ADVERTISEMENT

ಮತಗಟ್ಟೆಗಳಲ್ಲಿ ಸುರಕ್ಷತೆಗೆ ಒತ್ತು ನೀಡಿ: ಆರ್.ಲತಾ

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 13:33 IST
Last Updated 13 ಅಕ್ಟೋಬರ್ 2020, 13:33 IST
ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಅ.28 ರಂದು ನಡೆಯುವ ಚುನಾವಣೆಯ ಮತದಾನ ಕೇಂದ್ರಗಳನ್ನು ಸೋಂಕು ನಿವಾರಕ ದ್ರಾವಣದಿಂದ ಶುಚಿಗೊಳಿಸುವ ಮೂಲಕ ಕೋವಿಡ್-19 ಸಂದರ್ಭದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಆರ್. ಲತಾ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಮತಗಟ್ಟೆ ಕೇಂದ್ರಗಳಲ್ಲಿ ಕುಡಿಯುವ ನೀರು, ವಿದ್ಯುತ್, ರ‍್ಯಾಂಪ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನಿಗಾ ವಹಿಸಬೇಕು. ಮತದಾರರನ್ನು ತಪಾಸಣೆ ಮಾಡಿದ ಬಳಿಕವೇ ಮತದಾನಕ್ಕೆ ಅವಕಾಶ ನೀಡಬೇಕು’ ಎಂದು ತಿಳಿಸಿದರು.

ADVERTISEMENT

‘ಪ್ರತಿಯೊಂದು ಮತಗಟ್ಟೆ ಕೇಂದ್ರಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮತದಾರರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಮತಗಟ್ಟೆ ಕೇಂದ್ರಗಳಲ್ಲಿ ಹೆಚ್ಚು ಜನರು ಸೇರದಂತೆ ಮತಗಟ್ಟೆ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಹೇಳಿದರು.

ಕಂಟ್ರೋಲ್ ರೂಂ ಸ್ಥಾಪನೆ
‘ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ನೀತಿ ಸಂಹಿತೆ ಉಲಂಘನೆಗಳ ಪ್ರಕರಣಗಳ ಕುರಿತು ಸಾರ್ವಜನಿಕರು ದೂರು ನೀಡಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ. ಅಕ್ಟೋಬರ್ 28ರಂದು ಬೆಳಿಗ್ಗೆ 8 ರಿಂದ ಸಂಜೆ 5ರ ವರೆಗೆ ಮತದಾನದ ಪ್ರಕ್ರಿಯೆ ನಡೆಯಲಿದೆ’ ಎಂದರು.

‘ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಚುನಾವಣಾ ಆಯೋಗ ನಿಗದಿಪಡಿಸಿರುವ 9 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದು. ಜಿಲ್ಲೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಅಮರೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.