್ಗೆ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ನೋಡಲ್ ಅಧಿಕಾರಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ
ಮಾತನಾಡಿದರು.

ಹೊಸ ಮಾರ್ಗಸೂಚಿಯಲ್ಲಿ ಏನಿದೆ: ಶಾಲೆಗಳು, ಕಾಲೇಜುಗಳು, ಕೋಚಿಂಗ್ ಕೇಂದ್ರಗಳು (ಆನ್‌ಲೈನ್, ದೂರಶಿಕ್ಷಣ ಮುಂದುವರೆಸಬಹುದು), ಸಿನಿಮಾ ಹಾಲ್‌ಗಳು, ಶಾಪಿಂಗ್ ಮಾಲ್, ಜಿಮ್ನಾಷಿಯಂ, ಯೋಗ ಕೇಂದ್ರಗಳು, ಸ್ಪಾ, ಕ್ರೀಡಾ ಕಾಂಪ್ಲೆಕ್ಸ್‌ಗಳು, ಸ್ಟೇಡಿಯಂ, ಈಜುಕೊಳ, ಮನರಂಜನಾ ಅಮ್ಯೂಸ್‌ಮೆಂಟ್ ಪಾರ್ಕ್, ಬಾರ್, ಆಡಿಟೋರಿಯಂಗಳು ಮತ್ತಿತರ ಸಮಾವೇಶದ ತಾಣಗಳು, ಎಲ್ಲ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಮಾವೇಶಗಳು ಸಂಪೂರ್ಣ ಬಂದ್ ಆಗಲಿದೆ.

ADVERTISEMENT

ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ, ಪ್ರಾರ್ಥನಾ ಮಂದಿರಗಳಿಗೆ ಭಕ್ತರಿಗೆ ಅವಕಾಶ ಇಲ್ಲ. ಆದರೆ, ಪೂಜಾ ಕೈಂಕರ್ಯ ನಡೆಸಲು ಅರ್ಚಕರಿಗೆ ಅವಕಾಶ ಇದೆ. ಹೋಟೆಲ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಪಾರ್ಸೆಲ್ ಮಾತ್ರ ಒಯ್ಯಲು ಅವಕಾಶ ಇದೆ ಎಂದು ತಿಳಿಸಿದರು.

ಶಾಲಾ, ಕಾಲೇಜು ಸಂಪೂರ್ಣ ಬಂದ್: ಶಾಲೆ ಕಾಲೇಜುಗಳು, ಇತರೆ ವಿದ್ಯಾಸಂಸ್ಥೆಗಳು, ತರಬೇತಿ ಕೇಂದ್ರಗಳು, ಕ್ರೀಡಾಂಗಣ, ಪಾರ್ಕ್‌ಗಳು ಬಂದ್ ಆಗಲಿವೆ.

ಎಲ್ಲ ರೀತಿಯ ನಿರ್ಮಾಣ ಚಟುವಟಿಕೆಗಳು, ರಿಪೇರಿ ಚಟುವಟಿಕೆಗಳಿಗೆ ಅವಕಾಶ ಇದೆ. ಎಲ್ಲ ಕೈಗಾರಿಕೆಗಳು, ಉತ್ಪಾದನಾ ಘಟಕಗಳನ್ನು ಕೋವಿಡ್ ನಿಯಮ ಪಾಲಿಸಿ ನಡೆಸಬಹುದು. ಕಾರ್ಮಿಕರು ಮತ್ತು ಸಿಬ್ಬಂದಿಯನ್ನು ಸಾಗಣೆ ಮಾಡಲು ಕೆಲಸದ ಸ್ಥಳದ ಗುರುತಿನ ಚೀಟಿ ಇರುವುದು ಅಗತ್ಯವಾಗಿದೆ.

ವಾಣಿಜ್ಯ ಚಟುವಟಿಕೆಗಳಾದ ಕಿರಾಣಿ ಅಂಗಡಿ, ನ್ಯಾಯ ಬೆಲೆ ಅಂಗಡಿ, ಆಹಾರ ಪದಾರ್ಥಗಳು, ಹಣ್ಣು, ತರಕಾರಿ, ಡೇರಿ, ಹಾಲು ಮತ್ತು ಇತರ ಉತ್ಪನ್ನಗಳು, ಮೀನು- ಮಾಂಸ, ಪ್ರಾಣಿಗಳ ಆಹಾರಗಳ ಮಾರಾಟಕ್ಕೆ ಅವಕಾಶ ಇದೆ. ಹೂವು, ಹಣ್ಣು, ತರಕಾರಿ ಸಗಟು ಮಾರುಕಟ್ಟೆಗಳನ್ನು ಏಪ್ರಿಲ್ 23ರ ಬಳಿಕ ತೆರೆದ ಸ್ಥಳ ಅಥವಾ ಮೈದಾನಗಳಿಗೆ ಸ್ಥಳಾಂತರ ಮಾಡಬೇಕು.

ಮದುವೆಗೆ 50, ಅಂತ್ಯ ಸಂಸ್ಕಾರಕ್ಕೆ 20 ಮಂದಿಗೆ ಅವಕಾಶ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ದನದ ಸಂತೆ, ಜಾತ್ರೆ ನಡೆಯದಂತೆ ಕ್ರಮವಹಿಸಬೇಕು. ಮಾರುಕಟ್ಟೆಯಲ್ಲಿ ಜನ ಸಂದಂಣಿಯಾಗದಂತೆ ತರಕಾರಿ ಮತ್ತು ಹಣ್ಣು ಮಾರಾಟ ಪ್ರತ್ಯೇಕವಾಗಿ ಮಾರಾಟವಾಗುವಂತೆ ಕ್ರಮವಹಿಸಬೇಕು ಎಂದರು.

ಮದುವೆಗಳು ಈಗಾಗಲೇ ನಿಗದಿಯಾಗಿದ್ದರೆ ಅವುಗಳಿಗೆ ಗರಿಷ್ಠ 50 ಮಂದಿಗೆ ಮಾತ್ರ ಅವಕಾಶವಿದೆ. ಹೊಸದಾಗಿನಿಗದಿ ಮಾಡಿಕೊಳ್ಳುವವರು ಆಯಾ ತಾಲೂಕು ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಕಡ್ಡಾಯ. ಇನ್ನು ಅಂತ್ಯ ಸಂಸ್ಕಾರಕ್ಕೆ ಕೇವಲ 20 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಸಿಇಒ ಪಿ.ಶಿವಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.