
ಗೌರಿಬಿದನೂರು: ತಾಲ್ಲೂಕಿನಲ್ಲಿ ಚಿಮುಲ್ ಚುನಾವಣೆ ಕಾವು ದಿನೇ ದಿನೇ ರಂಗೇರುತ್ತಿದೆ. ಹಾಲಿ ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ ಮತ್ತು ಮಾಜಿ ಶಾಸಕ ಎನ್. ಎಚ್. ಶಿವಶಂಕರರೆಡ್ಡಿ, ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಚಿಮುಲ್ ಚುನಾವಣೆಯಲ್ಲಿ ಯಾರು ಗೆಲ್ಲುವರು ಎಂಬ ಕುತೂಹಲ ತಾಲ್ಲೂಕಿನ ಜನರಲ್ಲಿ ಮನೆ ಮಾಡಿದೆ.
ಕೆಎಚ್‌ಪಿ ಬಣದಿಂದ ಡಿ.ಎನ್. ವೆಂಕಟರೆಡ್ಡಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಅವರಿಗೆ ಪ್ರೆಶರ್ ಕುಕ್ಕರ್ ಗುರುತು ನೀಡಲಾಗಿದೆ. ಇನ್ನು ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಜಿ.ಎಲ್. ದಿನೇಶ್ ಅವರು ವೆಂಕಟರೆಡ್ಡಿ ಅವರಿಗೆ ಸವಾಲೊಡ್ಡುವ ತವಕದಲ್ಲಿದ್ದಾರೆ. ಜಿ.ಎಲ್. ದಿನೇಶ್ ಅವರಿಗೆ ಆಟೊರಿಕ್ಷಾ ಗುರುತು ನೀಡಲಾಗಿದೆ.
ಕ್ಷೇತ್ರದಲ್ಲಿ 75 ಡೆಲಿಗೇಟ್‌ಗಳಿದ್ದಾರೆ. ತಾಲ್ಲೂಕಿನ ಕುರೂಡಿ, ರಮಾಪುರ, ಮುದುಗೆರೆ, ಸೊನಗಾನಹಳ್ಳಿ, ಹೊಸೂರು, ದೊಡ್ಡಕುರುಗೋಡು, ಕಾದಲವೇಣಿ, ಹಾಲಗಾನಹಳ್ಳಿ, ಚಿಕ್ಕಕುರುಗೋಡು, ಗಂಗಸಂದ್ರ, ಇಡಗೂರು, ಬೈಚಾಪುರ, ಕುರುಬರಹಳ್ಳಿ, ನಗರಗೆರೆ, ಮೇಳ್ಯಾ, ಮುದ್ದುಲೋಡು, ನಕ್ಕಲಹಳ್ಳಿ, ಗುಂಡ್ಲಕೊತ್ತೂರು, ವಾಟದಹೊಸಹಳ್ಳಿ, ಬಿ.ಬೊಮ್ಮಸಂದ್ರ, ನಾಮಗೊಂಡ್ಲು, ಹುದುಗೂರು, ಡಿ.ಪಾಳ್ಯ, ಗೌರಿಬಿದನೂರು ನಗರಸಭೆ ವ್ಯಾಪ್ತಿಗೆ ಬರುತ್ತವೆ.
ತಮ್ಮ ಬೆಂಬಲಿತ ಅಭ್ಯರ್ಥಿ ಡಿ.ಎನ್. ವೆಂಕಟರೆಡ್ಡಿ ಅವರ ಗೆಲುವಿಗಾಗಿ ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ ಈಗಾಗಲೇ ಕಾರ್ಯತಂತ್ರಗಳನ್ನು ಹೆಣೆಯುವಲ್ಲಿ ನಿರತರಾಗಿದ್ದಾರೆ. ತಾಲ್ಲೂಕಿನಲ್ಲಿ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ತಮಗೆ ಶ್ರೀರಕ್ಷೆಯಾಗಿದ್ದು, ಅವುಗಳೇ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲಿವೆ ಎಂಬ ದೃಢ ವಿಶ್ವಾಸದಲ್ಲಿದ್ದಾರೆ ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ.
ಮತ್ತೊಂದೆಡೆ ಕಳೆದ 25 ವರ್ಷಗಳಿಂದ ಶಾಸಕರಾಗಿದ್ದ ಎನ್.ಎಚ್. ಶಿವಶಂಕರರೆಡ್ಡಿ ಅವರು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಅನುಭವವನ್ನು ಒರೆಗೆ ಹಚ್ಚಲು ಮುಂದಾಗಿದ್ದಾರೆ. ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಗೆ ವೇದಿಕೆ ಸಿದ್ಧಪಡಿಸಿಕೊಳ್ಳಲು ಕಾತರರಾಗಿದ್ದಾರೆ. ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಲು ಸ್ವತಃ ತಾವೇ ಪ್ರಚಾರಕ್ಕೆ ಇಳಿದಿರುವ ಶಿವಶಂಕರರೆಡ್ಡಿ ಅವರು ಹೋಬಳಿ ಮಟ್ಟದಲ್ಲಿ ಪ್ರಚಾರ ಕೈಗೊಂಡಿದ್ದಾರೆ.
ಒಟ್ಟಾರೆ ತಾಲ್ಲೂಕಿನಲ್ಲಿ ಚಿಮುಲ್ ಚುನಾವಣೆ ಕಾಂಗ್ರೆಸ್ ಮತ್ತು ಕೆಎಚ್‌ಪಿ ನಡುವಿನ ನೇರ ಹಣಾಹಣಿಗೆ ಕಾರಣವಾಗಿದೆ. ಮತದಾರರನ್ನು ಸೆಳೆಯಲು ನಾಯಕರು ತಮ್ಮದೇ ತಂತ್ರ, ಪ್ರತಿತಂತ್ರಗಳನ್ನು ರೂಪಿಸುತ್ತಿದ್ದಾರೆ. ಆದರೆ, ರಾಜಕೀಯ ಒಳ ಸುಳಿಗಳು ಯಾವ ರೀತಿ ಕೆಲಸ ಮಾಡುತ್ತವೆ ಎಂಬುದು ಕಾದುನೋಡಬೇಕಿದೆ.
ಅಂತಿಮವಾಗಿ ಮತದಾರರು ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಕುತೂಹಲ ಇಡೀ ಕ್ಷೇತ್ರದ ಜನರಲ್ಲಿದೆ. ಎಲ್ಲಕ್ಕೂ ಕಾಲವೇ ಉತ್ತರಿಸಲಿದೆ ಎಂಬುದು ನಾಗರಿಕರ ಅಭಿಪ್ರಾಯ.
25 ವರ್ಷಗಳಿಂದ ಹಾಲಿನ ಡೇರಿಯಲ್ಲಿ ಕೆಲಸ ಮಾಡಿದ ಅನುಭವವಿದೆ. ಹಾಲಿನ ದರ ಹೆಚ್ಚಳಕ್ಕೆ ಅನೇಕ ಬಾರಿ ಹೋರಾಟ ಮಾಡಿದ್ದೇನೆ. ರೈತರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಮತದಾರರು ಗೆಲ್ಲಿಸುವ ವಿಶ್ವಾಸವಿದೆ.
–ಡಿ.ಎಂ. ವೆಂಕಟರೆಡ್ಡಿ ಕೆಎಚ್‌ಪಿ ಅಭ್ಯರ್ಥಿ
––
ನಾನು ಮೂಲತಃ ಕೃಷಿಕ. ಡೇರಿಯಲ್ಲಿ ಕೆಲಸ ಮಾಡಿದ ಅನುಭವವಿದೆ ರೈತರ ಕಷ್ಟಗಳನ್ನು ಅರಿತಿದ್ದೇನೆ. ಡೆಲಿಗೇಟ್‌ಗಳು ಈ ಬಾರಿ ನನ್ನನ್ನು ಗೆಲ್ಲಿಸುವ ವಿಶ್ವಾಸ ಹೊಂದಿದ್ದೇನೆ
–ದಿನೇಶ್ ಚಿಮುಲ್ ಕಾಂಗ್ರೆಸ್ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.