ADVERTISEMENT

ಗುಡಿಬಂಡೆಗೂ ಇದೆ ಸ್ವಾತಂತ್ರ್ಯ ಸೇನಾನಿಗಳ ನೆನಪು

ಜೆ.ವೆಂಕಟರಾಯಪ್ಪ
Published 15 ಆಗಸ್ಟ್ 2022, 4:38 IST
Last Updated 15 ಆಗಸ್ಟ್ 2022, 4:38 IST

ಗುಡಿಬಂಡೆ: 1938ರಲ್ಲಿ ನಡೆದ ‘ಕರ್ನಾಟಕ ಜಲಿಯನ್ ವಾಲಾಬಾಗ್’ ಎಂದೇ ಇತಿಹಾಸದ ಪುಟಗಳನ್ನು ಅಲಂಕರಿಸಿರುವ ವಿದುರಾಶ್ವತ್ಥ ಹೋರಾಟದಲ್ಲಿ ಗುಡಿಬಂಡೆ ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರು ಸಹ ಪಾಲ್ಗೊಂಡಿದ್ದರು. ಇದು ತಾಲ್ಲೂಕಿಗೆ ಹೆಮ್ಮೆಯ ವಿಷಯ.

ವಿದುರಾಶ್ವತ್ಥದಲ್ಲಿ ಸತ್ಯಾಗ್ರಹದ ಸಂದರ್ಭದಲ್ಲಿ ಜಿಲ್ಲೆಯ ಮುಂದಾಳತ್ವ ವಹಿಸಿದ್ದ ತಿಮ್ಮಾರೆಡ್ಡಿ, ನಾಗಯ್ಯರೆಡ್ಡಿ, ಎಲ್.ಎಸ್.ರಾಜು ಮುಂತಾದ ನಾಯಕರೊಂದಿಗೆ ಗುಡಿಬಂಡೆಯ ಸಹೋದರರಾದ ಎಸ್.ರಾಮರಾವ್, ಎಸ್.ಶಾಮರಾವ್ ಹಾಗೂ ಆದಿನಾರಾಯಣ ಶೆಟ್ಟಿ ಮುಂತಾದ ಹೋರಾಟಗಾರು ಸೆರೆವಾಸ ಅನುಭವಿಸಿದರು. ಅಲ್ಲಿ ನಡೆದ ಗೋಲಿಬಾರ್‌ನಲ್ಲಿ ಗುಡಿಬಂಡೆ ಲಕ್ಷ್ಮಯ್ಯ ಹುತಾತ್ಮರಾದರು.

ಮಹಾತ್ಮ ಗಾಂಧೀಜಿ ಅವರ ಸ್ವಾತಂತ್ರ್ಯ ಚಳವಳಿಯಿಂದ
ಪ್ರೇರಿತರಾದ ಸಹೋದರರಿಬ್ಬರೂ ಗುಡಿಬಂಡೆಯಲ್ಲಿ ಹೋರಾಟಕ್ಕೆ ನಾಂದಿ ಹಾಡಿದರು. ಮೊದಲ ಹಂತದಲ್ಲಿ ಅಂದಿನ ಒಡನಾಡಿಗಳಾಗಿದ್ದ ಆದಿನಾರಾಯಣ ಶೆಟ್ಟಿ, ಜಿ.ಪಿ.ಆವುಲಕೊಂಡಪ್ಪ, ಶಾನುಬೋಗ್ ಹನುಮಂತರಾವ್, ಗೆಗ್ಗಿಲರಾಳ್ಳಹಳ್ಳಿ ಚೆನ್ನರಾಯಪ್ಪ, ಚಲಪತಿನಾಯ್ಡು, ಜೆ.ಕೆ.ರಾಮಯ್ಯ ದಪ್ಪರ್ತಿ ತಮ್ಮಾರೆಡ್ಡಿ, ಗೋಪಾಲರೆಡ್ಡಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

ADVERTISEMENT

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ನಾಡಿನ ಮತ್ಸದ್ದಿಗಳಾದ ದಿವಗಂತ ಕೆ.ಸಿ.ರೆಡ್ಡಿ, ನಿಜಲಿಂಗಪ್ಪ, ಎನ್.ಸಿ.ನಾಗಯ್ಯರೆಡ್ಡಿ, ತಿಮ್ಮಾರೆಡ್ಡಿ, ಸಂಪಂಗಿರಾಮಯ್ಯ, ಕೆ.ವೆಂಕಟಕೃಷ್ಣಯ್ಯ ಮುಂತಾದವರ ಜತೆ ಭಾಗವಹಿಸಿದ್ದ ಗುಡಿಬಂಡೆ ರಾಮರಾವ್, ಶಾಮರಾವ್, ತೀರ್ಥಹಳ್ಳಿ ಜೈಲು ಸೇರಿ 11 ತಿಂಗಳು ಸೆರೆವಾಸ ಅನುಭವಿಸಿದ್ದರು.

ಗುಡಿಬಂಡೆ ಸ್ವಾತಂತ್ರ್ಯ ಹೋರಾಟಗಾರು ವಿದ್ಯಾರ್ಥಿ ದಸೆಯಲ್ಲಿದ್ದಾಗಲೇ ಗಾಂಧೀಜಿ ವಿಚಾರಗಳಿಂದ ಪ್ರಭಾವಿತರಾಗಿ ರಾಷ್ಟ್ರನಾಯಕರಕರೆಗೆ ಓಗೊಟ್ಟು ಗುಡಿಬಂಡೆ ನರಸಿಂಹದೇವರ ಗುಟ್ಟದ ಬಳಿ ರಾಷ್ಟ್ರಧ್ವಜ ಹಾರಿಸಲು ಪ್ರಯತ್ನಿಸಿ ಪೊಲೀಸರಿಂದ ಬಂಧನಕ್ಕೆ ಒಳಗಾದರು. 16 ದಿನಗಳ ಕಾಲ ಸೆರೆವಾಸ ಅನುಭವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.