ADVERTISEMENT

ಕ್ಷೇತ್ರದಲ್ಲಿ ಹೆಚ್ಚುತ್ತಿದೆ ಜಾತಿ ರಾಜಕೀಯ: ಆರೋಪ

ಕ್ಷೇತ್ರದಲ್ಲಿ ಹೆಚ್ಚುತ್ತಿದೆ ಜಾತಿ ರಾಜಕೀಯ; ಬಿಜೆಪಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಖಂಡರ ಆರೋಪ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 6:56 IST
Last Updated 12 ಆಗಸ್ಟ್ 2025, 6:56 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಆವುಲಕೊಂಡರಾಯಪ್ಪ ಮಾತನಾಡಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಆವುಲಕೊಂಡರಾಯಪ್ಪ ಮಾತನಾಡಿದರು   

ಚಿಕ್ಕಬಳ್ಳಾಪುರ: ಡಾ.ಕೆ.ಸುಧಾಕರ್ ಶಾಸಕ ಮತ್ತು ಸಚಿವರಾಗಿದ್ದ ವೇಳೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ರಾಜಕೀಯ ಅವಕಾಶಗಳನ್ನು ದೊರಕಿಸಿಕೊಟ್ಟಿದ್ದಾರೆ ಎಂದು ಚಿಕ್ಕಬಳ್ಳಾಪುರ ಟಿಎಪಿಸಿಎಂಎಸ್ ಅಧ್ಯಕ್ಷ ಆವುಲಕೊಂಡರಾಯಪ್ಪ ತಿಳಿದರು. 

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂಬೇಡ್ಕರ್ ಭವನ, ಬಾಬೂ ಜಗಜೀವನ ರಾಂ ಭವನ ಮತ್ತು ವಾಲ್ಮೀಕಿ ಭವನಕ್ಕೆ ಜಾಗ ನೀಡಿ, ಅನುದಾನ ದೊರಕಿಸಿಕೊಟ್ಟಿದ್ದಾರೆ. ಆದರೆ ಈಗಿನ ಶಾಸಕರಿಗೆ ಸುಧಾಕರ್ ದೊರಕಿಸಿಕೊಟ್ಟ ಅನುದಾನದಲ್ಲಿ ಭವನ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.

ಸುಧಾಕರ್ ಅವರ ಜೊತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಇದ್ದಾರೆ. ಕ್ಷೇತ್ರದಲ್ಲಿ ಜಾತಿ ರಾಜಕೀಯ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಈ ಹಿಂದೆ ಈ ರೀತಿ ಸನ್ನಿವೇಶ ಇರಲಿಲ್ಲ. ಶಾಸಕರ ವರ್ತನೆ ಇದೇ ರೀತಿಯಲ್ಲಿ ಮುಂದುವರಿದರೆ ಹೋರಾಟ ನಡೆಸಬೇಕಾಗುತ್ತದೆ ಎಂದರು.

ADVERTISEMENT

ನಗರಸಭೆ ಉಪಾಧ್ಯಕ್ಷ ಜೆ.ನಾಗರಾಜ್, ಸುಧಾಕರ್ ಸೋಲು ಕಂಡ ಕೆಲವೇ ತಿಂಗಳಲ್ಲಿ ಸಂಸದರಾಗಿ ಆಯ್ಕೆಯಾದರು. ಅವರ ಜನಪ್ರಿಯತೆಯನ್ನು ದಬ್ಬಾಳಿಕೆ ಮೂಲಕ ಮಣಿಸಬಹುದು ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಎಂದರು.

‘ಮೃತ ಚಾಲಕ ಬಾಬು ಅವರ ಬಗ್ಗೆ ಮತ್ತು ಆ ಕುಟುಂಬದ ಬಗ್ಗೆ ಸಹಾನುಭೂತಿ ಇದೆ. ಅವರ ಕುಟುಂಬದೊಂದಿಗೆ ನಾವು ಇದ್ದೇವೆ. ಆದರೆ ಸಾವಿನ ಪ್ರಕರಣದಲ್ಲಿ ರಾಜಕೀಯ ಮಾಡಿ ತಮ್ಮ ಬೆಳೆ ಬೇಯಿಸಿಕೊಳ್ಳುವವರು ಉತ್ತಮ ನಾಗರಿಕರಾಗಲು ಸಾಧ್ಯವೇ ಇಲ್ಲ’ ಎಂದರು.

ನಗರಸಭೆ ಸದಸ್ಯ ಸತೀಶ್, ನಗರಸಭೆ ಮಾಜಿ ಅಧ್ಯಕ್ಷ ಮುನಿಕೃಷ್ಣ, ಶಿವಕುಮಾರ್, ಗಂಗರೇಕಾಲುವೆ ನರಸಿಂಹಮೂರ್ತಿ ಸೇರಿದಂತೆ ಬಿಜೆಪಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಖಂಡರು ಮಾಧ್ಯಮಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.