ADVERTISEMENT

ವೇತನ ಪರಿಷ್ಕರಣೆಗೆ ನೌಕರರ ಒತ್ತಾಯ

ಅಖಿಲ ಭಾರತ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದಿಂದ ಎರಡು ದಿನಗಳ ಬ್ಯಾಂಕ್‌ ಮುಷ್ಕರಕ್ಕೆ ಕರೆ, ಬಾಗಿಲು ಮುಚ್ಚಿದ ಶಾಖೆಗಳು

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 12:08 IST
Last Updated 31 ಜನವರಿ 2020, 12:08 IST
ನಗರದಲ್ಲಿ ಬಿ.ಬಿ.ರಸ್ತೆಯಲ್ಲಿರುವ ಎಸ್‌ಬಿಐ ಪ್ರಧಾನ ಶಾಖೆಯ ಮುಂದೆ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ನಗರದಲ್ಲಿ ಬಿ.ಬಿ.ರಸ್ತೆಯಲ್ಲಿರುವ ಎಸ್‌ಬಿಐ ಪ್ರಧಾನ ಶಾಖೆಯ ಮುಂದೆ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.   

ಚಿಕ್ಕಬಳ್ಳಾಪುರ: ವೇತನ ಪರಿಷ್ಕರಣೆ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು ಶುಕ್ರವಾರ ಬ್ಯಾಂಕ್‌ ಶಾಖೆಗಳನ್ನು ಬಂದ್‌ ಮಾಡುವ ಮೂಲಕ ಮುಷ್ಕರ ನಡೆಸಿದರು.

ನಗರದಲ್ಲಿ ಖಾಸಗಿ ವಲಯದ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆದರೆ ಪ್ರಮುಖ ಬ್ಯಾಂಕ್‌ಗಳಾದ ಕೆನರಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮೊದಲಾದ ರಾಷ್ಟ್ರೀಕೃತ ಬ್ಯಾಂಕ್‌ ಶಾಖೆಗಳು ಬಾಗಿಲು ತೆರೆಯಲಿಲ್ಲ. ಮುಷ್ಕರದ ವಿಷಯ ತಿಳಿಯದೇ ಬ್ಯಾಂಕ್‌ಗೆ ಬಂದಿದ್ದ ಗ್ರಾಮೀಣ ಭಾಗದ ಜನರು, ಬರಿಗೈಲಿ ವಾಪಸ್‌ ಹೋಗುತ್ತಿದ್ದ ದೃಶ್ಯ ಕಂಡುಬಂತು. ಹಲವು ಎಟಿಎಂಗಳಲ್ಲಿ ಹಣ ಲಭ್ಯವಿರದ ಕಾರಣ ಗ್ರಾಹಕರು ಪರದಾಡಬೇಕಾಯಿತು.

ನಗರದಲ್ಲಿ ಶುಕ್ರವಾರ ಬಿ.ಬಿ.ರಸ್ತೆಯಲ್ಲಿರುವ ಎಸ್‌ಬಿಐ ಪ್ರಧಾನ ಶಾಖೆಯ ಮುಂದೆ ನೆರೆದ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ADVERTISEMENT

‘ಬ್ಯಾಂಕ್ ಸಿಬ್ಬಂದಿ ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಮಾತುಕತೆ ವಿಫಲವಾಗಿರುವುದರಿಂದ ಒಂಬತ್ತು ಬ್ಯಾಂಕ್‌ ಕಾರ್ಮಿಕ ಸಂಘಟನೆಗಳನ್ನು ಒಳಗೊಂಡಿರುವ ಅಖಿಲ ಭಾರತ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ’ ಎಂದು ಪ್ರತಿಭಟನಾಕಾರರು ಹೇಳಿದರು.

‘ಸುಮಾರು 26 ತಿಂಗಳಿಂದ ವೇತನ ಪರಿಷ್ಕರಣೆ ಆಗಿಲ್ಲ. ಅದು ಶೀಘ್ರದಲ್ಲಿ ಜಾರಿಗೊಳಿಸಬೇಕು. ಕನಿಷ್ಠ ವೇತನ ನೀತಿ ಆಧರಿಸಿ ಗ್ರೇಡ್ ಎ ಅಧಿಕಾರಿಗಳ ಸಮಾನಾಂತರ ವೇತನ ನೀಡಬೇಕು. ಕಾಲಕಾಲಕ್ಕೆ ವೇತನ ಹೆಚ್ಚಳ ಮಾಡಬೇಕು’ ಎಂದು ನೌಕರರು ಆಗ್ರಹಿಸಿದರು.

‘ಸಾರ್ವಜನಿಕ ವಲಯ ಬ್ಯಾಂಕುಗಳನ್ನು ವಿಲೀನ ಮಾಡುವ ಮೂಲಕ ಖಾಸಗೀಕರಣ ಮಾಡುವುದು ನಿಲ್ಲಿಸಬೇಕು. ವಾರದಲ್ಲಿ ಎರಡು ದಿನ ರಜೆ ನೀಡಬೇಕು. ವಿಶೇಷ ಭತ್ಯೆಯನ್ನು ಮೂಲ ವೇತನದ ಜತೆಗೆ ವಿಲೀನಗೊಳಿಸಬೇಕು. ಹೊಸ ಪಿಂಚಣಿ ನಿಯಮವನ್ನು ರದ್ದುಪಡಿಸಿ ಹಳೆ ಪಿಂಚಣಿ ನಿಯಮವನ್ನು ಮುಂದುವರೆಸಬೇಕು. ಮೂಲ ಕೆಲಸಗಳಿಗೆ ಹೊರಗುತ್ತಿಗೆ ನೇಮಕವನ್ನು ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದರು.

ಬ್ಯಾಂಕ್‌ ನೌಕರರಾದ ಸುನಿಲ್ ವಾಸಗಿ, ರಜನಿಕಾಂತ್, ಶ್ರೀನಾಥ್, ಶಶಿಕುಮಾರ್, ಭಾರ್ಗವದಾಸ್‌, ವೇಣು, ಸಂಧ್ಯಾ ಈ ವೇಳೆ ಹಾಜರಿದ್ದರು.

ಈ ಮುಷ್ಕರ ಶನಿವಾರ ಕೂಡ ಮುಂದುವರಿಯಲಿದೆ. ಭಾನುವಾರ ರಜಾ ದಿನವಾದ್ದರಿಂದ ಮೂರು ದಿನ ಬ್ಯಾಂಕ್‌ಗಳ ವಹಿವಾಟು ಸ್ಥಗಿತಗೊಳ್ಳುವ ಕಾರಣಕ್ಕೆ ಗ್ರಾಹಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.