ADVERTISEMENT

ಕಬಡ್ಡಿಗೆ ಪ್ರೋತ್ಸಾಹ, ಸಂತಸದ ವಿಚಾರ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಪ್ರಯುಕ್ತ ರಾಜ್ಯ ಮಟ್ಟದ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 16:28 IST
Last Updated 25 ಡಿಸೆಂಬರ್ 2019, 16:28 IST
ಕಬಡ್ಡಿ ಆಟದಲ್ಲಿ ತಲ್ಲಿನರಾದ ಆಟಗಾರರು
ಕಬಡ್ಡಿ ಆಟದಲ್ಲಿ ತಲ್ಲಿನರಾದ ಆಟಗಾರರು   

ಚಿಕ್ಕಬಳ್ಳಾಪುರ: ‘ಕಬಡ್ಡಿಯಂತ ಹಳ್ಳಿಯ ಸೊಗಡಿನ ಕ್ರೀಡೆಗಳಿಗೆ ಇವತ್ತು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿರುವುದು ಸಂತಸದ ವಿಚಾರ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ ಮಂಜುನಾಥ್ ಹೇಳಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಪ್ರಯುಕ್ತ ನಗರದ ಬಿ.ಬಿ ರಸ್ತೆಯ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಬಿಜೆಪಿ ಯುವ ಮೋರ್ಚಾ, ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಭಾರತೀಯ ಪುರಾತನ ಕ್ರೀಡೆಯಾಗಿರುವ ಕಬಡ್ಡಿಗೆ 4000 ವರ್ಷಗಳ ಇತಿಹಾಸವಿದೆ. ಕಬಡ್ಡಿಯಲ್ಲಿ ನಾಲ್ಕು ಬಗೆಗಳಿವೆ. 2016ರ ಒಲಂಪಿಕ್ಸ್‌ನಲ್ಲಿ ಭಾರತ ಕಬಡ್ಡಿಯಲ್ಲಿ ಚಿನ್ನ ಗೆದ್ದಿತ್ತು. ಭಾರತ ಹೊರತುಪಡಿಸಿದರೆ ಇರಾನ್, ಥೈಲ್ಯಾಂಡ್, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಕಬಡ್ಡಿ ಕಾಣಬಹುದಾಗಿದೆ. ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಿದ್ದ ಗ್ರಾಮೀಣ ಕ್ರೀಡೆಗಳು ದಿನದಿಂದ ದಿನಕ್ಕೆ ನಶಿಸಿ ಹೋಗುತ್ತಿವೆ. ಮುಂದಿನ ದಿನಗಳಲ್ಲಿ ಕಣ್ಮರೆಯಾಗುವ ಆತಂಕವಿರುವ ಹೊತ್ತಿನಲ್ಲಿ ಇಂತಹ ಪಂದ್ಯಾವಳಿ ಆಯೋಜಿಸುತ್ತಿರುವುದು ಶ್ಲಾಘನೀಯ’ ಎಂದು ತಿಳಿಸಿದರು.

ADVERTISEMENT

‘ದೇಶ ಕಂಡ ಅಪ್ರತಿಮ ರಾಜಕೀಯ ಮುತ್ಸದಿಯಾಗಿದ್ದ ವಾಜಪೇಯಿ ಅವರು ಭೌತಿಕವಾಗಿ ನಮ್ಮಿಂದ ದೂರವಾದರೂ ಅವರು ಬದುಕಿದ ದಾರಿ ಪ್ರತಿಯೊಬ್ಬರಿಗೆ ಆದರ್ಶವಾಗಿದೆ. ಅಂದಿನ ಜನಸಂಘ ಹಾಗೂ ಈಗಿನ ಬಿಜೆಪಿ ಪಕ್ಷದ ಪ್ರಮುಖ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ವಾಜಪೇಯಿ ಅವರು ಸರ್ವ ಪಕ್ಷಗಳ ನಾಯಕರೊಂದಿಗೆ ರಾಜಕೀಯದಾಚೆಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಎಲ್ಲರಿಂದಲೂ ಅಜಾತಶತ್ರು ಎಂದು ಕರೆಯಿಸಿಕೊಂಡಿದ್ದರು. ಪ್ರಧಾನಿಯಾಗಿದ್ದ ವೇಳೆ ಅವರು ತೆಗೆದುಕೊಂಡ ಹಲವು ದಿಟ್ಟ ನಿರ್ಧಾರಗಳು ದೇಶದ ರಾಜಕೀಯ ಚರಿತ್ರೆಯ ಮೈಲುಗಲ್ಲುಗಳಾಗಿವೆ’ ಎಂದು ಸ್ಮರಿಸಿಕೊಂಡರು.

‘ಅವರಿಲ್ಲದೆ ಇಡೀ ರಾಜಕೀಯ ವ್ಯವಸ್ಥೆ ಬಡವಾಗಿದೆ. ದೇಶದ ರಾಜಕೀಯದಲ್ಲಿ ಮುಂದೆ ವಾಜಪೇಯಿ ಅವರಂತಹ ಮೇಧಾವಿ ಹುಟ್ಟಿ ಬರಲು ಸಾಧ್ಯವಿಲ್ಲ. ಕವಿ ಹೃದಯಿ, ದಿಟ್ಟ ಆಡಳಿತಗಾರ, ಅತ್ಯಂತ ಸ್ನೇಹಿಮಯಿ ನಾಯಕನನ್ನು ಕಳೆದುಕೊಂಡು ದೇಶ ಇಂದು ಅಕ್ಷರಶಃ ಅನಾಥವಾಗಿದೆ’ ಎಂದರು.
ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸಂದೀಪ್ ರೆಡ್ಡಿ, ಮಂಡಲ ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್, ನಗರ ಘಟಕದ ಅಧ್ಯಕ್ಷ ಮಂಜುನಾಥ್, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ, ಬಿಜೆಪಿ ಯುವ ಮೋರ್ಚಾ ನಗರ ಮಂಡಲ ಅಧ್ಯಕ್ಷ ವಿ.ಮಧುಚಂದ್ರ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಬಿ.ಕಿರಣ್, ಮುಖಂಡರಾದ ಪ್ರೇಮಲೀಲಾ ವೆಂಕಟೇಶ್, ಎ.ಬಾಲಕೃಷ್ಣ, ನಾರಾಯಣಸ್ವಾಮಿ, ಕೃಷ್ಣಾರೆಡ್ಡಿ, ಶ್ರೀನಿವಾಸ್‌ ರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.