ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರವು ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದು ಒಂದೂವರೆ ದಶಕ ಪೂರ್ಣವಾಗಿದೆ. ಆದರೂ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಗಳಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ಇಂದಿಗೂ ನಿರ್ಮಾಣವಾಗಿಲ್ಲ.
ನಗರ ಹೊರವಲಯದ ಚಿತ್ರಾವತಿ ಬಳಿಯ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿರುವ ತಗ್ಗು ದಿನ್ನೆಗಳ ಖಾಲಿ ಜಾಗವೇ ಚಾಲನಾ ಪಥ ಎನಿಸಿದೆ. ಬೈಕ್, ಕಾರು ಸೇರಿದಂತೆ ವಾಹನಗಳ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಬರುವ ಪರೀಕ್ಷಾರ್ಥಿಗಳಿಗೆ ‘ಈ ಕಡೆಯಿಂದ ಆ ಕಡೆಗೆ ಬನ್ನಿ’ ಎಂದು ಹೇಳುವ ಸಾರಿಗೆ ಇಲಾಖೆ ಅಧಿಕಾರಿಗಳು, ವೈಜ್ಞಾನಿಕ ಮತ್ತು ಮಾನದಂಡಗಳನ್ನು ಅನುರಿಸಿ ಚಾಲನಾ ಪರೀಕ್ಷೆ ನಡೆಸುವುದಿಲ್ಲ. ಇದು ಪರೀಕ್ಷಾರ್ಥಿಗಳ ಸಾಮರ್ಥ್ಯದ ಮೇಲೂ ಅನುಮಾನಗಳನ್ನು ಮೂಡಿಸುತ್ತದೆ.
ಇದಕ್ಕೆ ಮುಖ್ಯ ಕಾರಣ ಪರೀಕ್ಷೆಗೆ ಅಗತ್ಯವಾದ ಚಾಲನಾ ಪಥ ಇಂದಿಗೂ ಜಿಲ್ಲಾ ಕೇಂದ್ರದಲ್ಲಿ ಇಲ್ಲದಿರುವುದು. ನಗರದ ಆರ್‌ಟಿಒ ಕಚೇರಿ ಆವರಣದಲ್ಲಿರುವ ಚಾಲನಾ ಪಥವನ್ನು ನೋಡಿದರೆ ಯಾವ ರೀತಿ ಚಿಕ್ಕಬಳ್ಳಾಪುರದಲ್ಲಿ ಪರೀಕ್ಷೆಗಳು ನಡೆಯುತ್ತಿವೆ ಎನ್ನುವುದು ಅರ್ಥವಾಗುತ್ತದೆ.
ನಾಲ್ಕು ಚಕ್ರದ ವಾಹನಗಳ ಚಾಲನಾ ಪರೀಕ್ಷೆಯ ವೇಳೆ ಅಭ್ಯರ್ಥಿಯು 8 ಆಕಾರದ ಪಥದಲ್ಲಿ ವಾಹನಗಳನ್ನು ಚಲಾಯಿಸಬೇಕು. ಚಾಲನಾ ಪಥದ ಎರಡೂ ಬದಿಯಲ್ಲಿ ತ್ರಿಕೋನ ಆಕಾರದ ಪುಟ್ಟ ಕಂಬಗಳು ಇರುತ್ತವೆ. ಇವುಗಳಿಗೆ 6ಕ್ಕಿಂತ ಹೆಚ್ಚು ಕಂಬಗಳಿಗೆ ವಾಹನ ತಾಕಿದರೆ ಅನುತ್ತೀರ್ಣ. ಅಭ್ಯರ್ಥಿಯು ನಿಗದಿ ಜಾಗದಲ್ಲಿಯೇ ವಾಹನವನ್ನು ನಿಲ್ಲಿಸಬೇಕು...ಹೀಗೆ ಸಂಚಾರ ನಿಯಮಗಳ ಪಾಲನೆಯ ವಿಚಾರವಾದ ಹಲವು ವಿಚಾರಗಳು ಈ ಚಾಲನಾ ಪಥದಲ್ಲಿ ಇರುತ್ತವೆ. ದ್ವಿಚಕ್ರ ವಾಹನಗಳ ಚಾಲನಾ ಪರವಾನಗಿ ಪಡೆಯಲು ಸಹ ಮಾನದಂಡಗಳು ಇವೆ.
ಒಬ್ಬ ಅಭ್ಯರ್ಥಿ ಪ್ರಾದೇಶಿಕ ಸಾರಿಗೆ ಇಲಾಖೆಯು ನಿಗದಿಗೊಳಿಸಿದ ಈ ಪರೀಕ್ಷೆಗಳಲ್ಲಿ ಉತ್ತೀರ್ಣನಾದರೆ ಮಾತ್ರ ಚಾಲನಾ ಪರವಾನಗಿ ನೀಡಲಾಗುತ್ತದೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಈ ಯಾವ ಪರೀಕ್ಷೆಗಳು ನಡೆಯುವುದಿಲ್ಲ. ನೆಪಮಾತ್ರಕ್ಕೆ ಪರೀಕ್ಷೆ ಎನ್ನುವ ಸ್ಥಿತಿ ಇದೆ.
ರಾಜ್ಯದ ಎಲ್ಲ ಆರ್‌ಟಿಒ ಕಚೇರಿಗಳ ವ್ಯಾಪ್ತಿಯಲ್ಲಿ ಸ್ವಯಂ ಚಾಲಿತ ಹೈಟೆಕ್ ಚಾಲನಾ ಪಥ ನಿರ್ಮಾಣ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿತ್ತು. ಆದರೆ ಚಿಕ್ಕಬಳ್ಳಾಪುರದಲ್ಲಿ ಇಂದಿಗೂ ಪಥ ನಿರ್ಮಾಣ ಸಾಧ್ಯವಾಗಿಲ್ಲ.
ಚಿಂತಾಮಣಿಯಲ್ಲಿ ನಿರ್ಮಾಣವಾಗುತ್ತಿದೆ ಪಥ: ಜಿಲ್ಲೆಯ ವಾಣಿಜ್ಯ ನಗರ ಎನಿಸಿರುವ ಚಿಂತಾಮಣಿಯಲ್ಲಿ ಚಾಲನಾ ಪರೀಕ್ಷಾ ಪಥ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ.
ಚಿಕ್ಕಬಳ್ಲಾಪು–ಚಿಂತಾಮಣಿ ರಸ್ತೆಯಲ್ಲಿ ತಿಮ್ಮಸಂದ್ರ ಬಳಿ ಚಾಲನಾ ಪಥ ನಿರ್ಮಾಣ ಕಾಮಗಾರಿ ಕೆಲವು ತಿಂಗಳುಗಳಿಂದ ನಡೆಯುತ್ತಿದೆ. ಇದಕ್ಕೂ ಮುನ್ನ ಪ್ರಾದೇಶಿಕ ಸಾರಿಗೆ ಅಧಿಕಾರಿ ಚಿಂತಾಮಣಿ ನಗರದಲ್ಲಿ ಇತ್ತು. ಆಗ ರಸ್ತೆಯಲ್ಲಿಯೇ ಆರ್‌ಟಿಒ ಇನ್‌ಸ್ಪೆಕ್ಟರ್‌ಗಳು ಚಾಲನಾ ಪರೀಕ್ಷೆ ನಡೆಸುತ್ತಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಾಲನಾ ಪಥವು ಚಿಂತಾಮಣಿಯದ್ದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.