ADVERTISEMENT

ದುಶ್ಚಟ; ಕುಟುಂಬಕ್ಕೆ ಆಪತ್ತು

ತಂಬಾಕು ಬಳಕೆ ವಿರುದ್ಧ ಜಿಲ್ಲಾಡಳಿತದಿಂದ ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 2:18 IST
Last Updated 26 ನವೆಂಬರ್ 2021, 2:18 IST
ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಥಾಕ್ಕೆ ಡಾ.ಜಿ. ಶ್ರೀನಿವಾಸ್ ಚಾಲನೆ ನೀಡಿದರು. ಡಾ.ರುದ್ರಮೂರ್ತಿ,‌ ಡಾ.ಯಲ್ಲಾ ರಮೇಶ್ ಬಾಬು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುಳಾ, ಹರೀಶ್ ಇದ್ದರು
ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಥಾಕ್ಕೆ ಡಾ.ಜಿ. ಶ್ರೀನಿವಾಸ್ ಚಾಲನೆ ನೀಡಿದರು. ಡಾ.ರುದ್ರಮೂರ್ತಿ,‌ ಡಾ.ಯಲ್ಲಾ ರಮೇಶ್ ಬಾಬು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುಳಾ, ಹರೀಶ್ ಇದ್ದರು   

ಚಿಕ್ಕಬಳ್ಳಾಪುರ: ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ. ಯುವಜನರು ತಂಬಾಕು ಉತ್ಪನ್ನಗಳ ಸೇವನೆಯ ಚಟಕ್ಕೆ ಬಲಿಯಾಗದೆ ಆರೋಗ್ಯಕರ ಜೀವನ ನಡೆಸಬೇಕು. ಆಗ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ರಾಜ್ಯ ಎನ್‌ಸಿಡಿ ಕೋಶದ ಜಂಟಿ ನಿರ್ದೇಶಕ ಡಾ.ಜಿ. ಶ್ರೀನಿವಾಸ್ ಹೇಳಿದರು.

ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಗುಲಾಬಿ ಆಂದೋಲನ ಕಾರ್ಯಕ್ರಮದ ಅಂಗವಾಗಿ ನಡೆದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ದುಶ್ಚಟಗಳು ಕುಟುಂಬ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಜಾಹೀರಾತು ಪ್ರದರ್ಶನ ನಿಷೇಧಿಸಲಾಗಿದೆ. ತಂಬಾಕು ಉತ್ಪನ್ನ ಸೇವನೆ ತ್ಯಜಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಜನರು ಮತ್ತು ಸಾರ್ವಜನಿಕರು ಪಾತ್ರವಹಿಸಬೇಕು ಎಂದರು.

ADVERTISEMENT

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರುದ್ರಮೂರ್ತಿ ಮಾತನಾಡಿ, 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವುದು ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸಾಗಾಣಿಕೆ ಕಾರ್ಯಗಳಿಗೆ ಮಕ್ಕಳನ್ನು ಬಳಸಿಕೊಳ್ಳುವುದನ್ನು ತಡೆಗಟ್ಟುವುದು ಗುಲಾಬಿ ಆಂದೋಲನದ ಉದ್ದೇಶವಾಗಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಮಾತನಾಡಿ, ತಂಬಾಕಿನಲ್ಲಿ 3,000ದಿಂದ 4,000ದಷ್ಟು ರಾಸಾಯನಿಕ ವಸ್ತುಗಳಿವೆ. 60 ರೀತಿಯ ಮಾರಕ ಕಾಯಿಲೆಗೆ ತುತ್ತಾಗುವ ಸಂಭವವಿದೆ.ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ 156ರಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ತಂಬಾಕು ಚಟಗಳಿಗೆ ದಾಸರಾದ ವ್ಯಸನಿಗಳು ಈ ಕೇಂದ್ರದ ಸದುಪಯೋಗ ಪಡಿಸಿಕೊಂಡು ವ್ಯಸನ ಮುಕ್ತರಾಗಬಹುದು ಎಂದರು.

ಕಾರ್ಯಕ್ರಮದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು. ಸಾರ್ವಜನಿಕರಿಗೆ ಗುಲಾಬಿ ಹೂ ನೀಡಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ರಾಘವೇಂದ್ರ, ಸಮಾಜ ಕಾರ್ಯಕರ್ತ ಮಂಜುನಾಥ್, ಶಿಕ್ಷಣ ಇಲಾಖೆಯ ವಿಷಯ ನಿರೀಕ್ಷಕರಾದ ಅಂಜಿನಪ್ಪ ಹಾಗೂ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.