
ಗೌರಿಬಿದನೂರು: ನಮ್ಮ ಅಭಿವೃದ್ಧಿ ಕೆಲಸಗಳನ್ನು ಸಹಿಸದೆ ಮಾಜಿ ಶಾಸಕ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡ, ಶಿವಶಂಕರರೆಡ್ಡಿ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ನಗರದ ಹೊರವಲಯದಲ್ಲಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆಯಲ್ಲಿ ನಿರ್ದೇಶಕರಾಗಿ ಚುನಾಯಿತರಾದ ಕಾಂತರಾಜು ಮತ್ತು ಸುಧಾಮಣಿ
ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳಿಂದ ನಮಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಗೊಂದಲ, ಅಪಪ್ರಚಾರ ಮತ್ತು ಗ್ರಾಮಗಳಲ್ಲಿ ಬೆಂಕಿ ಹಚ್ಚುವ ಕೆಲಸ ಮಾಜಿ ಶಾಸಕರು ಮಾಡುತ್ತಿದ್ದಾರೆ. ಇತ್ತೀಚಿಗೆ ತಪಸಮಾಕಲಹಳ್ಳಿಯಲ್ಲಿ ಪಂಚಾಯಿತಿ ಸದಸ್ಯರ ಅವಧಿ ಮುಗಿದ ಬಳಿಕ ಅಲ್ಲಿನ ಖಾಸಗಿ ವ್ಯಕ್ತಿಗಳಿಂದ ಶೆಡ್ ಗಳನ್ನು ಹಾಕಿಸಿ ಗಲಾಟೆ ಮಾಡಿಸಿದ್ದಾರೆ. ಈ ಭಾಗದಲ್ಲಿ ಅವರ ಕ್ರಷರ್ ಇದೆ. ಇದನ್ನು ಮರೆಮಾಚಲು ಗುಂಪುಗಳನ್ನು ಕಟ್ಟಿ ಗಲಾಟೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಯರೇಖಲಹಳ್ಳಿ ಡೇರಿ ಚುನಾವಣೆಗೆ ಅಲ್ಲಿನ ಜನರಗೆ ಎತ್ತಿಕಟ್ಟಿ ಸುಖಾಸುಮ್ಮನೆ ಪೊಲೀಸರನ್ನು ಕಳಿಸಿ ಗೊಂದಲ ಸೃಷ್ಟಿಸಿದ್ದಾರೆ. ಬಚ್ಚರೆಡ್ಡಿಹಳ್ಳಿ ಪಂಚಾಯಿತಿ ಜಾಗ ಒತ್ತುವರಿ ತೆರವು ಮಾಡುವಾಗಲು ಇದೇ ರೀತಿ ಮಾಡಿದ್ದಾರೆ, ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ಇವರು ಇಂತಹ ಕೆಲಸಗಳನ್ನು ಹೆಚ್ಚಾಗಿ ಮಾಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಚಿಮುಲ್ ಚುನಾವಣೆಯಲ್ಲಿ ಸಂಸದರು ಮತ್ತು ಜಿಲ್ಲಾ ಮಂತ್ರಿ ಒಬ್ಬೊಬ್ಬರನ್ನೇ ಗೆಲ್ಲಿಸಿಕೊಂಡರು. ನಾವು ಇಬ್ಬರನ್ನು ಗೆಲ್ಲಿಸಿದ್ದೇವೆ. ವೆಂಕಟರೆಡ್ಡಿ ಗೆಲ್ಲುತ್ತಾರೆ ಎಂದು ನಾನು ಸ್ವಲ್ಪ ಮೈ ಮರೆತಿದ್ದರಿಂದ ಅವರು ಸೋತಿದ್ದಾರೆ. ಇದಕ್ಕಾಗಿ ನಮ್ಮ ವಿರೋಧಿಗಳೆಲ್ಲರೂ ಒಂದಾಗಿ ಕೆಲಸ ಮಾಡಿದ್ದಾರೆ ಎಂದರು.
ಮುಖಂಡ ಆರ್ ಅಶೋಕ್ ಮಾತನಾಡಿ, ತಾಲ್ಲೂಕು 25 ವರ್ಷಗಳಿಂದ ಕಾಣದ ಅಭಿವೃದ್ಧಿ ಈಗ ಕಾಣುತ್ತಿದೆ. ಆದರೆ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ನಡೆದ ಎಲ್ಲಾ ಚುನಾವಣೆಗಳಲ್ಲಿ ಶಾಸಕರ ಕಾರ್ಯವೈಖರಿಯನ್ನು ಮೆಚ್ಚಿ ಜನರು ಗೆಲ್ಲಿಸುತ್ತಿದ್ದಾರೆ. ಎಲ್ಲಾ ಸಮುದಾಯಗಳಿಗೆ ಸಮಾನವಾಗಿ ಅಧಿಕಾರವನ್ನು ಹಂಚುತ್ತಿದ್ದಾರೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರಾಮ ರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿಜಯ ರಾಘವ, ಕೃಷಿಕ ಸಮಾಜ ಅಧ್ಯಕ್ಷ ಪ್ರಭಾಕರ್ ರೆಡ್ಡಿ, ಬಾಬಣ್ಣ, ಅಶ್ವತ್ಥ್ ನಾರಾಯಣ ಗೌಡ, ನಗರಸಭೆ ಮಾಜಿ ಸದಸ್ಯರಾದ ಕಲೀಂ ಉಲ್ಲಾ, ಮಂಜುಳಾ, ಅನಂತರಾಜು, ರಾಜಕುಮಾರ್, ಸುಬ್ಬರಾಜು, ರಂಗರಾಜು, ನಾಗೇಂದ್ರ ಆರ್ ಆರ್ ರೆಡ್ಡಿ, ವಿಕ್ರಂ, ಜಿ. ಕೆ ಸತೀಶ್, ಲಕ್ಷ್ಮಿನಾರಾಯಣ್ ಮತ್ತಿತರರು ಪಾಲ್ಗೊಂಡಿದ್ದರು.
‘ಬಸ್ ಏಜೆಂಟ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ’
‘ಬಸ್‌ನಿಲ್ದಾಣದಲ್ಲಿ ಬೆಂಗಳೂರು... ಹಿಂದೂಪುರ ಎಂದು ಕೂಗುತ್ತಿದ್ದ ಕೇಶವರೆಡ್ಡಿಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ್ದೀರಿ. ನೀವು ಐದು ಬಾರಿ ಎಂಎಲ್ಎ ಆಗಬಹುದು. ನಾವು ಎರಡು ಬಾರಿ ನಿರ್ದೇಶಕರಾಗಬಾರದಾ’ ಎಂದು ಶಿವಶಂಕರ ರೆಡ್ಡಿ ಅವರನ್ನು ಚಿಮುಲ್ ನಿರ್ದೇಶಕ ಕಾಂತರಾಜು ಪ್ರಶ್ನಿಸಿದರು. ಚುನಾವಣೆಗಳನ್ನು ಗೆಲ್ಲಲಾಗದೆ ಪ್ರತಿ ಹಳ್ಳಿಗಳಲ್ಲೂ ಗೊಂದಲ ಸೃಷ್ಟಿಸಿ ಬೆಂಕಿ ಇಡುವ ಕೆಲಸ ಮಾಡುತ್ತಿದ್ದೀರಿ. ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅನಿಲ್ ಕುಮಾರ್‌ಗೆ ಮತ ಹಾಕಿಸದೆ ಜೆಡಿಎಸ್‌ನ ಮನೋಹರ್‌ಗೆ ಮತ ಹಾಕಿಸಿದಿರಿ ಎಂದು ಆರೋಪಿಸಿದರು. ನಾನು ಯಾರ ಬಳಿಯೂ ಎಂಜಲು ಕಾಸು ತಿಂದಿಲ್ಲ. ನನ್ನ ರಾಜಕೀಯ ಜೀವನದಲ್ಲಿ ನಾನು ತಪ್ಪು ಮಾಡಿಲ್ಲ. ಹೊಸೂರಿನ ಒಬ್ಬ ಪುಣ್ಯಾತ್ಮ ಎಲ್ಲಾ ಮನೆಗಳಿಗೂ ಬೆಂಕಿ ಇಡುತ್ತಿದ್ದಾನೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್ ಅವರನ್ನು ಕುಟುಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.