ADVERTISEMENT

ಶಿಡ್ಲಘಟ್ಟ: ರೈತರ ಪರ್ಯಾಯ ಪರೇಡ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 2:28 IST
Last Updated 20 ಜನವರಿ 2021, 2:28 IST
ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ನಡೆದ ರೈತ ಸಂಘದ ಸದಸ್ಯರ ಪೂರ್ವಭಾವಿ ಸಭೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿದರು
ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ನಡೆದ ರೈತ ಸಂಘದ ಸದಸ್ಯರ ಪೂರ್ವಭಾವಿ ಸಭೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿದರು   

ಶಿಡ್ಲಘಟ್ಟ: ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಜ.26ರಂದು ರಾಷ್ಟ್ರೀಯ ಧ್ವಜಗಳೊಂದಿಗೆ ರೈತ ಸಂಘದ ಸದಸ್ಯರು ಟ್ರ್ಯಾಕ್ಟರ್- ಟಿಪ್ಪರ್ ಇತರೆ ವಾಹನಗಳೊಂದಿಗೆ ಪರ್ಯಾಯ ಪರೇಡ್ ನಡೆಸಲಿದ್ದೇವೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ರೈತ ಸಂಘದ ಸದಸ್ಯರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಬೆಂಗಳೂರಿನಲ್ಲಿ ಪರ್ಯಾಯ ಪರೇಡ್ ನಡೆಸಲು ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ ಮತ್ತು ಮಹಿಳಾ ಸಂಘಟನೆಗಳ ಸಮನ್ವಯಸಮಿತಿ ‘ಸಂಯುಕ್ತ ಹೋರಾಟ- ಕರ್ನಾಟಕ’ ಮುಂದಾಗಿದೆ. ಸಂಯುಕ್ತ ಆಶ್ರಯದಲ್ಲಿ ನಾವು ಪರ್ಯಾಯ ಪರೇಡ್‌ನಲ್ಲಿ ಭಾಗವಹಿಸಲಿದ್ದೇವೆ’ ಎಂದರು.

ADVERTISEMENT

‘ರೈತ ವಿರೋಧಿ, ಕಾರ್ಮಿಕ ವಿರೋಧಿ, ದಲಿತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿದೆಹಲಿಯ ಗಡಿಯಲ್ಲಿ 50 ದಿನಗಳಿಂದ ಚಾರಿತ್ರಿಕ ಹೋರಾಟ ನಡೆಯುತ್ತಿದೆ.500 ರೈತ ಸಂಘಟನೆಗಳ ವೇದಿಕೆಯಾಗಿರುವ ‘ಸಂಯುಕ್ತ ಕಿಸಾನ್ ಮೋರ್ಚಾ’ ಕರೆಯ ಮೇರೆಗೆ ರೈತ ಮತ್ತು ಕಾರ್ಮಿಕರಪರೇಡ್‌ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆ, ಭೂಸ್ವಾಧೀನ ಕಾಯ್ದೆ, ಕೃಷಿ ಮಾರುಕಟ್ಟೆ ಕಾಯ್ದೆ ಮತ್ತು ಜಾನುವಾರು ಹತ್ಯೆ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೆ ಕರ್ನಾಟಕದಲ್ಲಿ ಹೋರಾಟವನ್ನು ಮುಂದುವರೆಸಲು ತೀರ್ಮಾನಿಸಿದ್ದೇವೆ. ಅದರಂತೆ ಜ.26ರಂದು ತುಮಕೂರು ರಸ್ತೆಯ ನೈಸ್ ಜಂಕ್ಷನ್ ನಲ್ಲಿ ರೈತರ ವಾಹನಗಳು ಒಟ್ಟುಗೂಡಿಸಿ, ಅಲ್ಲಿಂದ ಮಧ್ಯಾಹ್ನ ಸ್ವಾತಂತ್ರ್ಯ ಉದ್ಯಾನದ ತನಕ ಪರೇಡ್ ನಡೆಯಲಿದೆ. ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವರು’ ಎಂದುಹೇಳಿದರು.

ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ, ಸದಸ್ಯರಾದ ವೇಣುಗೋಪಾಲ್, ರಾಮಚಂದ್ರಪ್ಪ, ರಾಮಕೃಷ್ಣಪ್ಪ, ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.