ADVERTISEMENT

ಗೌರಿಬಿದನೂರು: ರೈತರ ಸಂತೆಯಲ್ಲಿ ತಾಜಾ ತರಕಾರಿ

ನಗರದ ವಾರ್ಡ್‌ಗಳಲ್ಲೇ ಸಿಗುವ ತರಕಾರಿ, ಸೊಪ್ಪು, ಹಣ್ಣು

ಎ.ಎಸ್.ಜಗನ್ನಾಥ್
Published 24 ಆಗಸ್ಟ್ 2020, 3:02 IST
Last Updated 24 ಆಗಸ್ಟ್ 2020, 3:02 IST
ನಗರದ ವಿವಿ ಪುರಂ ನಲ್ಲಿ ನಡೆಯುವ ರೈತರ ಸಂತೆಯಲ್ಲಿ ಗ್ರಾಹಕರು
ನಗರದ ವಿವಿ ಪುರಂ ನಲ್ಲಿ ನಡೆಯುವ ರೈತರ ಸಂತೆಯಲ್ಲಿ ಗ್ರಾಹಕರು   

ಗೌರಿಬಿದನೂರು: ನಗರದಲ್ಲಿ ಪ್ರತಿ ಭಾನುವಾರ ನಡೆಯುತ್ತಿದ್ದ ವಾರದ ಸಂತೆಯು ಕೋವಿಡ್– 19 ತುರ್ತು ಪರಿಸ್ಥಿತಿಯಲ್ಲಿ ಸರ್ಕಾರದ ‌ನಿಯಮಾನುಸಾರ ಸ್ಥಗಿತಗೊಂಡ ಕಾರಣ ಜನರಿಗೆ ನಿತ್ಯದ ಅವಶ್ಯಕ ವಸ್ತುಗಳ ಖರೀದಿಗೆ ತೊಂದರೆಯಾಗಿತ್ತು.

ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರ ದಟ್ಟಣೆಯನ್ನು ನಿಯಂತ್ರಿಸುವ ಹಾಗೂ ಸೋಂಕಿನ ತೀವ್ರತೆ ಕಡಿಮೆ ಮಾಡುವ ನಿಟ್ಟಿನಲ್ಲಿ ತಾಲ್ಲೂಕು ಕೋವಿಡ್-19 ನಿಯಂತ್ರಣದ ವಿಶೇಷ ಅಧಿಕಾರಿಯಾಗಿ ನೇಮಕವಾಗಿದ್ದ ಬಿ.ಎನ್.ವರಪ್ರಸಾದರೆಡ್ಡಿ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ನಗರದ ವಿವಿಧ ವಾರ್ಡ್‌ಗಳಲ್ಲಿ ಆರಂಭವಾದ ‘ರೈತರ ಸಂತೆ’ ಇಂದಿಗೂ ನಗರದ ಜನರಿಗೆ ಆಸರೆಯಾಗಿ ನಿತ್ಯ ರೈತರಿಂದ ನೇರವಾಗಿ ತಾಜಾ ಹಣ್ಣು, ತರಕಾರಿ, ಸೊಪ್ಪು ಸೇರಿದಂತೆ ‌ಇನ್ನಿತರ ಅವಶ್ಯಕ ವಸ್ತುಗಳನ್ನು ಖರೀದಿ‌ ಮಾಡಲು ಸಹಕಾರಿಯಾಗಿದೆ.

ತುರ್ತು ಸಂದರ್ಭದಲ್ಲಿ ಕೇವಲ ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಆರಂಭವಾದ ಈ ರೈತರ ಸಂತೆಯು ಒಂದೆಡೆ ಗ್ರಾಮೀಣ ರೈತರಿಗೆ ಬೆನ್ನೆಲುಬಾದರೆ, ವಸ್ತುಗಳನ್ನು ಕೊಳ್ಳುವ ಗ್ರಾಹಕರಿಗೆ ವರದಾನವಾಗಿದೆ. ಕಡಿಮೆ ದರದಲ್ಲಿ ಉತ್ಕೃಷ್ಟ ಮತ್ತು ತಾಜಾ ಹಣ್ಣು ಮತ್ತು ತರಕಾರಿಗಳನ್ನು ಮನೆಯ‌ ಸಮೀಪದಲ್ಲೆ ಜನರ ದಟ್ಟಣೆಯಿಲ್ಲದೆ ವ್ಯವಸ್ಥಿತವಾಗಿ ಪಡೆಯಲು ಸಾಧ್ಯವಾಗಿದೆ.

ADVERTISEMENT

ಈ ರೈತ ಸಂತೆಯ ಅಂಗವಾಗಿ ಸಾಕಷ್ಟು ಮಂದಿ ನಿರುದ್ಯೋಗ ಯುವಕರು ಸಂತೆಯಲ್ಲಿ ತೆಂಗಿನಕಾಯಿ, ಹಣ್ಣು, ತರಕಾರಿ, ಹೂವು ಸೇರಿದಂತೆ ಇನ್ನಿತರ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ಸ್ವಾವಲಂಬಿ ‌ಬದುಕು ರೂಪಿಸಿಕೊಂಡಿದ್ದಾರೆ.

ವಾರದ 7 ದಿನವೂ ನಗರದ ವಿವಿಧ ವಾರ್ಡ್‌ಗಳಲ್ಲಿ ನಡೆಯುವ ಈ ರೈತ ಸಂತೆಯು ಇತ್ತೀಚೆಗೆ ಹೆಚ್ಚಿನ ಪ್ರಚಾರ ಪಡೆದಿದೆ. ಯಾವುದೇ ದಲ್ಲಾಳಿಗಳ ಹಾವಳಿ ಇಲ್ಲದೆ ನೇರವಾಗಿ ಗ್ರಾಹಕರು ರೈತರಿಂದ ಪಡೆದು ತಮ್ಮ ಆರೋಗ್ಯ ಉತ್ತಮಪಡಿಸಿಕೊಳ್ಳಲು ಸಹಕಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.