ಚಿಂತಾಮಣಿ: ಹಲವಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ಆರೋಪಿಸಿ ವಿವಿಧ ರೈತ ಸಂಘಟನೆಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದವು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಕರ್ನಾಟಕ ರೈತ ಸಂಘ ಮತ್ತಿತರ ಸಂಘಟನೆಗಳ ನೂರಾರು ಕಾರ್ಯಕರ್ತರು ನಗರದ ಪ್ರವಾಸಿ ಮಂದಿರದ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ಅರಣ್ಯ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಬಂದು ಮುತ್ತಿಗೆ ಹಾಕಿದರು.
ರೈತ ಸಂಘದ ರಾಜ್ಯ ಘಟಕದ ಮುಖಂಡ ರಘುನಾಥರೆಡ್ಡಿ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ತಾಲ್ಲೂಕಿನಾದ್ಯಂತ ರೈತರಿಗೆ ನೋಟಿಸ್ ನೀಡುತ್ತಿದ್ದಾರೆ. ಮುರುಗಮಲ್ಲ ಹೋಬಳಿಯ ಕೊಂಡವೆನಕನಪಲ್ಲಿ, ನಾರಮಾಕಲಹಳ್ಳಿ, ಪುಲಗುಂಡ್ಲಹಳ್ಳಿ, ಜುಂಜನಹಳ್ಳಿ, ಫಸಲನಾಯ್ಕನಹಳ್ಳಿ ಗ್ರಾಮಗಳ ರೈತರಿಗೆ ನೋಟಿಸ್ ನೀಡಲಾಗಿದೆ. ಆದರೆ, ಈ ರೈತರು 70–80 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಸಾಗುವಳಿ ಚೀಟಿ, ಪಹಣಿ, ಮ್ಯೂಟೇಷನ್ ಮಾಡಿಕೊಡಲಾಗಿದೆ. ಅದೇ ಜಮೀನುಗಳಿಂದ ಜೀವನ ಸಾಗಿಸುತ್ತಿದ್ದಾರೆ ಎಂದರು.
ಕೆಲವು ರೈತರು ಸಾಲ ಮಾಡಿ ಕೊಳವೆಬಾವಿ ಕೊರೆಸಿದ್ದಾರೆ. ಕೆಲವರು ಕೋಳಿ ಫಾರಂ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಒಂದು ವರ್ಷದಿಂದ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಿ ತೊಂದರೆ, ಕಿರುಕುಳ ನೀಡಲಾಗುತ್ತಿದೆ. ಜಮೀನು ಸರ್ವೆ ಮಾಡಿಸುತ್ತೇವೆ. ನೀವು ಜಮೀನು ಬಿಡಬೇಕು ಎಂದು ರೈತರಿಗೆ ಬೆದರಿಸಲಾಗುತ್ತಿದೆ ಎಂದು ದೂರಿದರು.
ಸರ್ಕಾರವೇ ಸಾಗುವಳಿ ಚೀಟಿ, ಪಹಣಿ, ಮ್ಯೂಟೇಷನ್ ಮಾಡಿರುವ ಎಲ್ಲ ದಾಖಲೆಗಳು ರೈತರ ಹೆಸರಿನಲ್ಲಿವೆ. ಅರಣ್ಯ ಜಮೀನು ರೈತರ ಜಮೀನುಗಳಿಂದ ಒಂದು ಕಿ.ಮೀ ದೂರದಲ್ಲಿದೆ. ಇಲಾಖೆಯು ಕಾಂಪೌಂಡ್ ನಿರ್ಮಿಸಿ ಗಿಡಗಳನ್ನು ಬೆಳೆಸಿದ್ದಾರೆ. ದಾಖಲೆಗಳ ಸಹಿತ ರೈತರು ಅರಣ್ಯ ಇಲಾಖೆ ಕಚೇರಿಗೆ ಬರಬೇಕು ಎಂದು ನೋಟಿಸ್ ನೀಡಿ ಬೆದರಿಸುತ್ತಿರುವುದು ಖಂಡನೀಯ ಎಂದರು.
ಪ್ರತಿಭಟನೆ ನಂತರ ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಮೂಲಕ ಅರಣ್ಯ ಸಚಿವರಿಗೆ ಸಲ್ಲಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ರಾಜ್ಯ ಉಪಾಧ್ಯಕ್ಷ ಮುನಿಕೆಂಪಣ್ಣ, ತಾಲ್ಲೂಕು ಅಧ್ಯಕ್ಷ ಕದಿರೇಗೌಡ, ಪದಾಧಿಕಾರಿಗಳಾದ ವೆಂಕಟರಾಮಯ್ಯ, ನಾರಾಯಣಸ್ವಾಮಿ, ಮಂಜುನಾಥ್, ಯಲ್ಲಪ್ಪ, ಆಂಜಿನಪ್ಪ, ನಾಗರಾಜು, ರಾಜಣ್ಣ, ಶಿವಾರೆಡ್ಡಿ, ಶಂಕರಪ್ಪ, ರತ್ನಮ್ಮ, ರಾಜಮ್ಮ ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.