ADVERTISEMENT

ಬಾಗೇಪಲ್ಲಿ ಗಾರ್ಮೆಂಟ್ಸ್ | ಕಾರ್ಮಿಕರ ವಜಾ: ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 7:00 IST
Last Updated 22 ಆಗಸ್ಟ್ 2025, 7:00 IST
ಬಾಗೇಪಲ್ಲಿ ಹೊರವಲಯದ ಚೌದರಿ ಗಾರ್ಮೆಂಟ್ಸ್ ಗೇಟಿನ ಮುಂದೆ ಸಿಐಟಿಯು ಕಾರ್ಮಿಕ ಸಂಘಟನೆಯ ಡಿ.ಟಿ.ಮುನಿಸ್ವಾಮಿ, ಕೆ.ಮುನಿಯಪ್ಪ, ಅಶ್ವಥ್ಥಪ್ಪ, ಜಿ.ಕೃಷ್ಣಪ್ಪ, ದಲಿತ ಸಂಘಟನೆಯ ಕೆ.ವೆಂಕಟೇಶ್ ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ಮಾಡಿದರು
ಬಾಗೇಪಲ್ಲಿ ಹೊರವಲಯದ ಚೌದರಿ ಗಾರ್ಮೆಂಟ್ಸ್ ಗೇಟಿನ ಮುಂದೆ ಸಿಐಟಿಯು ಕಾರ್ಮಿಕ ಸಂಘಟನೆಯ ಡಿ.ಟಿ.ಮುನಿಸ್ವಾಮಿ, ಕೆ.ಮುನಿಯಪ್ಪ, ಅಶ್ವಥ್ಥಪ್ಪ, ಜಿ.ಕೃಷ್ಣಪ್ಪ, ದಲಿತ ಸಂಘಟನೆಯ ಕೆ.ವೆಂಕಟೇಶ್ ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ಮಾಡಿದರು   

ಬಾಗೇಪಲ್ಲಿ: ಇಲ್ಲಿನ ಟೋಲ್ ಪ್ಲಾಜಾ ಪಕ್ಕದಲ್ಲಿರುವ ಚೌದರಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 130 ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಆರೋಪಿಸಿ ಗಾರ್ಮೆಂಟ್ಸ್ ಎದುರು ಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು. 

ರಾಷ್ಟ್ರೀಯ ಹೆದ್ದಾರಿ-44ರ ಟೋಲ್ ಪ್ಲಾಜಾದ ಬಳಿಯ ಚೌದರಿ ಗಾರ್ಮೆಂಟ್ಸ್‌ನಲ್ಲಿ ಘಂಟಂವಾರಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟಪರ್ತಿ, ಕೊಂಡರೆಡ್ಡಿಪಲ್ಲಿ, ಆದಿಗಾನಹಳ್ಳಿ ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಬುಧವಾರ ಸಂಜೆ ಗಾರ್ಮೆಂಟ್ಸ್ ವ್ಯವಸ್ಥಾಪಕ ಮಹೇಂದರ್ ಅವರು, 130 ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು. 

ಕಾರ್ಮಿಕರಿಗೆ ನೋಟಿಸ್ ನೀಡದೆ, ಏಕಾಏಕಿ ಕೆಲಸದಿಂದ ತೆಗೆದು ಹಾಕಲಾಗಿದೆ. ಕಾರ್ಮಿಕರು ಚೀಟಿ, ಮನೆ ಹಾಗೂ ಆರೋಗ್ಯ ಚಿಕಿತ್ಸೆ, ಸಾಲ ತೀರಿಸುವುದು ಸೇರಿದಂತೆ ವಿವಿಧ ಖರ್ಚುಗಳಿಗಾಗಿ ವೇತನವನ್ನೇ ನಂಬಿಕೊಂಡು ಕೆಲಸ ಮಾಡುತ್ತಿದ್ದೇವೆ. ನಮ್ಮಿಂದ ಕಂಪನಿಗೆ ಯಾವುದೇ ತೊಂದರೆ ಇಲ್ಲ. ಆದರೆ, ಏಕಾಏಕಿ 130 ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ಕಾರಣವೇನು ಎಂದು ಪ್ರತಿಭಟನಕಾರರು ಪ್ರಶ್ನಿಸಿದರು. 

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಗಾರ್ಮೆಂಟ್ಸ್ ಅಧಿಕಾರಿಗಳು ಬರದಿದ್ದಕ್ಕೆ ಆಕ್ರೋಶಗೊಂಡ ಕಾರ್ಮಿಕರು, ಗಾರ್ಮೆಂಟ್ ಕೊಠಡಿಗಳಿಗೆ ನುಗ್ಗಿ, ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ತಮಗೆ ಬೆಂಬಲಿಸುವಂತೆ ಮನವಿ ಮಾಡಿದರು. ಇದರಿಂದಾಗಿ ಕಾರ್ಖಾನೆಯಲ್ಲಿ ಕೆಲಹೊತ್ತು ಕೆಲಸ ಸ್ಥಗಿತಗೊಂಡಿತು. 

ಸಿಐಟಿಯುನ ಕಾರ್ಮಿಕ ಮುಖಂಡ ಡಿ.ಟಿ.ಮುನಿಸ್ವಾಮಿ, ಕೆ.ಮುನಿಯಪ್ಪ, ಅಶ್ವಥ್ಥಪ್ಪ, ಜಿ.ಕೃಷ್ಣಪ್ಪ, ದಲಿತ ಸಂಘಟನೆಯ  ಕೆ.ವೆಂಕಟೇಶ್ ನೇತೃತ್ವದಲ್ಲಿ ಗಾರ್ಮೆಂಟ್ ಮುಂದೆ ಕಾರ್ಮಿಕರು ಪ್ರತಿಭಟನೆ ಮುಂದುವರೆಸಿದರು.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಸಬ್ ಇನ್‌ಸ್ಪೆಕ್ಟರ್ ನಾಗಮ್ಮ, ಸಹಾಯಕ ಸಬ್ ಇನ್‌ಸ್ಪೆಕ್ಟರ್ ಹನುಮಂತರಾಯಪ್ಪ, ಗಾರ್ಮೆಂಟ್ಸ್ ವ್ಯವಸ್ಥಾಪಕ ಮಹೇಂದರ್ ಪ್ರತಿಭಟನಕಾರರ ಸಮಸ್ಯೆಗಳನ್ನು ಆಲಿಸುವ ಮೂಲಕ ಮನವೊಲಿಕೆಗೆ ಯತ್ನಿಸಿದರು.

ಕೆಲಸದಿಂದ ತೆಗೆಯಲಾದ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ವೇತನ, ಪಿಎಫ್ ಹಣವನ್ನು ಸಕಾಲಕ್ಕೆ ವಿತರಣೆ ಮಾಡಬೇಕು. ಇಲ್ಲವಾದರೆ, ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು. 

ಗಾರ್ಮೆಂಟ್ ವ್ಯವಸ್ಥಾಪಕ ಮಹೇಂದರ್ ಪ್ರತಿಕ್ರಿಯಿಸಿ, ‘ಭಾರತದ ಮೇಲೆ ಅಮೆರಿಕ ವಿಧಿಸಿದ ಹೆಚ್ಚುವರಿ ಸುಂಕದಿಂದ ಹೆಚ್ಚು ಕಾರ್ಮಿಕರಿಗೆ ವೇತನ, ಪಿಎಫ್ ಸೇರಿದಂತೆ ಇನ್ನಿತರ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅನಿವಾರ್ಯವಾಗಿ ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಗಿದೆ’ ಎಂದು ಸಮುಜಾಯಿಷಿ ನೀಡಿದರು. 

‘ನಮಗೆ ಕೆಲಸ ಕೊಟ್ಟರೆ ಮಾಡಲು ಸಿದ್ಧರಿದ್ದೇವೆ. ನಮ್ಮನ್ನು ಏಕಾಏಕಿ ಕೆಲಸದಿಂದ ತೆಗೆಯಬೇಡಿ’ ಎಂದು ಕಾರ್ಮಿಕರು ಮನವಿ ಮಾಡಿದರು.  

ಗಾರ್ಮೆಂಟ್ ವ್ಯವಸ್ಥಾಪಕ ಮಹೇಂದರ್, ಮುಖ್ಯಸ್ಥರೊಡನೆ ಮಾತನಾಡಿದರು. ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸುವಂತೆ, ಹಾಗೂ ಗುರುವಾರದ ವೇತನ ಕಡಿತ ಮಾಡದೆ ಕಾರ್ಮಿಕರಿಗೆ ವಿತರಿಸುವಂತೆ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ಘೋಷಿಸಿದರು. ಆಗ ಕಾರ್ಮಿಕರು ಪ್ರತಿಭಟನೆ ವಾಪಸ್ ಪಡೆದರು.

ಗಾರ್ಮೆಂಟ್ಸ್ ವ್ಯವಸ್ಥಾಪಕ ಕಚೇರಿಗೆ ಕಾರ್ಮಿಕರು ಮುತ್ತಿಗೆ ಹಾಕಿದ ಕಾರ್ಮಿಕರು

Cut-off box - ‘ಕಾರ್ಮಿಕರು ಮನೆ ಆಳುಗಳಲ್ಲ’ ಕಾರ್ಮಿಕರು ಮನೆ ಆಳುಗಳು ಅಲ್ಲ. ಇಷ್ಟ ಬಂದಾಗ ಕೆಲಸ ಮಾಡಿಸೋದು ಕಷ್ಟ ಆದಾಗ ಮನೆಗೆ ಕಳಿಸೋದು ಅಲ್ಲ. ಕಾರ್ಮಿಕರಿಗೂ ಬಾಧ್ಯತೆಗಳಿರುತ್ತವೆ. ತಮ್ಮ ಮನೆ ಮಕ್ಕಳ ಶಾಲಾ ಶುಲ್ಕ ಸೇರಿದಂತೆ ಇನ್ನಿತರ ವೆಚ್ಚಗಳಿಗಾಗಿ ವೇತನವನ್ನೇ ನಂಬಿಕೊಂಡಿರುತ್ತಾರೆ ಎಂದು ಸಿಐಟಿಯು ತಾಲ್ಲೂಕು ಮುಖಂಡ ಕೆ.ಮುನಿಯಪ್ಪ ಹೇಳಿದರು.  ಕಾರ್ಮಿಕರನ್ನು ಕೆಲಸದಿಂದ ತೆಗೆಯಬೇಕಾದರೆ ಮೂರು ತಿಂಗಳ ಮುಂಚಿತವಾಗಿ ನೋಟಿಸ್ ನೀಡಬೇಕು. ಆ ನೋಟಿಸ್‌ಗೆ ಕಾರ್ಮಿಕರಿಂದ ಉತ್ತರ ಪಡೆಯಬೇಕು. ಆದರೆ ಏಕಾಏಕಿ 130 ಕಾರ್ಮಿಕರನ್ನು ಕೆಲಸದಿಂದ ತೆಗೆದಿರುವುದು ಕಾರ್ಮಿಕ ಕಾಯ್ದೆಗಳ ಉಲ್ಲಂಘನೆ. ವಜಾಗೊಳಿಸಿದ ಕಾರ್ಮಿಕರನ್ನು ತಕ್ಷಣವೇ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.