ಬಾಗೇಪಲ್ಲಿ: ಬೇಸಿಗೆ ಬಿರುಬಿಸಿಲು ಹೆಚ್ಚಾಗಿದೆ. ದಾರಿಹೋಕರು, ಕುರಿಗಾಹಿಗಳು ಹಾಗೂ ಪಶುಗಳ ಪಾಲಕರು ಬೆಟ್ಟ, ಗುಡ್ಡಗಳಿಗೆ, ಹೊಲ, ಗದ್ದೆಗಳಲ್ಲಿನ ಒಣಗಿದ ಹುಲ್ಲುಗಳಿಗೆ ಇಡುವ ಬೆಂಕಿ ಕಿಡಿ ಅಪಾರ ವನ ಸಂಪತ್ತು, ಕ್ರಿಮಿಕೀಟಗಳಿಗೆ, ಪ್ರಾಣಿ, ಪಕ್ಷಿಗಳ ಜೀವಗಳಿಗೆ ಕುತ್ತು ತಂದಿದೆ.
ಬೇಸಿಗೆ ಬಿಸಿಲು ಹೆಚ್ಚಾದಂತೆ ತಾಲ್ಲೂಕಿನಲ್ಲಿ ಬೆಂಕಿ ಅನಾಹುತ ಹೆಚ್ಚಾಗಿದೆ. ತಾಲ್ಲೂಕಿನ ಐತಿಹಾಸಿಕ ಗಡಿದಂನ ಪೂರ್ವ ಬೆಟ್ಟಕ್ಕೆ ಎರಡು ದಿನಗಳ ಹಿಂದೆ ಕುರಿಗಾಹಿಗಳು ಅಥವಾ ಕೆಲ ಕಿಡಿಗೀಡಿಗಳು ಬೆಂಕಿ ಹಚ್ಚಿದ್ದಾರೆ. ಬೆಂಕಿಯಿಂದ ಗುಡ್ಡಗಳಲ್ಲಿನ ಗಿಡ, ಮರಗಳು, ಪ್ರಾಣಿ, ಪಕ್ಷಿಗಳು, ಕ್ರಿಮಿಕೀಟಗಳು ಸುಟ್ಟು ಭಸ್ಮ ಆಗಿವೆ. ದೇವಿಕುಂಟೆ ಬೆಟ್ಟ ಸೇರಿದಂತೆ ವಿವಿಧ ಕಡೆಗಳಲ್ಲಿ ಹೊಲ ಗದ್ದೆಗಳ ಪಕ್ಕದಲ್ಲಿನ ಒಣಗಿದ ಹುಲ್ಲಿಗೆ ಬೆಂಕಿ ಇಡುತ್ತಿದ್ದಾರೆ. ಬೆಂಕಿ ಕಿಡಿಯಿಂದ ಬೆಟ್ಟ, ಗುಡ್ಡಗಳು, ಆಹುತಿಯಾಗಿವೆ. ಜಾನುವಾರುಗಳಿಗೆ ಮೇವಿನ ಕೊರತೆ ಹೆಚ್ಚಾಗಿದೆ.
ತಾಲ್ಲೂಕಿನಲ್ಲಿ ಅತಿ ಹೆಚ್ಚಾಗಿ ಕುರಿ, ಮೇಕೆ, ಎತ್ತು, ದನ ಮೇಯಿಸುವವರು ಇದ್ದಾರೆ. ಆದರೆ, ಮೇವಿಗೆ ಹಾಹಾಕಾರ ತಲೆದೋರಿದೆ. ಪ್ರಾಣಿ, ಪಕ್ಷಿಗಳು ಸಹ ಬೆಂಕಿಗೆ ಸುಟ್ಟು ಭಸ್ಮವಾಗುತ್ತಿವೆ ಎಂದು ಪರಿಸರವಾದಿಗಳು ಆರೋಪಿಸುತ್ತಾರೆ.
'ಬೆಟ್ಟ, ಗುಡ್ಡಗಳಿಗೆ ಬೆಂಕಿ ಇಡುತ್ತಿರುವ ಬಗ್ಗೆ ಅನೇಕ ಭಾರಿ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಆದರೆ, ಅರಣ್ಯ ವಲಯದಲ್ಲಿ ಸಿಬ್ಬಂದಿ ಗಸ್ತು ಇರುವುದಿಲ್ಲ. ಗಿಡ, ಮರಗಳಿಗೆ, ಬೆಟ್ಟ, ಗುಡ್ಡಗಳಿಗೆ ಬೆಂಕಿ ಹಾಕಬಾರದು. ಆಗುವ ಅನಾಹುತ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿಲ್ಲ. ಕುರಿಗಾಹಿಗಳಿಗೆ, ಜನರಿಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಭಾಗ್ಯನಗರ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎಸ್.ಶ್ರೀನಿವಾಸ್ ಹೇಳುತ್ತಾರೆ.
'ಬೆಟ್ಟ, ಗುಡ್ಡ ಕಡೆ ಸಂಚರಿಸುವ ಕುರಿಗಾಹಿಗಳಿಗೆ, ಜನರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅರಿವು ಮೂಡಿಸಬೇಕು. ಅರಣ್ಯ ಇಲಾಖೆ ಗಸ್ತು ಹೆಚ್ಚಿಸಬೇಕು. ಯಾವುದೇ ಕಾರಣಕ್ಕೂ ಬೆಟ್ಟ, ಗುಡ್ಡಗಳಿಗೆ ಬೆಂಕಿ ಹಾಕಬಾರದು. ಬೆಂಕಿ ಹಾಕಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಬೇಕಾಗಿದೆ ಎಂದು ಸ್ಥಳೀಯರಾದ ಸೋಮಶೇಖರರೆಡ್ಡಿ ಒತ್ತಾಯಿಸುತ್ತಾರೆ.
ಜಾನುವಾರು, ಪಕ್ಷಿಗಳಿಗೆ ಮೇವು, ನೀರು ಸಿಗುತ್ತಿಲ್ಲ. ವನ್ಯಜೀವಿಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಆಗಬೇಕು ಎಂದು ಗ್ರೀನ್ ಇಂಡಿಯಾ ಫೋರಂ ಅಧ್ಯಕ್ಷ ಸೈಯ್ಯದ್ ಸಿದ್ದಿಕ್ ಹೇಳುತ್ತಾರೆ.
ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಜನವರಿಯಿಂದ ಇದುವರೆಗೂ ಅಂಗಡಿ, ಮನೆ, ಮೇವಿನ ಬಣವೆ, ಬೆಟ್ಟ, ಗುಡ್ಡಗಳಿಗೆ ಬೆಂಕಿ ಇಟ್ಟ ಪ್ರಕರಣಗಳು 43. ಗ್ರಾಮಸ್ಥರು ಮೊಬೈಲ್ ಕರೆ ಮಾಡಿದ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲಾಗಿದೆ. ಆದರೆ, ರಾತ್ರಿ ವೇಳೆಯಲ್ಲಿ ಬೆಟ್ಟಗಳಿಗೆ ಇಡುವ ಬೆಂಕಿಯನ್ನು ನಂದಿಸಲು ಆಗುತ್ತಿಲ್ಲ. ಆದರೂ, ಕೆಲ ಸಂದರ್ಭದಲ್ಲಿ ಬೆಟ್ಟಗಳಿಗೆ ಇಟ್ಟ ಬೆಂಕಿಯನ್ನು ನಂದಿಸಿದ್ದೇವೆ ಎಂದು ಅಗ್ನಿಶಾಮಕ ದಳದ ಮೈಲಾರಪ್ಪ 'ಪ್ರಜಾವಾಣಿ'ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.