ADVERTISEMENT

ಗೌರಿಬಿದನೂರು| 'ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ'

ಮಾದರ ಮಹಾಸಭಾ ನೋಂದಣಿ ಅಭಿಯಾನದಲ್ಲಿ ಸಚಿವ ಕೆ.ಎಚ್. ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 6:52 IST
Last Updated 2 ಡಿಸೆಂಬರ್ 2025, 6:52 IST
ಗೌರಿಬಿದನೂರು ನಗರದ ಡಾ ಎಚ್ ಎನ್ ಕಲಾ ಭವನದಲ್ಲಿ ಮಾದರ ಮಹಾಸಭಾ ಸದಸ್ಯತ್ವ ನೋಂದಣಿ ಕಾರ್ಯಕ್ರಮ
ಗೌರಿಬಿದನೂರು ನಗರದ ಡಾ ಎಚ್ ಎನ್ ಕಲಾ ಭವನದಲ್ಲಿ ಮಾದರ ಮಹಾಸಭಾ ಸದಸ್ಯತ್ವ ನೋಂದಣಿ ಕಾರ್ಯಕ್ರಮ   

ಗೌರಿಬಿದನೂರು: ಸಮಾಜದಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಮುಂದಿನ ಪೀಳಿಗೆಯ ಅಭ್ಯುದಯಕ್ಕಾಗಿ ನಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕು ಎಂದು ಸಚಿವ ಹಾಗೂ ಕರ್ನಾಟಕ ಮಾದರ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಕೆ.ಎಚ್. ಮುನಿಯಪ್ಪ ಪ್ರತಿಪಾದಿಸಿದರು. 

ಇಲ್ಲಿನ ಡಾ.ಎಚ್.ಎಚ್. ಕಲಾಭವನದಲ್ಲಿ ಕರ್ನಾಟಕ ಮಾದರ ಮಹಾಸಭಾ ತಾಲ್ಲೂಕು ಘಟಕದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾದ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. 

ಮಾದ ಮಹಾಸಭಾ ರಾಜ್ಯದಲ್ಲಿ ಮಾದಿಗ ಸಮುದಾಯದ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಶೈಕ್ಷಣಿಕ ವಿಚಾರ ಸಂಬಂಧ ಮಾದಿಗ ಮಹಾಸಭಾವು ಮಹತ್ತರವಾದ ಬದ್ಧತೆ ಹೊಂದಿದೆ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ನಿರಂತರ ಹೋರಾಟ ಮಾಡುವ ಮೂಲಕ ಸಮುದಾಯದ ಹಕ್ಕುಗಳಿಗಾಗಿ ಶ್ರಮಿಸುತ್ತಿದೆ ಎಂದರು.

ADVERTISEMENT

ಮಾದಿಗ ಸಮುದಾಯ ಪಾಲನಹಳ್ಳಿ ಮಠದ ಸಿದ್ದರಾಜು ಮಹಾಸ್ವಾಮೀಜಿ ಆರ್ಶೀವಚನ ನೀಡಿ, ಜಾಂಬವ ಪುರಾಣವು ಅತ್ಯಂತ ಶ್ರೇಷ್ಠ ಪುರಾಣಗಳಲ್ಲಿ ಒಂದಾಗಿದೆ ಎಂಬುದು ದೇವನಾಗರಿ ಲಿಪಿಯಲ್ಲಿ ಉಲ್ಲೇಖವಾಗಿದೆ. ಸಮುದಾಯದವರು ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. 

ರಾಜ್ಯದಲ್ಲಿ ನಮ್ಮ ಸಮುದಾಯದ ಜನರು ಹೆಚ್ಚು ಮಂದಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಕೆ.ಎಚ್. ಮುನಿಯಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ನಮ್ಮ ಸಮುದಾಯದವರೆಲ್ಲರೂ ಒಟ್ಟುಗೂಡಿ, ಧ್ವನಿಯೆತ್ತಬೇಕು. ಈ ಬಗ್ಗೆ ಸಮುದಾಯದವರೆಲ್ಲರೂ ಜಾಗೃತರಾಗಬೇಕು ಎಂದು ಹೇಳಿದರು. 

ಮಾತಂಗ ಫೌಂಡೇಷನ್ ಅಧ್ಯಕ್ಷ ಆರ್.ಲೋಕೇಶ್, ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಕಲಿನಾಯಕನಹಳ್ಳಿ ಮುನಿಯಪ್ಪ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಐಐಟಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಸಂಕೇತ್‍ರಾಜ್, ಕರಾಟೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ನಕ್ಷತ್ರ ಅವರನ್ನು ಸನ್ಮಾನಿಸಲಾಯಿತು. 

ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಡಿ.ಕೆ.ಶಿವಪ್ಪ, ಕಾಳೇನಹಳ್ಳಿ ನರಸಿಂಹಪ್ಪ, ರಾಮಕೃಷ್ಣಪ್ಪ, ಕೃಷ್ಣಪ್ಪ, ಶ್ರೀನಿವಾಸ್, ವೆಂಕಟೇಶ್, ರಾಮಾಂಜಿನಮ್ಮ, ಅರುಂಧತಿ, ಡಿ.ನರಸಿಂಹಮೂರ್ತಿ, ಎಚ್.ಎಲ್. ವೆಂಕಟೇಶ್, ಮಲ್ಲಸಂದ್ರ ಗಂಗಾಧರಪ್ಪ, ಹುಲಿಕುಂಟೆ ಅಶ್ವತ್ಥಪ್ಪ, ಮೈಲಾರಪ್ಪ, ನಾಗಾರ್ಜುನ್, ನಂಜುಂಡಪ್ಪ, ಜಯರಾಮ್, ಪ್ರಸನ್ನ, ಜಿ.ನರಸಿಂಹಮೂರ್ತಿ, ಕಾಂತರಾಜು, ವೆಂಕಟೇಶ್ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.