ADVERTISEMENT

ಬರದ ನಾಡಿನಲ್ಲಿ ಭಾರಿ ಮಳೆ- ನಾಲ್ಕು ದಶಕಗಳ ನಂತರ ತುಂಬಿದ ಅಮಾನಿಕೆರೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 6:42 IST
Last Updated 20 ನವೆಂಬರ್ 2021, 6:42 IST
ಚಿಕ್ಕಬಳ್ಳಾಪುರ ಅಮಾನಿಗೋಪಾಲಕೃಷ್ಣ ಕೆರೆ ಕೋಡಿಬಿದ್ದಿರುವುದು
ಚಿಕ್ಕಬಳ್ಳಾಪುರ ಅಮಾನಿಗೋಪಾಲಕೃಷ್ಣ ಕೆರೆ ಕೋಡಿಬಿದ್ದಿರುವುದು   

ಚಿಕ್ಕಬಳ್ಳಾಪುರ: ಭಾರಿ ಮಳೆಯ ಕಾರಣದಿಂದ ಜಿಲ್ಲೆಯಲ್ಲಿ ಜನರು ತತ್ತರಿಸುತ್ತಿದ್ದಾರೆ. ಎಲ್ಲೆಡೆ ಮಳೆ ವ್ಯಾಪಕವಾಗಿದೆ. ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಬರದ ನಾಡಿನ ಹಣೆಪಟ್ಟಿಯ ಜಿಲ್ಲೆಯ ಜನರು ಇಷ್ಟೊಂದು ಮಳೆ ಸುರಿದಿದ್ದಕ್ಕೆ ಮೊದಲು ಸಂತೋಷಪಟ್ಟರು. ಆದರೆ ಈಗ ಬಿಟ್ಟೂ ಬಿಡದಂತೆ ಸುರಿಯುತ್ತಿರುವ ಮಳೆ ಜಿಲ್ಲೆಯಲ್ಲಿ ರೈತರ ಬದುಕನ್ನು ಹಿಸುಕುತ್ತಿದೆ.

275 ಹೆಕ್ಟೇರ್ ವಿಸ್ತೀರ್ಣದ ಮತ್ತು ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಕೆರೆ ಎನಿಸಿರುವ ಅಮಾನಿಗೋ‍ಪಾಲಕೃಷ್ಣ ಕೆರೆ ಕೋಡಿ ಹರಿಯುತ್ತಿದೆ. ನಾಲ್ಕು ದಶಕಗಳ ಹಿಂದೆ ಈ ಕೆರೆ ಕೋಡಿ ಬಿದ್ದಿತ್ತು. ಕೆರೆ ಕೋಡಿ ಹರಿಯುತ್ತಿರುವುದನ್ನು ವೀಕ್ಷಿಸಲು ಜನರು ಹೆಚ್ಚು ಬರುತ್ತಿದ್ದಾರೆ. ಮಂಚನಬಲೆ ಕೆರೆಯೂ 30 ವರ್ಷಗಳ ತರುವಾಯ ತುಂಬಿ ಹರಿಯುತ್ತಿದೆ.ಕಂದವಾರ ಕೆರೆ ತುಂಬಿ ಹರಿಯುತ್ತಿದ್ದು ಆ ನೀರು ಬಿಬಿ ರಸ್ತೆಗೆ ನುಗ್ಗಿದೆ.

ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ಮಳೆ ನೀರು ತುಂಬಿ ತುಳುಕುತ್ತಿದೆ. ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣ ಕೆರೆಗೆ ನೀರು ಹರಿಯುವ ಕಾಲುವೆಯು ಕುಸಿಯುವ ಭೀತಿಯಿಂದ ಬಿಬಿ ರಸ್ತೆಯಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ. ಬಿಬಿ ರಸ್ತೆಯ ಹರ್ಷೋದಯ ಮತ್ತು ಗುರುರಾಜ ಕಲ್ಯಾಣ ಮಂಟಪ ಪೂರ್ಣವಾಗಿ ಮಳೆಯಿಂದ ಜಲಾವೃತವಾಗಿದೆ. ಸಮೀಪದ ಬೈಕ್ ಶೋರೂಂಗಳು, ಅಂಗಡಿಗಳ ಎದುರು ನೀರು ನಿಂತಿದೆ.

ADVERTISEMENT

ಶಿಡ್ಲಘಟ್ಟ ರಸ್ತೆಯ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಸುತ್ತಮುತ್ತ ಮಳೆ ನೀರು ನಿಂತಿದೆ. ಗ್ರಾಮೀಣ ಭಾಗಗಳಲ್ಲಿ ರಾಗಿ ಮತ್ತು ತೋಟಗಾರಿಕಾ ಬೆಳೆಗಳು ನಾಶವಾಗಿವೆ.ಚಿಕ್ಕಬಳ್ಳಾಪುರ ಜೈಭೀಮ್ ನಗರ ಸೇರಿದಂತೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.

ಅಮಾನಿಗೋಪಾಲಕೃಷ್ಣಕೆರೆ, ಕಂದವಾರ ಕೆರೆ ಸೇರಿದಂತೆ ತಾಲ್ಲೂಕಿನ ಕೆರೆಗಳ ಸುತ್ತ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಕೆರೆ ನೀರಿನಲ್ಲಿ ಮೀನುಗಾರಿಕೆ ಹೆಚ್ಚಿತ್ತು. ಈ ಕಾರಣದಿಂದ ಅನಾಹುತ ಸಂಭವಿಸಬಹುದು ಎಂದು ಪೊಲೀಸರು ಈ ಕ್ರಮಗಳನ್ನುಕೈಗೊಂಡಿದ್ದಾರೆ.

31 ಕಾಳಜಿ ಕೇಂದ್ರ ಆರಂಭ: ಜಿಲ್ಲಾಡಳಿತ 31 ಕಡೆಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಿದೆ. ಒಟ್ಟು 4,920 ಜನರಿಗೆ ಈ ಕೇಂದ್ರಗಳಲ್ಲಿ ವಸತಿ ವ್ಯವಸ್ಥೆ ಇದೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 4, ಚಿಂತಾಮಣಿ ತಾಲ್ಲೂಕಿನಲ್ಲಿ 6, ಗೌರಿಬಿದನೂರಿನ 9, ಬಾಗೇಪಲ್ಲಿ 3, ಶಿಡ್ಲಘಟ್ಟ 4 ಮತ್ತು ಗುಡಿಬಂಡೆ ತಾಲ್ಲೂಕಿನ ಎರಡು ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.