ADVERTISEMENT

ಚಿಕ್ಕಬಳ್ಳಾಪುರ: ಮಿನಿ ಡ್ಯಾಮ್ ನಿರ್ಮಾಣಕ್ಕೆ ಒತ್ತಾಯ

ಅಲಕಾಪುರ ಗೇಟ್‌ನಿಂದ ತಾಲ್ಲೂಕು ಕಚೇರಿಯವರೆಗೆ ಬೃಹತ್ ಬೈಕ್ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 4:25 IST
Last Updated 11 ಸೆಪ್ಟೆಂಬರ್ 2025, 4:25 IST
ದ್ಯಾವಪ್ಪನ ಕೆರೆಯ ಬಳಿ ಮಿನಿ ಡ್ಯಾಮ್ ನಿರ್ಮಾಣಕ್ಕೆ ಒತ್ತಾಯಿಸಿ ಅಖಿಲ ಕರ್ನಾಟಕ ರೈತ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅಲಕಾಪುರ ಗೇಟ್‌ನಿಂದ ತಾಲ್ಲೂಕು ಕಚೇರಿಯವರೆಗೆ ಬೃಹತ್ ಬೈಕ್ ರ್‍ಯಾಲಿ ನಡೆಸಿದರು
ದ್ಯಾವಪ್ಪನ ಕೆರೆಯ ಬಳಿ ಮಿನಿ ಡ್ಯಾಮ್ ನಿರ್ಮಾಣಕ್ಕೆ ಒತ್ತಾಯಿಸಿ ಅಖಿಲ ಕರ್ನಾಟಕ ರೈತ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅಲಕಾಪುರ ಗೇಟ್‌ನಿಂದ ತಾಲ್ಲೂಕು ಕಚೇರಿಯವರೆಗೆ ಬೃಹತ್ ಬೈಕ್ ರ್‍ಯಾಲಿ ನಡೆಸಿದರು   

ಗೌರಿಬಿದನೂರು: ದ್ಯಾವಪ್ಪನ ಕೆರೆಯ ಬಳಿ ಮಿನಿ ಡ್ಯಾಮ್ ನಿರ್ಮಾಣಕ್ಕೆ ಒತ್ತಾಯಿಸಿ ಅಖಿಲ ಕರ್ನಾಟಕ ರೈತ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅಲಕಾಪುರ ಗೇಟ್‌ನಿಂದ ತಾಲ್ಲೂಕು ಕಚೇರಿಯವರೆಗೆ ಬೃಹತ್ ಬೈಕ್ ರ್‍ಯಾಲಿ ನಡೆಸಿ, ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಅಲಕಾಪುರ ಬೆಟ್ಟ, ಗುಡ್ಡಗಳ ಮಧ್ಯೆ ದ್ಯಾವಪ್ಪನ ಕೆರೆಯಿದ್ದು, ನಗರಕ್ಕೆ ಕೇವಲ 6 ಕಿ.ಮೀ ದೂರದಲ್ಲಿದೆ. ಇಲ್ಲಿ ಸರ್ಕಾರ ಮಿನಿ ಡ್ಯಾಮ್ ನಿರ್ಮಿಸಿದರೆ ನಗರ ಹಾಗೂ ಕೆರೆ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ ಎಂದು ಅಖಿಲ ಕರ್ನಾಟಕ ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಚಂದ್ರ ರೆಡ್ಡಿ ತಿಳಿಸಿದರು.

ಜೊತೆಗೆ ಎತ್ತಿನ ಹೊಳೆ ಪೈಪ್‌ಲೈನ್‌ ಬಂದಾರ್ಲಹಳ್ಳಿ ಬಳಿ ಹಾದು ಹೋಗಿದ್ದು, ಈ ನೀರನ್ನು ಕೆರೆಗೆ ಹರಿಸಿದರೆ 490 ಎಂಸಿಎಫ್‌ಟಿ ನೀರು ಶೇಖರಿಸಬಹುದು. ಅಂದಾಜು ₹15 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಬಹುದು ಎಂದು ತಜ್ಞರು ವರದಿ ನೀಡಿದ್ದಾರೆ ಎಂದರು.

ADVERTISEMENT

ಕರ್ನಾಟಕ ರಕ್ಷಣಾ ವೇದಿಕೆ ಪ್ರಭು ಮಾತನಾಡಿ, ದ್ಯಾವಪ್ಪನ ಕೆರೆ ಅಭಿವೃದ್ಧಿಗೊಳಿಸಿದರೆ ಅಲಕಾಪುರ ಮತ್ತು ಜಿ.ಬೊಮ್ಮಸಂದ್ರ ಪಂಚಾಯಿತಿ ವ್ಯಾಪ್ತಿಯ ಇಪ್ಪತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಅನುಕೂಲವಾಗುತ್ತದೆ. ಜೊತೆಗೆ ಅಂತರ್ಜಲ ಮಟ್ಟವೂ ವೃದ್ಧಿಯಾಗುತ್ತದೆ. ಇಲ್ಲಿ ಯಾರಿಗೂ ಪರಿಹಾರ ನೀಡುವಂತಿಲ್ಲ. ಹಾಗಾಗಿ ಇರುವ ನೀರುವ ಸಂಪನ್ಮೂಲವನ್ನು ಉಪಯೋಗಿಸಿಕೊಳ್ಳಲು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಿನಿ ಅಣೆಕಟ್ಟೆ ನಿರ್ಮಿಸಬೇಕೆಂದು ಒತ್ತಾಯಿಸಿದರು.

ನಂತರ ರೈತರು ತಮ್ಮ ಮನವಿ ಪತ್ರವನ್ನು ಗ್ರೇಡ್ 2 ತಹಶೀಲ್ದಾರ್ ಆಶಾ ಅವರ ಮುಖಾಂತರ ಸರ್ಕಾರಕ್ಕೆ ಸಲ್ಲಿಸಿದರು.

ಈ ವೇಳೆ ಕೇಶವ ರೆಡ್ಡಿ, ಹನುಮಂತರೆಡ್ಡಿ, ಪ್ರಕಾಶ್ ರೆಡ್ಡಿ, ಗಿರೀಶ್ ರೆಡ್ಡಿ, ಹರ್ಷವರ್ಧನ್ ರೆಡ್ಡಿ, ಜಿ.ಎಲ್.ಅಶ್ವಥ್, ಆದಿಮೂರ್ತಿ ರೆಡ್ಡಿ, ಅಂಜಿನಪ್ಪ, ಅಮಾನುಲ್ಲಾ, ನಟರಾಜ್, ಗಂಗರಾಜು, ಕೃಷ್ಣೇಗೌಡ, ನಾಗರಾಜ್ ಗೌಡ, ಮಧು ಸೂರ್ಯನಾರಾಯಣ ರೆಡ್ಡಿ, ಕೋಡಿರ್ಲಪ್ಪ, ಆನಂದ್ ರೆಡ್ಡಿ, ಬಂಡಪಲ್ಲಿ ಮೂರ್ತಿ, ಚಾಂದ್‌ಬಾಷಾ ಇತರರು ಇದ್ದರು.

ಗೌರಿಬಿದನೂರು ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ

ಹಾಲಿ ಶಾಸಕರ ವಿರುದ್ಧ ಮಾಜಿ ಶಾಸಕ ವಾಗ್ದಾಳಿ

‘ಶಾಸಕರು ರೈತರ ಹೋರಾಟವನ್ನು ನನ್ನದೇ ನಾಟಕ ಮಂಡಳಿ ಎಂದು ಹೇಳುತ್ತಿದ್ದಾರೆ. ಅವರದ್ದು ಸೋಲಾರ್ ಡ್ರಾಮಾ ಕಂಪನಿ ನಮ್ಮದು ರೈತರ ಕಂಪನಿ. ತಾಲ್ಲೂಕಿನಲ್ಲಿ ನಾಲ್ಕು ಸಿಮೆಂಟ್ ರಸ್ತೆ ಹಾಕಿಸಿ ಸೀರೆ ಹಂಚಿದರೆ ಅದು ಅಭಿವೃದ್ಧಿನಾ? ಸುಖಾಸುಮ್ಮನೆ ನಾಮಫಲಕ ಹಾಕಿಸುತ್ತಾರೆ. ಅಭಿವೃದ್ಧಿಯೆಂದರೆ ಬೋರ್ಡ್ ಹಾಕುವುದಲ್ಲ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ವಿರುದ್ಧ ಮಾಜಿ ಶಾಸಕ ಎನ್‌.ಎಚ್‌.ಶಿವಶಂಕರ ರೆಡ್ಡಿ ಕಿಡಿ ಕಾರಿದರು.

‘ವಾಟದಹೊಸಹಳ್ಳಿ ಕೆರೆ ನೀರು ನಗರಕ್ಕೆ ಹರಿಸುವ ವಿಚಾರದಲ್ಲಿ ರೈತರ ವಿರೋಧವಿದ್ದರೂ ಸಹ ಅಧಿಕಾರಿಗಳಾಗಲಿ ಶಾಸಕರಾಗಲಿ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ನಗರಕ್ಕೆ ಕುಡಿಯುವ ನೀರು ಹರಿಸಲು ದ್ಯಾವಪ್ಪನ ಕೆರೆ ಸೇರಿದಂತೆ ಬೇರೆ ಮೂಲಗಳಿವೆ. ಆದರೆ ಶಾಸಕರು ಪ್ರತಿಷ್ಠೆಗೆ ತೆಗೆದುಕೊಂಡು ವಾಟದಹೊಸಹಳ್ಳಿ ಕೆರೆ ನೀರನ್ನು ನಗರಕ್ಕೆ ತರಲು ಯೋಜನೆ ರೂಪಿಸಿದ್ದಾರೆ. ಇಂತಹ ರೈತ ವಿರೋಧಿ ಯೋಜನೆಯನ್ನು ಶಾಸಕರು ಪುನರ್ ಪರಿಶೀಲಿಸಬೇಕೆಂದು’ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.