ADVERTISEMENT

‘ಗಾಂಧಿ, ಶಾಸ್ತ್ರಿ ದೂರದರ್ಶಿತ್ವದ ನಾಯಕರು’

ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ 

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 6:47 IST
Last Updated 3 ಅಕ್ಟೋಬರ್ 2025, 6:47 IST
ಚಿಕ್ಕಬಳ್ಳಾಪುರದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಉದ್ಘಾಟಿಸಿದರು 
ಚಿಕ್ಕಬಳ್ಳಾಪುರದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಉದ್ಘಾಟಿಸಿದರು    

ಚಿಕ್ಕಬಳ್ಳಾಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಒಂದೊಂದು ತತ್ವಾದರ್ಶವೂ ವಿದ್ಯಾರ್ಥಿ, ಯುವಜನರಿಗೆ ಪ್ರೇರಣಾದಾಯಕ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ತಿಳಿಸಿದರು.

ನಗರದ ಗಾಂಧಿಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆ‌ಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಅವರ 156ನೇ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 121ನೇ ಜಯಂತಿ ಕಾರ್ಯಕ್ರಮ ‌ಉದ್ಘಾಟಿಸಿ ಮಾತನಾಡಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ ಅವರ ಪಾತ್ರ ಮತ್ತು ನಾಯಕತ್ವ ಹೆಚ್ಚು ಮಹತ್ವದ್ದಾಗಿದೆ. ಪರಕೀಯರ ಹಿಡಿತದಲ್ಲಿ ನಲುಗಿ ಸ್ವಂತ ನೆಲದಲ್ಲೇ ಅತಂತ್ರರಾಗಿ ಬದುಕುತ್ತಿದ್ದ ಭಾರತೀಯರನ್ನು ಸ್ವತಂತ್ರರನ್ನಾಗಿ ಮಾಡಲು ಹಗಲಿರುಳು ಶ್ರಮಿಸಿದರು ಎಂದರು.

ADVERTISEMENT

ಸತ್ಯ, ಅಹಿಂಸೆ, ಪ್ರಾಮಾಣಿಕತೆ, ದೇಶಪ್ರೇಮ ಮತ್ತು ದೇಶಭಕ್ತಿಯ ಮೂಲಕ ಸರಳ, ಸಜ್ಜನಿಕೆಯ ಜೀವನ ನಡೆಸಿದರು. ಗಾಂಧೀಜಿಯವರ ಪ್ರಭಾವದಿಂದ ಪ್ರೇರಿತರಾಗಿ ಹಲವು ವಿದ್ಯಾರ್ಥಿ ಯುವಜನರು ಶಾಲಾ ಕಾಲೇಜುಗಳನ್ನು ತೊರೆದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿ ದೇಶಭಕ್ತಿ ಮೆರೆದರು ಎಂದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶದ ಪ್ರಧಾನಿ ಹುದ್ದೆಯಂತ ಅತ್ಯುನ್ನತ ಹುದ್ದೇಗೇರಿದ್ದರೂ ಸರಳತೆ ಹೊಂದಿದ ನಾಯಕ. ಅವರ ‘ಜೈ ಜವಾನ್ ಜೈ ಕಿಸಾನ್’  ಘೋಷಣೆಗಳು ಆಗಿನ ಸಂದರ್ಭದಲ್ಲಿ ಅತ್ಯಂತ ರೋಮಾಂಚನಕಾರಿಯಾಗಿ ಜನಮನ ಸೆಳೆದಿದ್ದಲ್ಲದೆ, ರೈತರು ಮತ್ತು ಸೈನಿಕರ ಕುರಿತು ಗೌರವ ಮತ್ತು ಪ್ರೀತಿಗೆ ಉತ್ತೇಜಿಸಿದ್ದವು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ ಮುಖ್ಯ ಭಾಷಣ ಮಾಡಿದರು.   

ವೇದಿಕೆ ಕಾರ್ಯಕ್ರಮದಲ್ಲಿ ಸರ್ವಧರ್ಮಗಳ ಪ್ರತಿನಿಧಿಗಳು ಪ್ರಾರ್ಥನೆ ಸಲ್ಲಿಸಿದರು. ಗೀತಾ ಸತ್ಸಂಗ ಸೇವಾ ಸಮಿತಿಯ ನಳಿನಾಕ್ಷಿ ಹಾಗೂ ಅವರ ತಂಡದ ಸದಸ್ಯರು ಹಿಂದೂ ಧರ್ಮದ ಶ್ಲೋಕಗಳನ್ನು ಪಠಿಸಿದರು. ಮುಸ್ಲಿಂ ಧರ್ಮದ ಪ್ರತಿನಿಧಿಯಾಗಿ ಜಿಲ್ಲಾ ಕಾಜಿ ಮನ್ಸೂರ್ ಅಹಮದ್ ಖಾನ್ ಕುರಾನ್ ಸಂದೇಶ ನುಡಿದರು. ಕ್ರೈಸ್ತ ಧರ್ಮದ ಪ್ರತಿನಿಧಿಯಾಗಿ ಫಾದರ್ ಆಲ್ಬನ್ ಬೈಬಲ್ ಪ್ರಾರ್ಥನೆ ನೆರವೇರಿಸಿದರು. ಕಲಾವಿದ ಮಹಲಿಂಗಯ್ಯ ಮಠದ ಮತ್ತು ತಂಡ ಗಾಂಧೀಜಿಯವರ ಕುರಿತು ಗೀತಗಾಯನ, ಭಜನೆ ನಡೆಸಿಕೊಟ್ಟಿತು.

ಗಾಂಧಿ ಜಯಂತಿ ಪ್ರಯುಕ್ತ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸೇರಿದಂತೆ ವಿವಿಧ ಸ್ಪರ್ಧೆಗಳ ವಿಜೇತರಿ ಬಹುಮಾನಗಳನ್ನು ವಿತರಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ‘ಸ್ವಚ್ಚತಾ ಹಿ ಸೇವಾ’ ಕಾರ್ಯಕ್ರಮಕ್ಕೆ ಅಂಬೇಡ್ಕರ್ ವೃತ್ತದಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಚಾಲನೆ ನೀಡಿದರು.  ವಿದ್ಯಾರ್ಥಿಗಳು, ಪೌರಕಾರ್ಮಿಕರು, ಗಣ್ಯರು, ಅಧಿಕಾರಿಗಳು, ಪೌರಕಾರ್ಮಿಕರೊಂದಿಗೆ ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅತೀಕ್ ಪಾಷಾ, ತಹಶೀಲ್ದಾರ್ ರಶ್ಮಿ, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಜುಂಜಣ್ಣ, ವಾರ್ತಾ ಸಹಾಯಕ ಎಂ.ಆರ್.ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.