ಚಾಕು
(ಸಾಂದರ್ಭಿಕ ಚಿತ್ರ)
ಗೌರಿಬಿದನೂರು: ಇಲ್ಲಿನ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಚಾಕುವಿನಿಂದ ಇರಿದ ಘಟನೆ ಭಾನುವಾರ ನಡೆದಿದೆ.
ಹೇಮಾವತಿ (26) ಇರಿತಕ್ಕೊಳಗಾಗಿ ಗಾಯಗೊಂಡ ಮಹಿಳೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ತೆಯ ಪತಿಯಾದ ಆರೋಪಿ ನಾಗರಾಜು ಅವರನ್ನು ವಶಕ್ಕೆ ಪಡೆದು, ವಿಚಾರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೌರಿಬಿದನೂರು ತಾಲ್ಲೂಕಿನ ಕಾದಲವೇಣಿ ಗ್ರಾಮದ ನಾಗರಾಜು ಮತ್ತು ಹೇಮಾವತಿ ಆರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಎರಡನೇ ಮಗುವಿನ ಹೆರಿಗೆಗೆ ತವರು ಮನೆಗೆ ಹೋಗಿದ್ದ ಹೇಮಾವತಿ ಮತ್ತೆ ಗಂಡನ ಮನೆಗೆ ವಾಪಸ್ ಬಂದಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಆರೋಪಿಯು, ಭಾನುವಾರ ಮಂಚೇನಹಳ್ಳಿ ಬಳಿಯ ವರವಣಿ ಗ್ರಾಮದಲ್ಲಿ ಪೂಜಾ ಸಾಮಗ್ರಿ ಖರೀದಿಸುತ್ತಿದ್ದ ಹೇಮಾವತಿ ಅವರನ್ನು ಚಾಕುವಿನಿಂದ ತಿವಿದಿದ್ದಾನೆ.
ಈ ವೇಳೆ ಸ್ಥಳೀಯರು ಮತ್ತು ಹೇಮಾವತಿ ಅವರ ಅಜ್ಜಿ ಗಂಗಮ್ಮ ಬಂದು ಬಿಡಿಸಿದ್ದಾರೆ. ಆದಾಗ್ಯೂ, ಹೇಮಾವತಿ ಅವರ ತಲೆ, ಬೆನ್ನು ಮತ್ತು ಕೈ ಬೆರಳುಗಳಿಗೆ ಗಾಯಗಳಾಗಿದ್ದು, ಅವರನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಲ್ಲದೆ, ತನ್ನ ಪತ್ನಿಯನ್ನು ಉದ್ದೇಶಿಸಿ, ‘ನೀನು ನಿನ್ನ ತವರು ಊರಿನಲ್ಲಿ ಯಾರೊಂದಿಗೊ ಸಂಬಂಧ ಹೊಂದಿದ್ದೀಯಾ. ಇದೇ ಕಾರಣಕ್ಕೆ ನನ್ನ ಮನೆಗೆ ಬರುತ್ತಿಲ್ಲ’ ಎಂದು ಆರೋಪಿ ನಿಂದಿಸಿದ್ದಾನೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.