ADVERTISEMENT

ಸಮಾಜದ ಏಳ್ಗೆಗೆ ಶಿಕ್ಷಣ ಅಗತ್ಯ: ವಾಲ್ಮೀಕಿ ಸಂಜಯಕುಮಾರನಂದ ಸ್ವಾಮೀಜಿ

ಚಂದನದೂರು ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 2:11 IST
Last Updated 29 ನವೆಂಬರ್ 2020, 2:11 IST
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ   

ಗೌರಿಬಿದನೂರು: ‘ವಾಲ್ಮೀಕಿ ಸಮುದಾಯ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಉತ್ತಮ ಶಿಕ್ಷಣ ಪಡೆಯಬೇಕು. ಯುವಜನತೆಯಲ್ಲಿ ಒಗ್ಗಟ್ಟು ಮೂಡಿ ಸರ್ಕಾರಿ ಸವಲತ್ತು ಪಡೆಯಲು ಪ್ರಯತ್ನಿಸಬೇಕಾಗಿದೆ’ ಎಂದು ವಾಲ್ಮೀಕಿ ಸಂಜಯಕುಮಾರನಂದ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಚಂದನದೂರು ಗ್ರಾಮದಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಾಲ್ಮೀಕಿ ಸಮುದಾಯವು ತನ್ನದೇ ಆದ ಚರಿತ್ರೆ ಹೊಂದಿದೆ. ಸಮುದಾಯದಲ್ಲಿ ವಾಲ್ಮೀಕಿ ಮಹರ್ಷಿ ಜನಿಸಿ ಈ ಸಮುದಾಯಕ್ಕೆ ಮತ್ತಷ್ಟು ಗೌರವ ಲಭಿಸಿದೆ. ಪೋಷಕರು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡಿಸಬೇಕು. ಯಾವುದೇ ಕಾರಣಕ್ಕೂ ಮೊಬೈಲ್ ಗೀಳು ಹಚ್ಚದೆ ಅವರ ಸುಂದರವಾದ ಬದುಕನ್ನು ಉಳಿಸುವ ಪ್ರಯತ್ನ ಮಾಡಬೇಕು. ಸರ್ಕಾರ ನೀಡುವ ಉಚಿತ ಶಿಕ್ಷಣ ಹಾಗೂ ಸೌಲಭ್ಯ ಪಡೆದು ಅವರ ಬಾಳನ್ನೂ ಹಸನಾಗಿಸಬೇಕು ಎಂದು ತಿಳಿಸಿದರು.

ADVERTISEMENT

ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ, ವಾಲ್ಮೀಕಿ ಸಮುದಾಯವು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕವಾಗಿ ಮುಂದುವರಿಯಬೇಕಾಗಿದೆ. ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಸರ್ಕಾರ ನೀಡುವ ಸವಲತ್ತು ಬಳಸಿಕೊಂಡು ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದು ಹೇಳಿದರು.

ವಾಲ್ಮೀಕಿ ಸಮುದಾಯದ ಮುಖಂಡ ಆರ್. ಅಶೋಕ್‍ಕುಮಾರ್ ಮಾತನಾಡಿ, ಸಮುದಾಯದ ಯುವಕರು ಇತ್ತೀಚಿನ ದಿನಗಳಲ್ಲಿ ಶಿಕ್ಷಣದಲ್ಲಿ ಸಾಧನೆ ಮಾಡುತ್ತಿರುವುದು ಶ್ಲಾಘನೀಯ. ಸರ್ಕಾರವು ಅನೇಕ ಸವಲತ್ತುಗಳನ್ನು ನೀಡುತ್ತಿದೆ. ಅದರ ಬಗ್ಗೆ ಅರಿತು ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.

ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಎದ್ದುಕಾಣುತ್ತಿದೆ. ಇದನ್ನು ದೂರ ಮಾಡಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕಾಗಿದೆ. ಸರ್ಕಾರವು ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಾಡಿದ್ದು, ಇದರಲ್ಲಿನ ಸವಲತ್ತುಗಳ ಬಗ್ಗೆ ತಿಳಿದುಕೊಳ್ಳಬೇಕು. ಉದ್ಯೋಗದ ಜತೆಗೆ ಸಣ್ಣಮಟ್ಟದ ಕೈಗಾರಿಕೆ ಸ್ಥಾಪನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ವಾಲ್ಮೀಕಿ ಸಮುದಾಯದ ತಾಲ್ಲೂಕು ಅಧ್ಯಕ್ಷ ಬಾಬಣ್ಣ, ಮುಖಂಡ ರಂಗನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಸಿ.ಆರ್. ನರಸಿಂಹಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ, ತಾ.ಪಂ. ಅಧ್ಯಕ್ಷ ಆರ್. ಲೋಕೇಶ್, ಮುಖಂಡರಾದ ಪ್ರಕಾಶ್‍ ರೆಡ್ಡಿ, ನಿರಂಜನ್, ಎನ್. ಸಿದ್ದರಾಮಯ್ಯ, ನರಸಿಂಹಮೂರ್ತಿ, ಲೋಕೇಶ್, ಬೈಚಾಪುರ ಮಂಜುನಾಥ್, ಕೆ.ವಿ. ಪ್ರಸನ್ನಕುಮಾರ್, ಪ್ರಸನ್ನ, ಕಲ್ಮಣಿ ಲಕ್ಷ್ಮೀನಾಗರಾಜು, ಲಕ್ಷ್ಮೀನರಸಮ್ಮ, ರಾಮಕೃಷ್ಣಪ್ಪ, ಅಶ್ವತ್ಥಪ್ಪ, ಸಂತೋಷ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.