
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಜಿ.ಪ್ರಭು ಅವರು ಅಧಿಕಾರ ಸ್ವೀಕರಿಸಿ ವಾರವಾಗಿದೆ. ಈಗಾಗಲೇ ಸರಣಿಯಾಗಿ ಇಲಾಖೆಗಳ ಸಭೆ ನಡೆಸಿ ಪ್ರಗತಿ ಪರಿಶೀಲಿಸುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರ ಯೋಜನೆಗಳು ಏನು ಎನ್ನುವ ಬಗ್ಗೆ ‘ಪ್ರಜಾವಾಣಿ’ಯ ಈ ಕಿರು ಸಂದರ್ಶನದಲ್ಲಿ ಜಿಲ್ಲಾಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಂದಾಯ ಇಲಾಖೆ ಮಾತೃಸ್ವರೂಪಿಯಾದುದು. ಇಲಾಖೆಯಲ್ಲಿ ಮಹತ್ವದ ಕೆಲಸಗಳ ನಿರ್ಣಾಯಕ ಹಂತ ತಲುಪಿವೆ. ಜಿಲ್ಲೆಯಲ್ಲಿ 32 ಸಾವಿರ ಮಂದಿಗೆ ಸರ್ಕಾರಿ ಜಮೀನು ಬಗರ್‌ಹುಕುಂ ಯೋಜನೆಯಡಿ ಮಂಜೂರಾಗಿದೆ. ಜಮೀನು ದುರಸ್ತಿಗೊಳಿಸಿ ಹೊಸ ಆರ್‌ಟಿಸಿ, ಸರ್ವೆ ನಂಬರ್ ಸೃಜಿಸಿ ಶಾಶ್ವತ ಹಕ್ಕು ನೀಡುವುದು ನಮ್ಮ ಮೊದಲ ಆದ್ಯತೆ. ಇದರಿಂದ ಬಡ ಕುಟುಂಬಗಳಿಗೆ ಮತ್ತು ಬಹಳ ವರ್ಷಗಳಿಂದ ಜಮೀನಿನ ಹಕ್ಕಿಗೆ ಕಾಯುತ್ತಿದ್ದವರ ಮುಖದಲ್ಲಿ ನಗು ಮೂಡಲಿದೆ. ನಂತರ ಬಗರ್‌ಹುಕುಂ ಸಮಿತಿಗಳಲ್ಲಿ ಎಷ್ಟು ಅರ್ಜಿಗಳು ಬಾಕಿ ಇವೆ ಎನ್ನುವುದನ್ನೂ ಪರಿಶೀಲಿಸಿ ವಿಲೇವಾರಿಗೆ ಕ್ರಮವಹಿಸಲಾಗುವುದು.
ಖಾಸಗಿ ಅಥವಾ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡು ದಶಕಗಳಿಂದ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಈ ಜನರಿಗೆ ಆ ನಿವೇಶನಗಳ ಮೇಲೆ ಹಕ್ಕು ಇಲ್ಲ. ಅನಧಿಕೃತ ಎನಿಸಿವೆ. ಕಂದಾಯ ಗ್ರಾಮಗಳ ಸೃಜನೆಯ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಲಾಗುವುದು.
ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿಸಲಾಗುತ್ತದೆ. ಈ ಮೂಲಕ ಕೊಟ್ಟಿ ಕಡತಗಳನ್ನು ಸೃಷ್ಟಿಸುವುದಕ್ಕೆ ಮತ್ತು ಭೂಮಿ ಕಬಳಿಸುವ ಕೃತ್ಯಕ್ಕೆ ಶಾಶ್ವತ ತಡೆ ಬೀಳುತ್ತದೆ. ಈ ಮಹತ್ವದ ಕೆಲಸಗಳಿಂದ ಜಿಲ್ಲೆಯ ರೈತರಿಗೆ, ಬಡವರಿಗೆ ಅನುಕೂಲವಾಗಲಿದೆ.
ಜಮೀನು ಖರೀದಿಸಿದ ನಂತರದ ಖಾತೆ ಪ್ರಕ್ರಿಯೆಗಳು ಸರಾಗವಾಗಿ ಆಗಬೇಕು, ಮ್ಯುಟೇಷನ್, ಸರ್ವೆ–ಹೀಗೆ ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳು, ಇವುಗಳ ಸಮಸ್ಯೆಗಳ ಪರಿಹಾರವನ್ನು ಆದ್ಯತೆಯಾಗಿ ಪರಿಗಣಿಸಲಾಗುವುದು.
ಸಂಧ್ಯಾ ಸುರಕ್ಷೆ, ವಿಧವಾ ವೇತನ, ಅಂಗವಿಕಲರ ಮಾಸಾಶನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣೆಯನ್ನು ಅರ್ಹರಿಗೆ ಮನೆ ಬಾಗಿಲಿಗೆ ತಲುಪಿಸಲು ಅಭಿಯಾನ ನಡೆಸಲಾಗುವುದು.
ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ದೊರೆಯಬೇಕು. ಬಡವರು ಸೇರಿದಂತೆ ಎಲ್ಲ ವರ್ಗದವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಜಿಲ್ಲಾ ಆಸ್ಪತ್ರೆಯವರೆಗೆ ಉತ್ತಮ ಚಿಕಿತ್ಸೆ ಸಿಗಬೇಕು. ಈ ಬಗ್ಗೆ ಮೇಲುಸ್ತುವಾರಿ ಅತ್ಯಗತ್ಯ. ಒಂದೊಂದು ಇಲಾಖೆಗಳ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಅಭಿವೃದ್ಧಿಯ ಮುನ್ನೋಟಗಳು ಇವೆ. ಪ್ರಮುಖವಾಗಿ ಎಲ್ಲ ಇಲಾಖೆಗಳ ಸೇವೆಗಳು ಜನಸಾಮಾನ್ಯರಿಗೆ ಯಾವುದೇ ಅಡೆತಡೆಗಳು ಇಲ್ಲದಂತೆ ದೊರೆಯಬೇಕು. ಕಾರ್ಯಕ್ರಮಗಳು ಅನುಷ್ಠಾನವಾಗಬೇಕು.
ಜಿಲ್ಲಾಧಿಕಾರಿಯಾಗಿ ಎಲ್ಲ ಇಲಾಖೆಗಳಲ್ಲಿ ಶಿಸ್ತು ತರಲಾಗುವುದು. ಇದಕ್ಕೆ ಕಠಿಣ ಕ್ರಮ ಅಗತ್ಯ ಎನಿಸಿದರೆ ಆ ರೀತಿಯಲ್ಲಿಯೇ ಕ್ರಮವಹಿಸಲಾಗುತ್ತದೆ. ಕೆಲಸ ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಜನಸಾಮಾನ್ಯರು ಹೋದರೆ ಅವರಿಗೆ ಅಲ್ಲಿನ ಸಿಬ್ಬಂದಿ ಸ್ಪಂದಿಬೇಕು. ಸ್ಪಂದಿಸದಿದ್ದರೆ ಜನರು ನನ್ನ ಸೇರಿದಂತೆ ಮೇಲಧಿಕಾರಿಗಳನ್ನು ಸಂಪರ್ಕಿಸಬಹುದು. ಜಿಲ್ಲಾ ಉಸ್ತುವಾರಿ ಸಚಿವರು, ಎಲ್ಲ ಶಾಸಕರು, ಸಂಸದರ ಸಹಕಾರದಲ್ಲಿ ಜಿಲ್ಲೆಯಲ್ಲಿ ಜನಸ್ನೇಹಿ ಆಡಳಿತ ವ್ಯವಸ್ಥೆ ಜಾರಿಗೊಳಿಸಲಾಗುವುದು ನನ್ನ ಮುಖ್ಯ ಆದ್ಯತೆ. ಈ ದಿಕ್ಕಿನಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವೆ.
ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದಕ್ಕಿಂತ ಕ್ಷೇತ್ರ ಭೇಟಿ ಅತಿ ಮುಖ್ಯವಾಗುತ್ತದೆ. ತಾಲ್ಲೂಕು ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡುವೆ. ಕುಂದುಕೊರತೆ ಸಭೆಗಳಲ್ಲಿ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಾಣಿಸಲಾಗುವುದು. ಇದರಿಂದ ಸಮಸ್ಯೆಗಳ ಪರಿಹಾರದ ಜೊತೆಗೆ ವ್ಯವಸ್ಥೆಯ ಮೇಲೆ ಜನರಿಗೆ ಭರವಸೆಗಳು ಹೆಚ್ಚುತ್ತವೆ. ಕುಂದುಕೊರತೆ ಸಭೆಗಳಲ್ಲಿ ಪಾಲ್ಗೊಂಡು ಸಮಸ್ಯೆಗಳಿಗೆ ಜನರು ಪರಿಹಾರ ಕಂಡುಕೊಳ್ಳಬಹುದು.
ಜನರಿಗೆ ಎಲ್ಲ ಇಲಾಖೆಗಳ ಸೇವೆ ಬಹಳ ಮುಖ್ಯ. ಮುಂದಿನ 15 ರಿಂದ 20 ವರ್ಷಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಜಿಲ್ಲೆಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು. ಈ ದಿಕ್ಕಿನಲ್ಲಿಯೇ ನಮ್ಮ ನಡೆ ಇರಲಿದೆ. ವಿಶೇಷವಾಗಿ ಡೀಮ್ಡ್ ಅರಣ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಅರಣ್ಯ ಇಲಾಖೆ ಸಹಯೋಗದಲ್ಲಿ ಪರಿಹರಿಸಲಾಗುತ್ತದೆ.
2.33 ಲಕ್ಷ ಪೌತಿ ಖಾತೆ
ಅಜ್ಜ ತಾತನ ಜಮೀನುಗಳನ್ನು ಈಗಿನ ವಾರಸುದಾರರು ಖಾತೆ ಮಾಡಿಸಿಕೊಂಡಿಲ್ಲ. ಹೀಗೆ ಜಿಲ್ಲೆಯಲ್ಲಿ 2.33 ಲಕ್ಷ ಪೌತಿ ಖಾತೆಗಳು ಇವೆ. ಪೌತಿ ಖಾತೆ ಆಂದೋಲನ ನಡೆಸಿ ನೈಜ ವಾರಸುದಾರರಿಗೆ ಆ ಜಮೀನುಗಳ ಖಾತೆ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.
ಸರ್ಕಾರಿ ಯೋಜನೆಗಳಿಗೆ ಭೂಮಿ
ಶಾಲೆ ಅಂಗನವಾಡಿ ಕೈಗಾರಿಕೆ ನೀರಾವರಿ ಸೇರಿದಂತೆ ಸರ್ಕಾರದ ಯೋಜನೆಗಳಿಗೆ ಅಗತ್ಯವಿರುವ ಭೂಮಿ ಕೊಡಲಾಗುವುದು ಎಂದು ಜಿ.ಪ್ರಭು ತಿಳಿಸಿದರು. ನೀರಾವರಿ ಮತ್ತು ಕೈಗಾರಿಕಾ ಯೋಜನೆಗಳಿಗೆ ಆದ್ಯತೆ ಮೇರೆಗೆ ಭೂಸ್ವಾಧೀನ ಮಾಡುತ್ತೇವೆ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿರುವ ಮತ್ತು ಅಗತ್ಯವಿರುವ ಯೋಜನೆಗಳಿಗೆ ಭೂಮಿ ಒದಗಿಸಿಕೊಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.