
ಗೌರಿಬಿದನೂರು ನಗರದ ಇಡಗೂರು ರಸ್ತೆಯಲ್ಲಿರುವ ಆದರ್ಶ ಶಾಲೆಯಲ್ಲಿನ ಶೌಚಾಲಯದ ದುಸ್ಥಿತಿ
ಗೌರಿಬಿದನೂರು: ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರವು ಲಕ್ಷಾಂತರ ರೂಪಾಯಿ ವ್ಯಯಿಸುತ್ತದೆ. ಇದರ ಹೊರತಾಗಿಯೂ, ಇಲ್ಲಿನ ಇಡಗೂರು ರಸ್ತೆಯಲ್ಲಿರುವ ಆದರ್ಶ ಶಾಲೆ ಮಾತ್ರ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ.
ನೆಲಕ್ಕೆ ಜೋತು ಬಿದ್ದಂತಿರುವ ಪ್ಯಾನ್‌ಗಳ ರೆಕ್ಕೆಗಳು, ವಿದ್ಯುತ್ ಸ್ವಿಚ್ ಬೋರ್ಡ್‌ನಿಂದ ಬೇರ್ಪಟ್ಟು ಹೊರ ಬಿದ್ದಿರುವ ಸಾಕೆಟ್‌ಗಳು, ಶೌಚಾಲಯಕ್ಕೆ ನೀರು ಹಾಯಿಸುವ ಪರಿಕರಗಳು ನೆಲಕ್ಕುರುಳಿರುವುದು, ಶೌಚಾಲಯದಲ್ಲಿ ಹುಳುಗಳ ರಾಶಿ. ಈ ಎಲ್ಲಾ ದೃಶ್ಯಾವಳಿಗಳು ಕಂಡುಬರುವುದು ಯಾವುದೊ ಖಾಸಗಿ ಕಟ್ಟಡ ಅಥವಾ ಮಾರುಕಟ್ಟೆಯಲ್ಲಿ ಅಲ್ಲ. ಬದಲಿಗೆ ನಗರದ ಇಡಗೂರು ರಸ್ತೆಯಲ್ಲಿರುವ ಆದರ್ಶ ಶಾಲೆಯಲ್ಲಿ. ಅಚ್ಚರಿ ಎನಿಸಿದರೂ ಇದೇ ವಾಸ್ತವ ಸ್ಥಿತಿ ಎನ್ನುತ್ತಾರೆ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು.
ಒಟ್ಟಾರೆ ಈ ಶಾಲೆಯಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು, ವಿದ್ಯಾರ್ಥಿಗಳ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಡ ವಿದ್ಯಾರ್ಥಿಗಳ ಉತ್ತಮ ವಿದ್ಯಾಭ್ಯಾಸಕ್ಕಾಗಿ ಸರ್ಕಾರವು ಆದರ್ಶ ಶಾಲೆಯನ್ನು ಆರಂಭಿಸಿದೆ. ಈ ಪ್ರಕಾರ ಈ ಶಾಲೆಯಲ್ಲಿ ಒಟ್ಟಾರೆ 493 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಪೈಕಿ 253 ವಿದ್ಯಾರ್ಥಿನಿಯರು ಮತ್ತು 240 ವಿದ್ಯಾರ್ಥಿಗಳಿದ್ದಾರೆ. ಅಲ್ಲದೆ, ಪ್ರಸಕ್ತ ವರ್ಷದಿಂದ ಪಿಯುಸಿ ಶಿಕ್ಷಣಕ್ಕೂ ಹಲವು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಸರ್ಕಾರವೂ ಈ ಶಾಲೆಗೆ ಉತ್ತಮ ಅನುದಾನ ನೀಡುತ್ತಿದೆ. ಆದರೆ, ಶಾಲಾ ಆಡಳಿತ ಮಂಡಳಿ ಮಾತ್ರ ಬೇಜವಾಬ್ದಾರಿಯಿಂದ ವರ್ತಿಸುವ ಮೂಲಕ ಶಾಲೆಯಲ್ಲಿ ಸ್ವಚ್ಛತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಶಾಲಾ ಪ್ರಾಂಶುಪಾಲ, ಆಡಳಿತ ಮಂಡಳಿ ಅಥವಾ ಸಂಬಂಧಪಟ್ಟ ಇತರ ಅಧಿಕಾರಿಗಳು ಸಹ ಸ್ವಚ್ಛತೆ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ದೂರುತ್ತಾರೆ.
1. ಕಿತ್ತೂಹೋಗಿರುವ ವಿದ್ಯುತ್ ಬೋರ್ಡ್
ಶಾಲೆಯಲ್ಲಿರುವ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಇರುವ ಇರುವ ಪ್ರಯೋಗಾಲಯಗಳನ್ನು ಹಲವು ತಿಂಗಳುಗಳಿಂದ ತೆಗೆದೇ ಇಲ್ಲ ಎಂಬಂತಿದೆ. ಈ ಕೊಠಡಿಗಳ ಪ್ರವೇಶದ ಮುಂದೆ ಗಿಡಗಂಟಿಗಳು
ಬೆಳೆದು ನಿಂತಿವೆ.
ಶಾಲೆಯಲ್ಲಿನ ಶೌಚಾಲಯಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು ಆಡಳಿತ ಮಂಡಳಿಯ ಕರ್ತವ್ಯ. ಆದರೆ, ಇಲ್ಲಿನ ಶೌಚಾಲಯಗಳಿಗೆ ಹೋದರೆ, ರೋಗರುಜಿನಗಳು ವ್ಯಾಪಿಸುತ್ತವೆ ಎಂಬ ಭಯ ಹುಟ್ಟಿಸುವಂತಿದೆ ಶೌಚಾಲಯಗಳ ಸ್ಥಿತಿ ಎನ್ನುತ್ತಾರೆ ವಿದ್ಯಾರ್ಥಿಗಳು.
ಶೌಚಾಲಯಗಳನ್ನು ಸ್ವಚ್ಛ ಮಾಡದ ಕಾರಣ ಶೌಚಾಲಯದ ದುರ್ವಾಸನೆಯು ವಿದ್ಯಾರ್ಥಿಗಳು ಕುಳಿತು ಪಾಠ ಕೇಳುವ ತರಗತಿಗಳಿಗೂ ವ್ಯಾಪಿಸುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡೇ ತರಗತಿಯಲ್ಲಿ ಕುಳಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಕೆಲವು ಶೌಚಾಲಯಗಳ ಬಾಗಿಲುಗಳಲ್ಲಿ ಹುಳುಗಳು ಸೇರಿಕೊಂಡಿವೆ. ಶೌಚಾಲಯದ ಪರಿಕರಗಳು ಸಂಪೂರ್ಣವಾಗಿ ಹಾಳಾಗಿದ್ದು, ಶೌಚಾಲಯದತ್ತ ಮುಖ ಮಾಡಲು ವಿದ್ಯಾರ್ಥಿಗಳು ಹಿಂದೇಟು ಹಾಕುವಂತಾಗಿದೆ. ಕೆಲವು ಶೌಚಾಲಯಗಳಲ್ಲಿ ನೀರು ಬರುವುದಿಲ್ಲ. ಶೌಚಾಲಯದ ಗೋಡೆಗಳ ಮೇಲೆ ಅಶ್ಲೀಲ ಬರಹಗಳು ವಿದ್ಯಾರ್ಥಿಗಳನ್ನು ಮುಜುಗರಕ್ಕೀಡು ಮಾಡುತ್ತಿದೆ.
ಸ್ವಿಚ್ ಬೋರ್ಡ್‌ನಿಂದ ಕಿತ್ತು ಹೊರ ಬಿದ್ದಿರುವ ಸಾಕೆಟ್
ಅಪಾಯಕ್ಕೆ ಕಾದಿರುವ ಸ್ವಿಚ್ ಬೋರ್ಡ್
ಶಾಲಾ ಕೊಠಡಿಗಳಲ್ಲಿರುವ ಬಹುತೇಕ ಫ್ಯಾನ್‌ಗಳ ರೆಕ್ಕೆಗಳು ನೆಲಕ್ಕೆ ಬಾಗಿವೆ. ಕೆಲವು ರೆಕ್ಕೆಗಳು ಮುರಿಬಿದ್ದಿವೆ. ವಿದ್ಯಾರ್ಥಿಗಳ ಕೈಗೆಟಕುವಂತಿರುವ ವಿದ್ಯುತ್ ಸ್ವಿಚ್ ಬೋರ್ಡ್‌ಗಳು ಹಾಳಾಗಿದ್ದು, ವಿದ್ಯುತ್ ತಂತಿ ವೈರ್‌ಗಳು ಮತ್ತು ಸಾಕೆಟ್‌ಗಳು ಹೊರಬಂದಿವೆ. ವಿದ್ಯಾರ್ಥಿಗಳು ಕೊಂಚ ಎಚ್ಚರ ತಪ್ಪಿ ಮುಟ್ಟಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ, ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಳ್ಳುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರವು ವಿದ್ಯಾರ್ಥಿನಿಯರ ಆರೋಗ್ಯ ದೃಷ್ಟಿಯಿಂದ 2022ರಲ್ಲಿ ನೀಡಿರುವ ಐರನ್ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳ ಅವಧಿ ಮುಗಿದಿದ್ದರೂ, ಆ ಮಾತ್ರೆಗಳನ್ನು ಗೋದಾಮಿನಲ್ಲಿ ಹಾಗೆಯೇ ಸಂಗ್ರಹಿಸಿಡಲಾಗಿದೆ.
ವಿದ್ಯಾರ್ಥಿಗಳ ಕೊಠಡಿಯಲ್ಲಿ ನೆಲಕ್ಕೆ ಮುಖ ಮಾಡಿದಂತೆ ಬಾಗಿರುವ ಫ್ಯಾನ್‌ಗಳು
‘ಅನುದಾನ ಬಂದಿಲ್ಲ’
ದಸರಾ ರಜೆ ಸಂದರ್ಭದಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಗಿತ್ತು. ಈ ವೇಳೆ 10ನೇ ತರಗತಿ ವಿದ್ಯಾರ್ಥಿಗಳು ಮತ್ತು ಹೊರಗಿನ ಕೆಲವು ವ್ಯಕ್ತಿಗಳು ಬಂದು ಶಾಲೆಯಲ್ಲಿನ ಫ್ಯಾನ್‌ಗಳನ್ನು ಮುರಿದು ಹಾಕಿದ್ದಾರೆ. ಕೆಲವು ಸಿ.ಸಿ. ಕ್ಯಾಮೆರಾಗಳು ಕೆಟ್ಟಿವೆ. ಯುಪಿಎಸ್ ಇಲ್ಲದ ಕಾರಣ ವಿದ್ಯುತ್ ಇದ್ದಾಗ ಮಾತ್ರವೇ ಸಿಸಿಟಿವಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತವೆ. ಅವುಗಳ ದುರಸ್ತಿಗೆ ಸರ್ಕಾರದಿಂದ ಅನುದಾನ ಬಂದಿಲ್ಲ.ಗಂಗಾಂಬಿಕೆ, ಶಾಲಾ ಪ್ರಾಂಶುಪಾಲರು
ಶೌಚಾಲಯದಲ್ಲಿ ಹುಳುಗಳ ರಾಶಿ
ಸ್ವಚ್ಛತೆಗೆ ಗಮನ ವಹಿಸುವುದು ಪ್ರಾಂಶುಪಾಲರ ಕರ್ತವ್ಯ. ಆದರ್ಶ ಶಾಲೆಯಲ್ಲಿನ ಅವ್ಯವಸ್ಥೆ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಎರಡು ದಿನಗಳಲ್ಲಿ ಶಾಲಾ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದುಗಂಗರೆಡ್ಡಿಬಿಇಒ, ಗೌರಿಬಿದನೂರು
ವಿದ್ಯಾರ್ಥಿನಿಯರಿಗೆ ಸರ್ಕಾರ ನೀಡಿರುವ ಮಾತ್ರೆಗಳು ರಾಶಿಯಾಗಿ ಬಿದ್ದಿರುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.