ಗುಡಿಬಂಡೆ: ತಾಲ್ಲೂಕಿನ ಹಂಪಸಂದ್ರ ಗ್ರಾಮದ ರೈತ ಲಕ್ಷ್ಮಿನಾರಾಯಣ ಅವರ ತೋಟ ಈಗ ಎಲ್ಲರ ಕೇಂದ್ರ ಬಿಂದು. ಅಂದಹಾಗೆ ಅವರ ಈ ತೋಟ ಎಲ್ಲರ ಗಮನ ಸೆಳೆಯಲು ಮತ್ತು ಕೃಷಿ ಪ್ರವಾಸೋದ್ಯಮ ರೂಪು ಪಡೆಯಲು ಕಾರಣ ‘ಖರ್ಜೂರ’.
ಲಕ್ಷ್ಮಿನಾರಾಯಣ್ ಅವರು ನಾಲ್ಕು ಎಕರೆಯಲ್ಲಿ ಬೆಳೆದಿರುವ ಖರ್ಜೂರ ಈಗ ಫಸಲಿಗೆ ಬಂದಿದೆ. ಖರ್ಜೂರದ ಮರಗಳಲ್ಲಿ ಗೊನೆಗಳು ತೊನೆದಾಡುತ್ತಿವೆ. ಈ ಕಾರಣದಿಂದ ಈ ತೋಟ ಎಲ್ಲರ ಗಮನ ಸೆಳೆಯುತ್ತಿದೆ.
ಸಾಮಾನ್ಯವಾಗಿ ತಾಲ್ಲೂಕಿನ ರೈತರು ಹೂ, ಹಣ್ಣು, ತರಕಾರಿಯನ್ನು ಹೆಚ್ಚು ಬೆಳೆಯುವರು. ಅದೇ ರೀತಿ ತಮ್ಮ 10 ಎಕರೆಯಲ್ಲಿ ಲಕ್ಷ್ಮಿನಾರಾಯಣ್ ಟೊಮ್ಯಾಟೊ, ಬದನೆ ಸೇರಿದಂತೆ ವಿವಿಧ ತರಕಾರಿಗಳನ್ನು ಬೆಳೆಯುತ್ತಿದ್ದರು.ಮಾವು, ಸಪೋಟ ಹಣ್ಣಿನ ಬೆಳೆಯೂ ಇತ್ತು. ಆದರೆ ಆದರೆ ಹವಾಮಾನ ವೈಪರೀತ್ಯ, ಮಾರುಕಟ್ಟೆಯ ಏರುಪೇರು, ಕೂಲಿಯಾಳುಗಳ ಕೊರತೆ, ನಿರೀಕ್ಷೆಯಂತೆ ಲಾಭ ಬಾರದೆ ನಷ್ಟದ ಮೇಲೆ ನಷ್ಟ...ಹೀಗೆ ಸಾಲು ಸಾಲು ಪೆಟ್ಟು ತಿಂದ ನಂತರ ಕೃಷಿಯಲ್ಲಿಯೇ ಹೊಸತನವನ್ನು ರೂಢಿಸಿಕೊಳ್ಳಬೇಕು ಎಂದು ನಿಶ್ಚಯಿಸಿದರು.
ಸ್ನೇಹಿತರ ಜೊತೆ ಈ ಬಗ್ಗೆ ಚರ್ಚಿಸಿದರು. ಅವರ ಮಾಹಿತಿ ಪಡೆದರು. ಉಷ್ಣವಲಯದಲ್ಲಿ ಬೆಳೆಯುವ ಖರ್ಜೂರದ ತಳಿಯನ್ನು ಬೆಳೆಯಲು ಮುಂದಾದರು. ಆರು ವರ್ಷಗಳ ಹಿಂದೆ ಗಿಡಗಳನ್ನು ನಾಟಿ ಸಹ ಮಾಡಿದರು. ಈಗ ಅಂದು ನಾಟಿ ಮಾಡಿದ ಖರ್ಜೂರದ ಬೆಳೆಗಳು ಈಗ ಕೈ ತುಂಬಾ ಹಣ ನೀಡುತ್ತಿವೆ. ಅಲ್ಲಿಂದ ಅವರ ಕೃಷಿ ಬದುಕು ಪ್ರಮುಖವಾಗಿ ಬದಲಾಯಿತು. ಕೃಷಿ ಲಾಭದಾಯಕ ಎನಿಸಿತು.
ಲಕ್ಷ್ಮಿನಾರಾಯಣ ಸದ್ಯಕ್ಕೆ ನಾಲ್ಕು ಎಕರೆಯಲ್ಲಿ ‘ಬರಿ’ ಖರ್ಜೂರ ತಳಿಯನ್ನು ಬೆಳೆದಿದ್ದಾರೆ. ನಾಲ್ಕು ಎಕರೆಯಲ್ಲಿ 260 ಗಿಡಗಳಿವೆ. ಅದರಲ್ಲಿ ಕೆಲವು ಗಿಡಗಳು ಸದ್ಯಕ್ಕೆ ಖರ್ಜೂರ ಹಣ್ಣು ಬಿಟ್ಟಿವೆ.
ಹಳದಿ ಬಣ್ಣದ ಖರ್ಜೂರ ಒಂದೆಡೆಯಾದರೆ, ಬೂದು ಬಣ್ಣದ, ಗುಲಾಬಿ ಬಣ್ಣದ ತರೇವಾರಿ ಖರ್ಜೂರದ ಗೊನೆಗಳು ಲಕ್ಷ್ಮಿನಾರಾಯಣ ಅವರ ತೋಟದಲ್ಲಿವೆ.
ಜಾಲತಾಣದಲ್ಲಿಯೂ ಪ್ರಚಾರ: ಲಕ್ಷ್ಮಿನಾರಾಯಣ್ ಅವರು ತಾವು ಬೆಳೆದ ಖರ್ಜೂರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಸಹ ನೀಡಿದ್ದಾರೆ. ಮಾರುಕಟ್ಟೆಗೆ ಜಾಲತಾಣವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಖರ್ಜೂರದ ಚಿತ್ರಗಳನ್ನು ನೋಡಿದ ಜನರು ಖರೀದಿಗೆ ಹಂಪಸಂದ್ರದ ತೋಟಕ್ಕೆ ಎಡತಾಕುತ್ತಿದ್ದಾರೆ. ತೋಟದಲ್ಲಿ 1 ಕೆ.ಜಿ ಖರ್ಜೂರಕ್ಕೆ ₹ 150 ನೀಡಿ ಖರೀದಿಸುತ್ತಿದ್ದಾರೆ. ಕೆಲವು ಸ್ಥಳೀಯ ಹಣ್ಣುಗಳ ಮಾರಾಟಗಾರರು ಸಹ ಖರೀದಿಸಿ ಬೇರೆ ಕಡೆ ಮಾರುತ್ತಿದ್ದಾರೆ.
‘ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದೆ. ನಷ್ಟದ ಮೇಲೆ ನಷ್ಟವಾಯಿತು. ತಡೆದುಕೊಳ್ಳಲಾಗದ ಪರ್ಯಾಯ ಬೆಳೆಯತ್ತ ಗಮನವಹಿಸಿದೆ. ಎಲ್ಲರೂ ಬೆಳೆಯುವ ಬೆಳೆಯನ್ನು ಹೊರತುಪಡಿಸಿ ಉಷ್ಣ ವಲಯದಲ್ಲಿ ಮಾತ್ರ ಬೆಳೆಯುವ ಖರ್ಜೂರ ಬೆಳೆದೆ’ ಎಂದು ಲಕ್ಷ್ಮಿನಾರಾಯಣ್ ‘ಪ್ರಜಾವಾಣಿ’ಗೆ ತಿಳಿಸಿದರು.
ಖರ್ಜೂರ ಪ್ರಿಯ ಗ್ರಾಹಕರು, ತೋಟಕ್ಕೆ ಬಂದು ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ಯೋಜನಾ ಬದ್ಧವಾಗಿ ಕೃಷಿ ಮಾಡಿದರೆ ಬೇಸಾಯ ನಮ್ಮ ಕೈ ಬಿಡುವುದಿಲ್ಲ’ ಎಂದು ಅನುಭವದ ಮಾತು ಹೇಳುವರು.
ಬಯಲು ಸೀಮೆಯ ಗುಡಿಬಂಡೆ ತಾಲ್ಲೂಕಿನ ರೈತರಿಗೆ ಲಕ್ಷ್ಮಿನಾರಾಯಣ್ ಮಾದರಿಯಾಗಿ ಕಾಣುತ್ತಿದ್ದಾಸರೆ. ಗ್ರಾಹಕರಿಗೆ ಸ್ಥಳೀಯವಾಗಿ ಗುಣಮಟ್ಟದ ಖರ್ಜೂರ ನೀಡುತ್ತಿದ್ದಾರೆ.
ಒಳ್ಳೆಯ ಬೆಳೆ ಬಂದಿದೆ’:
‘ಪ್ರತಿ ವರ್ಷದಂತೆ ಈ ವರ್ಷವು ಒಳ್ಳೆಯ ಬೆಳೆ ಆಗಿದೆ. ಅರಬ್ ರಾಷ್ಟ್ರಗಳಲ್ಲಿ ಬೆಳೆಯುವ ಖರ್ಜೂರವನ್ನು ಗುಡಿಬಂಡೆಯಲ್ಲಿ ಬೆಳೆದಿದ್ದು ನನಗೆ ತುಂಬಾ ಸಂತೋಷವಾಗಿದೆ. ಕರ್ನೂಲು ಚೆನ್ನೈ ಗುಂಟೂರು ಮತ್ತಿತರ ಕಡೆಗೂ ರವಾನಿಸುತ್ತಿದ್ದೇನೆ. ಒಂದು ಕೆ.ಜಿಗೆ ₹ 150ರಂತೆ ಮಾರಾಟ ಮಾಡುತಿದ್ದೇನೆ ಎಂದು ರೈತ ಲಕ್ಷ್ಮಿನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.