ಚಿಂತಾಮಣಿ: ನಗರದಲ್ಲಿ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಶುಕ್ರವಾರ ನಗರ ಹಾಗೂ ತಾಲ್ಲೂಕಿನಾದ್ಯಂತ ಭಕ್ತಿ ಹಾಗೂ ಸಡಗರ ಸಂಭ್ರಮದಿಂದ ಆಚರಿಸಿದರು.
ದೊಡ್ಡಪೇಟೆಯ ಜಾಮಿಯಾ ಮಸೀದಿಯಲ್ಲಿ ಜಮಾವಣೆಗೊಂಡರು. ಅಲ್ಲಿಂದ ಫಾತೇಹಖಾನಿ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ಯುವಕರು ಬಿಳಿಬಣ್ಣದ ಕುರ್ತಾಧರಿಸಿ, ಕೈಯಲ್ಲಿ ಹಸಿರು ಝಂಡಾ ಬೀಸುತ್ತಾ ಮುಸ್ಲಿಂ ಧರ್ಮದ ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಚಿಣ್ಣರು ಮೈಸೂರು ಹುಲಿ ಟಿಪ್ಪು ಸುಲ್ತಾನ್ ವೇಷ ಧರಿಸಿ ಗಮನಸೆಳೆದರು.
ಮೆಕ್ಕಾಮದೀನಾಸ್ಥಬ್ದಚಿತ್ರವನ್ನು ಹಾಗೂ ವಿವಿಧ ವೇಷಭೂಷಣಗಳನ್ನು ಹೊತ್ತ ಮೆರವಣಿಗೆ ಊರಮುಂದೆ, ಅಗ್ರಹಾರ, ನೆಕ್ಕುಂದಿಪೇಟೆ, ಮಹಬೂಬ್ನಗರ, ದೊಡ್ಡಪೇಟೆ, ಅಜಾದ್‌ಚೌಕ, ಎಂ.ಜಿ.ರಸ್ತೆ. ಚೇಳೂರು ವೃತ್ತ, ಕೋಲಾರ ವೃತ್ತದಿಂದ ವಾಪಸ್ಎಂ.ಜಿ ರಸ್ತೆ, ಕಾರ್‌ಸ್ಟಾಂಡ್, ಪಿಸಿಆರ್ ಕಾಂಪ್ಲೆಕ್ಸ್ ಬಾಗೇಪಲ್ಲಿ ವೃತ್ತದ ಮೂಲಕ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬೃಹತ್ ಮೆರವಣಿಗೆಯಲ್ಲಿ ಹಿರಿಯರು, ಕಿರಿಯರು ಎನ್ನದೆ ಎಲ್ಲ ವಯಸ್ಸಿನ ವ್ಯಕ್ತಿಗಳು ಸಡಗರ-ಸಂಭ್ರಮದಿಂದ ಭಾಗವಹಿಸಿದ್ದರು. ಸಾವಿರಾರು ಜನ ಭಾಗವಹಿಸಿದ್ದ ಮೆರವಣಿಗೆ ಶಾಂತಿಯುತವಾಗಿ ಈದ್ಗಾ ಮೈದಾನ ಸೇರಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸಾವಿರಾರು ಜನರು ಮೆರವಣಿಗೆ ವೀಕ್ಷಿಸಿದರು.
ಈದ್ಗಾ ಮೈದಾನದಲ್ಲಿ ಧರ್ಮಗುರು ಉಪನ್ಯಾಸ ನೀಡಿ, ಈದ್‌ಮಿಲಾದ್ ಶಾಂತಿ ಸಂದೇಶವನ್ನು ಸಾರುವ ಹಬ್ಬವಾಗಿದೆ. ಹಜರತ್ ಮಹಮದ್ ಪೈಗಂಬರ್ ಅವರು ಶಾಂತಿಪ್ರಿಯರು. ಸದ್ಗುಣಭರಿತ ವ್ಯಕ್ತಿತ್ವವನ್ನು ಹೊಂದಿದ್ದು ದಾನ ಧರ್ಮ, ಪುಣ್ಯ ಕಾರ್ಯಗಳಿಗೆ ಪ್ರೇರಣೆ ನೀಡುವಂತಹ ಮಹಾತ್ಮರಾಗಿದ್ದರು. ಇಸ್ಲಾಂ ಧರ್ಮವು ಶಾಂತಿಯ ಸಂದೇಶವನ್ನು ನೀಡುತ್ತದೆ. ಇಸ್ಲಾಂ ಧರ್ಮದಲ್ಲಿ ಹಿಂಸೆಗೆ ಸ್ಥಳವೇ ಇಲ್ಲ. ಮುಸ್ಲಿಮರು ಶಾತಿಯುತವಾಗಿ ಎಲ್ಲ ಸಮುದಾಯಗಳೊಂದಿಗೆ ಸಹಬಾಳ್ವೆ ನಡೆಸಬೇಕು ಎಂದರು.
ಶಾಂತಿ ಸಂದೇಶವನ್ನು ಸಾರಿದ ಮಹ್ಮದ್ ಪೈಗಂಬರ್ ಅವರ ಜೀವನ ಚರಿತ್ರೆಯನ್ನು ವ್ಯಾಸಂಗ ಮಾಡಬೇಕು. ಅವರ ಜೀವನ ಚರಿತ್ರೆಯನ್ನು ಓದದೆ ಧರ್ಮ ಬಗ್ಗೆ ತಪ್ಪಾಗಿ ತಿಳಿದುಕೊಳ್ಳಬಾರದು ಎಂದು ಸಲಹೆ ನೀಡಿದರು. ಸಾವಿರಾರು ಜನರು ಸಾಮೂಹಿಕ ನಮಾಜ್ ಸಲ್ಲಿಸಿದರು.
ಜಾಮಿಯಾ ಮಸೀದಿಯ ಅಧ್ಯಕ್ಷ ಮೂನ್ ಸ್ಟಾರ್ ಗೌಸ್‌ಪಾಷಾ, ಮುಖಂಡ ಸಮೀವುಲ್ಲಾ, ಮಹಮದ್ ಇನಾಯತ್ ಉಲ್ಲಾ, ಮುಜೀರ್ ಅಹಮದ್, ಶೇಖ್ ಸಾಧಿಕ್ ರಜ್ವಿ, ಅಕ್ಮಲ್ ಖಾನ್, ಟಿಪ್ಪು, ಸಿಕಂದರ್ ಬಾಬು, ಜಮೀರ್‌ಪಾಷಾ, ಪರ್ವೀಜ್, ಅಲ್ತಾಫ್ ಪಾಷಾ, ಮೌಲಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.