
ಬಾಗೇಪಲ್ಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ಎಂನರೇಗಾ) ಯೋಜನೆಯನ್ನು ವಿಕಸಿತ ಭಾರತ–ಜಿ ರಾಮ್ ಜಿ ಕಾಯ್ದೆಯಾಗಿ ತಿದ್ದುಪಡಿ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಇಲ್ಲಿನ ಸಾರಿಗೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಕೇಂದ್ರ ಸರ್ಕಾರ ರೂಪಿಸಿದ ತಿದ್ದುಪಡಿ ಮಸೂದೆಗೆ ಅಂಕಿತ ಹಾಕಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕ್ರಮಕ್ಕೆ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಪಟ್ಟಣದ ಸುಂದರಯ್ಯ ಭವನದ ಮುಂಭಾಗದಿಂದ ಹೊರಟ ಪ್ರತಿಭಟನಾಕಾರರ ಪ್ರತಿಭಟನಾ ಬೈಕ್ ರ‍್ಯಾಲಿಯು ಡಿವಿಜಿ ಮುಖ್ಯರಸ್ತೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸಾಗಿತು. ಮೆರವಣಿಗೆಯುದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಲಿ ಸದಸ್ಯ ಎಂ.ಪಿ. ಮುನಿವೆಂಕಟಪ್ಪ ಮಾತನಾಡಿ, ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರಿಗೆ ನೆರವಾಗುವ ನಿಟ್ಟಿನಲ್ಲಿ ವರ್ಷದಲ್ಲಿ ಕನಿಷ್ಠ 100 ದಿನಗಳ ಕೆಲಸ ನೀಡಿ, ಅವರ ಜೀವನಕ್ಕೆ ಆಸರೆಯಾಗುವಂತೆ ಎಡ ಪಕ್ಷಗಳ ಬೆಂಬಲದೊಂದಿಗೆ ಯುಪಿಎ ಸರ್ಕಾರವು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ದೇಶದಾದ್ಯಂತ ಜಾರಿಗೆ ತಂದಿತ್ತು. ಆದರೆ, ಇದೀಗ ಆಡಳಿತದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು ಮನರೇಗಾ ಯೋಜನೆಗೆ ನೀಡಲಾಗುತ್ತಿದ್ದ ಅನುದಾನವನ್ನು ಹಂತಹಂತವಾಗಿ ಕಡಿತ ಮಾಡುತ್ತಾ ಬಂದಿದೆ. ಅಲ್ಲದೆ, ಬಡಜನರ ಯೋಜನೆಯಾದ ಮನರೇಗಾವನ್ನು ಬುಡಮೇಲು ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪ್ರಾಂತ ಕೃಷಿಕೂಲಿಕಾರರ ಸಂಘದ ಸಹಕಾಯದರ್ಶಿ ಬಿಳ್ಳೂರು ನಾಗರಾಜ್ ಮಾತನಾಡಿ, ಪ್ರಾಂತ ರೈತ ಸಂಘದ ಮುಖಂಡ ಚನ್ನರಾಯಪ್ಪ, ಅಧ್ಯಕ್ಷ ದೇವಿಕುಂಟೆಶ್ರೀನಿವಾಸ್, ಕಾರ್ಯದರ್ಶಿ ಡಿ.ಟಿ.ಮುನಿಸ್ವಾಮಿ, ದಲಿತ ಹಕ್ಕುಗಳ ಸಮಿತಿ ಕಾರ್ಯದರ್ಶಿ ಟೌನ್‍ಕೃಷ್ಣಪ್ಪ, ಮಸಣ ಕಾರ್ಮಿಕರ ಸಂಘದ ವಿ.ಮುನಿಯಪ್ಪ ಸೇರಿದಂತೆ ವಿವಿಧ ಕೃಷಿಕೂಲಿಕಾರ್ಮಿಕರ ಸಂಘಟನೆಗಳ ಮುಖಂಡರು ವಿಬಿ-ಜಿ ರಾಮ್ ಜಿ ಕಾಯ್ದೆಯ ಆದೇಶದ ಪ್ರತಿಗೆ ಬೆಂಕಿ ಹಚ್ಚಿ, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಿಪಿಎಂ ಪಕ್ಷದ ತಾಲ್ಲೂಕು ಸಮಿತಿ ಸದಸ್ಯ ಅಶ್ವಥ್ಥಪ್ಪ, ಎಚ್.ಎ.ರಾಮಲಿಂಗಪ್ಪ, ಎ.ಸೋಮಶೇಖರ, ಚಂಚುರಾಯನಪಲ್ಲಿ ಕೃಷ್ಣಪ್ಪ, ರಾಮಾಂಜಿ, ಇಮ್ರಾನ್, ರವಣಪ್ಪ, ವೆಂಕಟರಾಂ, ಸಾಯಿಜ್ಯೋತಿ ಇದ್ದರು.
ಮಹಾತ್ಮ ಗಾಂಧಿ ಹೆಸರಿನಲ್ಲಿದ್ದ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಹೆಸರನ್ನು ವಿಬಿ-ಜಿ ರಾಮ್ ಜಿ ಎಂದು ಬದಲಾಯಿಸಿರುವುದು ಖಂಡನೀಯ. ವಿಶ್ವಕ್ಕೆ ಶಾಂತಿಯ ಹಾದಿ ತೋರಿಸಿದ ಮಹಾತ್ಮ ಗಾಂಧಿ ಹೆಸರನ್ನು ಬದಲಿಸಿದ ಕ್ರಮವನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಲಿ ಸದಸ್ಯ ಎಂ.ಪಿ. ಮುನಿವೆಂಕಟಪ್ಪ ಒತ್ತಾಯಿಸಿದರು.
ಜೊತೆಗೆ ಈ ಯೋಜನೆಯ ವೆಚ್ಚವನ್ನು ಈ ಹಿಂದೆ ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಆದರೆ ಈಗ ಈ ಯೋಜನೆಗೆ ತಗುಲುವ ಒಟ್ಟಾರೆ ವೆಚ್ಚದ ಪೈಕಿ ಶೇ 60ರಷ್ಟು ಅನುದಾನವನ್ನು ಮಾತ್ರ ಕೇಂದ್ರ ಭರಿಸಲಿದೆ. ಉಳಿದ ಶೇ 40ರಷ್ಟು ಅನುದಾನವನ್ನು ರಾಜ್ಯಗಳೇ ಭರಿಸಬೇಕಿದೆ. ಆದರೆ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ತೆರಿಗೆ ಹಣ ₹5 ಲಕ್ಷ ಕೋಟಿ ಕೇಂದ್ರ ಸರ್ಕಾರ ನೀಡದೆ ಕೇವಲ ₹60 ಕೋಟಿ ನೀಡಿ ರಾಜ್ಯಕ್ಕೆ ಕೇಂದ್ರ ಸರ್ಕಾರ ದ್ರೋಹ ಮಾಡಿದೆ ಎಂದು ಆರೋಪಿಸಿದರು.
‘ಮನರೇಗಾ ನಿರ್ನಾಮಕ್ಕೆ ಯತ್ನ’ ‘ಜಿ ರಾಮ್ ಜಿ ತಿದ್ದುಪಡಿ ಕಾಯ್ದೆ ಮೂಲಕ ಕೇಂದ್ರ ಸರ್ಕಾರವು ಗ್ರಾಮೀಣ ಪ್ರದೇಶದ ಬಡವರ ಜೀವನಾಡಿಯಾಗಿರುವ ಮನರೇಗಾ ಯೋಜನೆಯನ್ನು ಹಂತ ಹಂತವಾಗಿ ನಿರ್ನಾಮ ಮಾಡಲು ಹೊರಟಂತಿದೆ’ ಎಂದು ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಎಂ.ಎನ್. ರಘುರಾಮರೆಡ್ಡಿ ಹೇಳಿದರು. ‘ಹೆಸರು ಬದಲಿಸುವುದು ಅನುದಾನ ನೀಡದೆ ಬಡಜನರಿಗೆ ಕೇಂದ್ರ ಬಿಜೆಪಿ ಸರ್ಕಾರ ಮೋಸ ಮಾಡಿದೆ. ಜಿ ರಾಮ್ ಜಿ ಕಾಯ್ದೆಯಲ್ಲಿ 100 ದಿನಗಳ ಕೆಲಸವನ್ನು 125 ದಿನಗಳಿಗೆ ವಿಸ್ತರಿಸಲಾಗಿದೆ ಎನ್ನುತ್ತಿದೆ ಕೇಂದ್ರ ಸರ್ಕಾರ. ಆದರೆ ಕೇಂದ್ರ ಸರ್ಕಾರವು ತನ್ನ ಬಜೆಟ್‌ನಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಕಡಿಮೆ ಅನುದಾನವನ್ನು ಮೀಸಲಿಟ್ಟಿದೆ. ಇದರಿಂದ ಬಡಜನರಿಗೆ ಕೆಲಸ ಮತ್ತು ಕೂಲಿ ಹಣ ಸಿಗಲಿದೆಯೇ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.