
ಬಾಗೇಪಲ್ಲಿ: ತಾಲ್ಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಕುಟುಂಬಸ್ಥರಿಗೆ ನಿವೇಶನ, ವಸತಿ, ಸಾಗುವಳಿ ಚೀಟಿ ಮತ್ತು ಹಕ್ಕುಪತ್ರಗಳನ್ನು ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಸದಸ್ಯರು ಸೋಮವಾರ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇಲ್ಲಿನ ನ್ಯಾಷನಲ್ ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ಹೊರಟ ಪ್ರತಿಭಟನಕಾರರು, ಜನರಿಗೆ ನಿವಶೇನ, ವಸತಿ, ಸಾಗುವಳಿ ಮತ್ತು ಹಕ್ಕುಪತ್ರಗಳನ್ನು ಈವರೆಗೆ ನೀಡಿಲ್ಲ ಎಂದು ಆರೋಪಿಸಿ ತಾಲ್ಲೂಕು ಆಡಳಿತ, ವಂಚಾಯಿತಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸಂಚಾಲಕ ಕೆ.ಸಿ.ರಾಜಾಕಾಂತ್ ಮಾತನಾಡಿ, ‘ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲ್ಲೂಕುಗಳ ಜನರಿಗೆ ವಸತಿ, ಮನೆ, ಸ್ಮಶಾನಕ್ಕೆ ಜಾಗ, ರಸ್ತೆ, ಹಕ್ಕು ಪತ್ರಗಳ ವಿತರಣೆಗಾಗಿ ಒಂದು ವರ್ಷದ ಹಿಂದಿನಿಂದ ಒತ್ತಾಯಿಸಲಾಗುತ್ತಿದೆ. ಆದರೆ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯತೆಗೆ ಕನ್ನಡಿಯಾಗಿದೆ. ಸಂವಿಧಾನ ಪೀಠಿಕೆ, ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು, ಅದೇ ಸಂವಿಧಾನದಲ್ಲಿ ಅಡಕವಾಗಿರುವ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಜನರಿಗೆ ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಶ್ರೀಮಂತರು, ರಿಯಲ್ ಎಸ್ಟೇಟ್‍ನವರಿಗೆ ನಿವೇಶನ ಸೇರಿದಂತೆ ಸರ್ಕಾರಿ ಸೌಲಭ್ಯಗಳು ತುರ್ತಾಗಿ ಸಿಗುತ್ತವೆ. ಆದರೆ, ಬಡವರಿಗೆ ಸೌಲಭ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ತಾತ್ಸರ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ದೂರಿದರು.
ಸಂಘಟನೆಯ ತಾಲ್ಲೂಕು ಸಂಚಾಲಕ ಪೈಪಾಳ್ಯರವಿ ಮಾತನಾಡಿ, ಗೂಳೂರು, ಮೊಟಕಪಲ್ಲಿ, ಮಲಕಚೆರುವುಪಲ್ಲಿ, ಯಲ್ಲಂಪಲ್ಲಿ, ಜೂಲಪಾಳ್ಯ, ಪಾತಬಾಗೇಪಲ್ಲಿ, ಬಾಲರೆಡ್ಡಿಪಲ್ಲಿ, ಚೊಕ್ಕಂಪಲ್ಲಿ, ಚೇಳೂರು ತಾಲ್ಲೂಕಿನ ಪುಲಗಲ್ ಗ್ರಾಮ ಪಂಚಾಯಿತಿಗಳಲ್ಲಿ ಜಮೀನುಗಳ ಸರ್ವೆ ನಂಬರ್ ಗುರುತಿಸಲಾಗಿದೆ. ಆದರೆ, ಅರ್ಹ ಫಲಾನುಭವಿಗಳಿಗೆ ಈವರೆಗೆ ನಿವೇಶನ ಹಂಚಿಕೆಯಾಗಿಲ್ಲ. ಪಟ್ಟಣದ ಪುರಸಭೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಿವೇಶನರಹಿತರು ಅರ್ಜಿ ಹಾಕಿದ್ದಾರೆ. ಆದರೆ, ಈವರೆಗೆ ಜಮೀನು ಗುರುತಿಸಿಲ್ಲ ಎಂದರು.
ಆಚೇಪಲ್ಲಿ ಶ್ರೀನಿವಾಸ್ ತಂಡದ ಸದಸ್ಯರು ಕ್ರಾಂತಿಗೀತೆಗಳು ಹಾಡಿದರು.
ಪ್ರತಿಭಟನೆಯಲ್ಲಿ ಸಿ.ಜಿ.ಗಂಗಪ್ಪ, ಜಿ.ವಿ.ಗಂಗಪ್ಪ, ಎನ್.ಸತೀಶ್, ಪ್ರಕಾಶ್, ಗಂಗುಲಪ್ಪ, ಚೊಕ್ಕಂಪಲ್ಲಿ ಮಂಜುನಾಥ, ಚೌಡಯ್ಯ, ಸೂರಿ, ನಂಜುಂಡಪ್ಪ, ಶ್ರೀನಿವಾಸ್, ಆಚೇಪಲ್ಲಿ ಶ್ರೀನಿವಾಸ್, ಭಾನುಪ್ರಕಾಶ್, ಭಾನುಪ್ರಕಾಶ್, ನಾರಾಯಣಪ್ಪ, ಮುನಿರಾಜು, ಈರಪ್ಪ, ಗಂಗಾಧರ, ನರಸಿಂಹಯ್ಯ, ಇಂದ್ರ, ಗೋಪಿ, ಬಾಬು, ಟಿ.ವೆಂಕಟರಾಯಪ್ಪ, ಕೆ.ನರಸಿಂಹಯ್ಯ, ಆಂಜಿನಪ್ಪ, ಎನ್.ಪರಮೇಶ್, ಚೆಂಡೂರು ರಮಣ, ತಿರುಮಳಪ್ಪ, ಜಿ.ನರಸಿಂಹಪ್ಪ ಇದ್ದರು.
‘ಸತ್ತರೆ ಕೆಟ್ಟರೆ ಮಾತ್ರ ದಲಿತರ ಬೇಕು’
ಸ್ವಾತಂತ್ರ್ಯ ಬಂದು 78 ವರ್ಷಗಳೇ ಆಗಿದೆ. ಆದರೆ ದಲಿತರು ಹಿಂದುಳಿದ ವರ್ಗದವರು ಅಲ್ಪಸಂಖ್ಯಾತರು ಸೇರಿದಂತೆ ತುಳಿತಕ್ಕೊಳಪಟ್ಟ ಸಮುದಾಯಗಳು ಮೂಲಸೌಕರ್ಯಗಳಾದ ನಿವೇಶನ ಮನೆ ಸ್ಮಶಾನಕ್ಕೆ ಜಾಗ ರಸ್ತೆ ಸೇರಿದಂತೆ ಇನ್ನಿತರ ಬೇಡಿಕೆಗಳಿಗಾಗಿ ಇನ್ನೂ ಹೋರಾಟ ಮಾಡಬೇಕೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಬಿ.ವಿ. ವೆಂಕಟರವಣ ಪ್ರಶ್ನಿಸಿದರು. ಊರಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರಕ್ಕಾಗಿ ಗುಂಡಿ ಹೊಡೆಯಲು ಹಲಗೆ ಹೊಡೆಯಲು ಊರೂರಿಗೆ ಸುದ್ದಿ ಮುಟ್ಟಿಸಲು ಪರಿಶಿಷ್ಟರು ಬೇಕು. ಆದರೆ ನಮ್ಮ ಸಮುದಾಯದ ಜನರು ಇನ್ನೂ ಬಡತನ ರೇಖೆಗಿಂತ ಕೆಳಗಿದ್ದಾರೆ. ಅರ್ಹ ಫಲಾನುಭವಿಗಳಿಗೆ ಇಂದಿಗೂ ನಿವೇಶನ ಮತ್ತು ಮನೆಗಳು ಸಿಕ್ಕಿಲ್ಲ. ಪರಿಶಿಷ್ಟರು ಮೃತಪಟ್ಟಾಗ ಅವರಿಗೆ ಅಂತ್ಯಸಂಸ್ಕಾರ ಮಾಡಲು ಸ್ಮಶಾನವೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
‘ಫಲಾನುಭವಿಗಳಿಗೆ ಶೀಘ್ರ ನಿವೇಶನ’
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮನೀಷಾ ಎನ್. ಪತ್ರಿ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಿ.ವಿ. ರಮೇಶ್ ಪ್ರತಿಭಟನಕಾರರ ಮನವಿ ಪತ್ರಗಳನ್ನು ಸ್ವೀಕರಿಸಿದರು. ಈ ವೇಳೆ ಮಾತನಾಡಿದ ತಹಶೀಲ್ದಾರ್ ಮನೀಷ್ ಎನ್. ಪತ್ರಿ ‘ಅರ್ಹ ಫಲಾನುಭವಿಗಳಿಗೆ ಮನೆ ನಿವೇಶನ ಸಾಗುವಳಿ ಪತ್ರ ಮತ್ತು ಹಕ್ಕುಪತ್ರಗಳನ್ನು ವಿತರಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನಿವೇಶನ ಮತ್ತು ಮನೆಗಳನ್ನು ವಿತರಿಸಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.