ADVERTISEMENT

ರಸಗೊಬ್ಬರಕ್ಕಾಗಿ ರೈತರ ಪರದಾಟ

ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:55 IST
Last Updated 6 ಆಗಸ್ಟ್ 2025, 5:55 IST
ಬಾಗೇಪಲ್ಲಿ ಪಟ್ಟಣದ ಖಾಸಗಿ ರಸಗೊಬ್ಬರ ಅಂಗಡಿ ಮುಂದೆ ರಸಗೊಬ್ಬರ ಖರೀದಿಗೆ ರೈತರು ಸಾಲಿನಲ್ಲಿ ನಿಂತಿರುವುದು
ಬಾಗೇಪಲ್ಲಿ ಪಟ್ಟಣದ ಖಾಸಗಿ ರಸಗೊಬ್ಬರ ಅಂಗಡಿ ಮುಂದೆ ರಸಗೊಬ್ಬರ ಖರೀದಿಗೆ ರೈತರು ಸಾಲಿನಲ್ಲಿ ನಿಂತಿರುವುದು   

ಬಾಗೇಪಲ್ಲಿ: ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಕಾರಣ, ತಾಲ್ಲೂಕಿನಾದ್ಯಂತ ಬಿತ್ತನೆ ಕಾರ್ಯಗಳು ಆರಂಭವಾಗಿದೆ. ಆದರೆ, ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರ ಲಭ್ಯವಾಗುತ್ತಿಲ್ಲ.

ಇದರಿಂದಾಗಿ ತಾಲ್ಲೂಕಿನ ಹೋಬಳಿಗಳಾದ ಕಸಬಾ, ಮಿಟ್ಟೇಮರಿ, ಗೂಳೂರು ರೈತ ಸಂಪರ್ಕ ಕೇಂದ್ರ ಮತ್ತು ಖಾಸಗಿ ಅಂಗಡಿಗಳ ಮುಂದೆ ರಸಗೊಬ್ಬರ ಪಡೆಯಲು ರೈತರು ಸಾಲುಗಟ್ಟಿ ನಿಲ್ಲುವ ಅನಿವಾರ್ಯತೆ ಎದುರಾಗಿದೆ. ರೈತ ಸಂಪರ್ಕ ಕೇಂದ್ರಗಳು ಮತ್ತು ಖಾಸಗಿ ಅಂಗಡಿಗಳಿಗೆ ಅಗತ್ಯ ಪ್ರಮಾಣದಷ್ಟು ರಸಗೊಬ್ಬರವನ್ನು ಸರ್ಕಾರ ಪೂರೈಕೆ ಮಾಡದಿರುವುದೇ ರೈತರ ಈ ಪರಿಸ್ಥಿತಿಗೆ ಕಾರಣ ಎಂದು ಸ್ಥಳೀಯರು ದೂರುತ್ತಾರೆ. 

ತಾಲ್ಲೂಕಿನಲ್ಲಿ ಒಟ್ಟಾರೆ 39,592 ಮಂದಿ ಕೃಷಿಕರಿದ್ದಾರೆ. ಈ ಪೈಕಿ 6,086 ಮಂದಿ ದೊಡ್ಡ ರೈತರು, 23,773 ಮಂದಿ ಸಣ್ಣ ರೈತರಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 22,892 ಹೆಕ್ಟರ್ ಕೃಷಿಭೂಮಿ ಇದೆ. ಈ ಪೈಕಿ ನೀರಾವರಿ–1,493 ಹೆಕ್ಟರ್, ಖುಷ್ಕಿ– 27,399 ಹೆಕ್ಟರ್, ಏಕದಳ, ದ್ವಿದಳ, ಎಣ್ಣೆ ಕಾಳುಗಳು ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯುವ ಗುರಿ ಇದೆ. 77 ಹೆಕ್ಟರ್‌ಗಳಲ್ಲಿ ಭತ್ತ, ರಾಗಿ 570 ಹೆಕ್ಟರ್, 13,900 ಹೆಕ್ಟರ್ ಪ್ರದೇಶದಲ್ಲಿ ಮುಸಕಿನಜೋಳ ಹಾಗೂ 172 ಹೆಕ್ಟರ್‌ನಲ್ಲಿ ಜೋಳ ಬಿತ್ತನೆ ಮಾಡುವ ಗುರಿ ಇದೆ.

ADVERTISEMENT

ಮುಂಗಾರು, ಹಿಂಗಾರಿನ ಮಳೆ ಆಗಿದೆ. ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ತಾಲ್ಲೂಕಿನಲ್ಲಿ ಅತಿಹೆಚ್ಚು ನೆಲಗಡಲೆ, ಮುಸಕಿನಜೋಳ, ಭತ್ತ, ರಾಗಿ, ತೊಗರಿ ಸೇರಿದಂತೆ ಧಾನ್ಯಗಳ ಕೃಷಿ ಬೆಳೆಗಳನ್ನು ಬೆಳೆಯುತ್ತಾರೆ. ಕಳೆದ ಒಂದು ವಾರದಿಂದ ತುಂತುರು ಮಳೆ ಆಗಿದೆ. ರೈತರು ಬೆಳೆದ ನೆಲಗಡಲೆ, ಜೋಳದ ಬೆಳೆಗಳಲ್ಲಿ ಕಳೆ ತೆಗೆದಿದ್ದಾರೆ. ಇದೀಗ ರಸಗೊಬ್ಬರ ಸಿಂಪಡಿಸಲು ಮುಂದಾಗಿದ್ದಾರೆ.

ಆದರೆ, ತಾಲ್ಲೂಕಿನ ಕಸಬಾ, ಮಿಟ್ಟೇಮರಿ, ಪಾತಪಾಳ್ಯ, ಗೂಳೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ರಸಗೊಬ್ಬರ ಪೂರೈಕೆಯಾಗಿಲ್ಲ. ಹೀಗಾಗಿ, ಪ್ರತಿದಿನ ರಸಗೊಬ್ಬರ ಪಡೆಯಲು ರೈತರು ಬೆಳಗಿನ ಜಾವದಿಂದಲೇ ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ರಸಗೊಬ್ಬರ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ಅನಿವಾರ್ಯತೆ ಎದುರಾಗಿದೆ. ಇಷ್ಟಾಗ್ಯೂ, ಬೆಳೆಗಳಿಗೆ ಪೌಷ್ಟಿಕಾಂಶ ನೀಡುವ ಡಿಎಪಿ, ಯೂರಿಯಾ ಸೇರಿದಂತೆ ಇನ್ನಿತರ ರಸಗೊಬ್ಬರ ಮೂಟೆ ಸಿಗುವ ಗ್ಯಾರಂಟಿ ಇಲ್ಲ ಎನ್ನುತ್ತಾರೆ ಸಾಲುಗಟ್ಟಿ ನಿಂತ ರೈತರೊಬ್ಬರು ಅಳಲು ತೋಡಿಕೊಂಡರು. 

ತಾಲ್ಲೂಕಿನ ಕೃಷಿಕರಿಗೆ ಬೇಕಿರುವಷ್ಟು ರಸಗೊಬ್ಬರದ ಮೂಟೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಪೂರೈಸಿಲ್ಲ. ಹೀಗಾಗಿ, ಇರುವ ದಾಸ್ತಾನಿನಲ್ಲಿ ಎಲ್ಲ ರೈತರಿಗೂ ರಸಗೊಬ್ಬರ ಸಿಗುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ 50 ಕೆ.ಜಿಯ ಮೂಟೆಯನ್ನು ರೈತರಿಗೆ ತಲಾ ಒಂದು, ಎರಡು ಅಥವಾ ಮೂರು ಎಂಬಂತೆ ವಿತರಿಸಲಾಗುತ್ತಿದೆ. ಕೂಡಲೇ ಸರ್ಕಾರ ತಾಲ್ಲೂಕಿಗೆ ಅಗತ್ಯವಿರುವಷ್ಟು ರಸಗೊಬ್ಬರಗಳನ್ನು ಪೂರೈಸಬೇಕು. ಇಲ್ಲದಿದ್ದರೆ, ಕೃಷಿ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 

ಪ್ರತಿಭಟನೆಯ ಎಚ್ಚರಿಕೆ

ರೈತರಿಗೆ ಅಗತ್ಯವಿರುವಷ್ಟು ಬಿತ್ತನೆ ಬೀಜ ರಸಗೊಬ್ಬರದ ಮೂಟೆಗಳನ್ನು ಸಮರ್ಪಕವಾಗಿ ವಿತರಣೆ ಮಾಡಬೇಕು ಎಂದು ತಾಲ್ಲೂಕು ಆಡಳಿತ ಮತ್ತು ಕೃಷಿ ಇಲಾಖೆಗಳಿಗೆ ಪ್ರಾಂತ ರೈತ ಸಂಘಟನೆಯು ಮನವಿ ಮಾಡಿದೆ. ಆದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ರೈತ ವಿರೋಧಿ ಸರ್ಕಾರಗಳ ವಿರುದ್ಧ ಕೃಷಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರೈತ ಸಂಘದ ಜಿಲ್ಲಾ ಸಂಚಾಲಕ ಚನ್ನರಾಯಪ್ಪ ಎಚ್ಚರಿಕೆ ನೀಡಿದರು.  ರಸಗೊಬ್ಬರದ ಕೊರತೆ ಇಲ್ಲ ತಾಲ್ಲೂಕಿನಲ್ಲಿ 68.92 ಮೆಟ್ರಿಕ್ ಟನ್‌ನಷ್ಟು ಯೂರಿಯಾ ಮತ್ತು 115.02 ಮೆಟ್ರಿಕ್ ಟನ್‌ನಷ್ಟು ಡಿಎಪಿ ಸಂಗ್ರಹವಿದೆ. ಈಗಷ್ಟೇ ಮಳೆಯಾಗಿದ್ದು ಬಿತ್ತನೆ ಕಾರ್ಯ ಆರಂಭಿಸಿರುವ ರೈತರು ಏಕಾಏಕಿ ರಸಗೊಬ್ಬರ ಪಡೆಯಲು ರೈತ ಸಂಪರ್ಕ ಕೇಂದ್ರ ಮತ್ತು ಖಾಸಗಿ ಅಂಗಡಿಗಳಿಗೆ ದಾಂಗುಡಿ ಇಟ್ಟಿದ್ದಾರೆ. ಇದರಿಂದಾಗಿ ರಸಗೊಬ್ಬರಗಳ ತಾತ್ಕಾಲಿಕ ಅಭಾವ ಉಂಟಾಗಿದೆ. ರೈತರು ಸಾಂಪ್ರದಾಯಿಕ ರಸಗೊಬ್ಬರ ಮತ್ತು ನ್ಯಾನೊ ರಸಗೊಬ್ಬರಗಳನ್ನು ಬಳಕೆ ಮಾಡುತ್ತಿಲ್ಲ. ಕೆಲವು ರೈತರು ಆಧುನಿಕ ಪದ್ಧತಿಗಳನ್ನು ಅನುಸರಿಸಿ ಉತ್ತಮ ಬೆಳೆಗಳನ್ನು ಬೆಳೆದಿದ್ದಾರೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶ ಎಸ್. ಶ್ರೀನಿವಾಸ್ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.