ಬಾಗೇಪಲ್ಲಿ: ರೈತರ ಜಮೀನುಗಳನ್ನು ಹಾಗೂ ಸರ್ಕಾರಿ ಭೂಮಿ, ಕೆರೆ-ಕುಂಟೆ, ಕಾಲುವೆಗಳನ್ನು ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಲಾಯಿತು.
ಹಸಿರುಸೇನೆ ರಾಜ್ಯ ಸಂಚಾಲಕ ಎಸ್.ಲಕ್ಷ್ಮಣರೆಡ್ಡಿ ಮಾತನಾಡಿ, ತಾಲ್ಲೂಕಿನ ಕೆಲ ರೈತರ ಜಮೀನುಗಳನ್ನು ರಿಯಲ್ ಎಸ್ಟೇಟ್ ಮಾಫಿಯಾದವರು ಒತ್ತುವರಿ ಮಾಡಿದ್ದಾರೆ. ಕೆಲ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ಖಾತೆಗಳನ್ನುಸೃಷ್ಟಿ ಮಾಡಿದ್ದಾರೆ. ಇದರಿಂದ ಜಮೀನು ಅನ್ಯರ ಪಾಲಾಗಿವೆ ಎಂದು ದೂರಿದರು.
ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಕೂಡಲೇ ರೈತರ ಜಮೀನುಗಳನ್ನು ಉಳಿಸಬೇಕು. ಸರ್ಕಾರಿ ಜಮೀನು, ಕೆರೆ-ಕುಂಟೆ, ಕಾಲುವೆಗಳನ್ನು ಅಧಿಕಾರಿಗಳು ವಶಪಡಿಸಿಕೊಳ್ಳಬೇಕು. ತ್ಯಾಜ್ಯ ವಿಲೇವಾರಿ ಘಟಕದ ಪಕ್ಕದಲ್ಲಿ ನಿವೇಶನ ಮಾಡಬಾರದು ಎಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೆ ಪಟ್ಟಣದ ಹೊರವಲಯದ ತ್ಯಾಜ್ಯ ವಿಲೇವಾರಿ ಘಟಕದ ಪಕ್ಕದಲ್ಲಿ ನಿವೇಶನಗಳನ್ನು ಮಾಡಲು ಹೊರಟಿರುವುದು ಖಂಡನೀಯ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಇದರಿಂದ ಕೃಷಿಕರು ಇದ್ದಾರೆ. ಕೃಷಿವಲಯವು ಸಂಕಷ್ಟದಲ್ಲಿ ಇದೆ. ಅಗತ್ಯ ವಸ್ತುಗಳ ಏರಿಕೆಯಿಂದ ಜನಸಾಮಾನ್ಯರು ತೊಂದರೆ ಪಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಬೆಲೆ ಏರಿಕೆ ಕಡಿಮೆ ಮಾಡಬೇಕು. ಜಿಲ್ಲಾಧಿಕಾರಿ ಸಮಸ್ಯೆ ಬಗೆಹರಿಸುವವರೆಗೂ ಧರಣಿ ಮುಂದುವರೆಸುತ್ತೇವೆ ಎಂದು ತಿಳಿಸಿದರು.
ರೈತ ಸಂಘ ರಾಜ್ಯ ಸಂಚಾಲಕಿ ಸಿ.ಉಮಾ ಮಾತನಾಡಿ, ಕಸಬಾ ಹೋಬಳಿ ಕಾರಕೂರು ಗ್ರಾಮದ ಸರ್ವೆ 75, 75/8 ರ ರೈತ ನಾನರಾಜು ಅವರ ಜಮೀನನ್ನು ರಿಯಲ್ ಎಸ್ಟೇಟ್ ಮಾಫಿಯಾದವರು ಅಕ್ರಮವಾಗಿ ಕ್ರಯ ಮತ್ತು ಸ್ಕೆಚ್‌ಗಳನ್ನು ಬದಲಾಯಿಸಿದ್ದಾರೆ. ಕೂಡಲೇ ತನಿಖೆ ಮಾಡಿ, ರೈತರಿಗೆ ನ್ಯಾಯ ಒದಗಿಸಬೇಕು. ಶಂಕಂವಾರಿಪಲ್ಲಿ ಗ್ರಾಮದ 1.20ಕುಂಟೆ ಜಮೀನು ಸ್ಮಶಾನಕ್ಕೆ ಮೀಸಲಿಟ್ಟಿರುವುದನ್ನು ಕೆಲವರು ಒತ್ತುವರಿ ಮಾಡಿದ್ದಾರೆ ಎಂದು ದೂರಿದರು.
ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಟಿ.ರಘುನಾಥರೆಡ್ಡಿ, ಎ.ವೆಂಕಟರಾಮಯ್ಯ, ಬಿ.ಎಂ.ಬಯ್ಯಪ್ಪ, ಟಿ.ಆರ್.ಪ್ರಮೀಳ, ಶ್ಯಾಮಲ, ನಾರಾಯಣಸ್ವಾಮಿ, ಶ್ರೀನಿವಾಸ್, ಚಾಂದ್‍ಭಾಷ, ವೆಂಕಟರೆಡ್ಡಿ, ಎಸ್.ಎಂ.ನಾಗರಾಜು, ವೆಂಕಟರವಣ, ಬಿ.ವೆಂಕಟರಾಯಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.