ADVERTISEMENT

ಗೌರಿಬಿದನೂರು; ಸೌಲಭ್ಯಕ್ಕೆ ಕನವರಿಸುತ್ತಿದೆ ಕುಡಮಲಕುಂಟೆ

ಕೆ.ಎನ್‌.ನರಸಿಂಹಮೂರ್ತಿ
Published 3 ಫೆಬ್ರುವರಿ 2025, 7:15 IST
Last Updated 3 ಫೆಬ್ರುವರಿ 2025, 7:15 IST
ಕುಡಮಲಕುಂಟೆ ಕೈಗಾರಿಕಾ ಪ್ರದೇಶದ ಪ್ರವೇಶ ದ್ವಾರ
ಕುಡಮಲಕುಂಟೆ ಕೈಗಾರಿಕಾ ಪ್ರದೇಶದ ಪ್ರವೇಶ ದ್ವಾರ   

ಗೌರಿಬಿದನೂರು: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ತಾಲ್ಲೂಕಿನ ಗಡಿ ಭಾಗದ ಕುಡಮಲಕುಂಟೆಯಲ್ಲಿ ಅಭಿವೃದ್ಧಿಪಡಿಸಿರುವ ಕೈಗಾರಿಕಾ ಪ್ರದೇಶದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಹಂತ ಹಂತವಾಗಿ ಇಲ್ಲಿ ಕೈಗಾರಿಕಾ ಚಟುವಟಿಕೆಗಳು ಆರಂಭವಾಗಿದೆ. ಕೆಐಎಡಿಬಿ ಕೈಗಾರಿಕೆಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಿದೆ. ನಿವೇಶನಗಳನ್ನ ಅಭಿವೃದ್ಧಿಪಡಿಸಿ ಹಂಚಿದೆ. ಆದರೆ ಮೂಲ ಸೌಕರ್ಯಗಳ ಕಡೆ ಮಾತ್ರ ಗಮನ ಹರಿಸಿಲ್ಲ.

ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಿ, ಹಂಚಿಕೆ ಮಾಡುವ ಪೂರ್ವದಲ್ಲೆ ರಸ್ತೆ, ನೀರು, ಉದ್ಯಾನ ಹಾಗೂ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದ ಕಟ್ಟಡ ಕಾಮಾಗಾರಿಗಳನ್ನು ಸಂಪೂರ್ಣ ನಿರ್ಮಿಸಿಕೊಡಬೇಕು. ಆದರೆ ಈ ಯಾವ ಕಾರ್ಯಗಳೂ ಆಗಿಲ್ಲ. ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸದೆ ನಿವೇಶನ ಹಂಚಿಕೆ ಮಾಡಲಾಗಿದೆ.

ADVERTISEMENT

ಮೊದಲನೇ ಹಂತವಾಗಿ 239 ಎಕರೆ, ಎರಡನೇ ಹಂತದಲ್ಲಿ 435 ಎಕರೆ ಹಾಗೂ ಮೂರನೇ ಹಂತದಲ್ಲಿ 825 ಎಕರೆ ಜಮೀನನನ್ನು ಸರ್ಕಾರ ರೈತರಿಂದ ಭೂ ಸ್ವಾಧೀನಪಡಿಸಿಕೊಂಡಿದೆ. ಒಟ್ಟು 1,499 ಎಕರೆಯಷ್ಟು ಜಾಗದಲ್ಲಿ ಕೈಗಾರಿಕಾ ಪ್ರದೇಶವನ್ನು ವಿಸ್ತರಣೆ ಮಾಡಲಾಗಿದೆ. ಆದರೆ ಮೂಲ ಸೌಕರ್ಯಗಳನ್ನು ಒದಗಿಸಲು ಮಾತ್ರ ಆಸಕ್ತಿ ತೋರಿಲ್ಲ.

ಇಲ್ಲಿ ಜಾಕಿ, ಎ–1 ಸ್ಟೀಲ್, ಅಜಾಕ್ಸ್, ಯುರೊ ಸೂಟ್ಸ್, ಆರ್‌ಎಲ್‌ಎಫ್‌ಸಿ, ಅಲ್ಯೂಮಿನಿಯಂ ಕಂಪನಿಗಳು, ರೀಫೈನ್ಡ್ ಆಯಿಲ್ ಕಂಪನಿಗಳು ಸೇರಿದಂತೆ 50ಕ್ಕೂ ಹೆಚ್ಚು ಸಣ್ಣ ಮತ್ತು ಬೃಹತ್ ಕೈಗಾರಿಕೆಗಳು ನಿರ್ಮಾಣವಾಗಿವೆ. ಅಂದಾಜು 30 ರಿಂದ 40 ಸಾವಿರದಷ್ಟು ಕಾರ್ಮಿಕರು ಕೆಲಸ ನಿರ್ವಹಿಸುತ್ತಾರೆ.

ಈ ಪ್ರದೇಶದಲ್ಲಿ ನಿರ್ಮಿಸಲಾದ ಸಣ್ಣ ಮತ್ತು ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿಗೆ ಜಾಗ ಮಾತ್ರ ಒದಗಿಸಲಾಗಿದೆ. ಆದರೆ ಅದರ ನಿರ್ವಹಣೆ ಮಾಡಬೇಕಾದವರು ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ.

ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆಗಳಲ್ಲಿಯೇ ಸಂಚಾರ ಮಾಡುತ್ತವೆ. ಇಂತಹ ಮುಖ್ಯ ರಸ್ತೆಗಳಲ್ಲಿಯೇ ಗುಂಡಿಗಳು ಎದ್ದು ಕಾಣುತ್ತಿವೆ. ಹೀಗೆ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದು ಹಲವು ತಿಂಗಳುಗಳೇ ಕಳೆದರೂ ದುರಸ್ತಿ ಮಾಡುವ ಗೋಜಿಗೆ ಸಂಬಂಧಪಟ್ಟ ಅಧಿಕಾರಿಗಳು ಹೋಗಿಲ್ಲ.

ಚರಂಡಿಗಳು ಇದ್ದು ಇಲ್ಲದಂತಾಗಿವೆ. ಕಸಕಡ್ಡಿ ತುಂಬಿದೆ. ಗಿಡಗಳು ಬೆಳೆದಿವೆ. ಉದ್ಯಾನಗಳು ಎಲ್ಲೂ ಕಾಣಲು ಸಿಗುವುದಿಲ್ಲ. ಕೆಲವು ಕಾರ್ಖಾನೆಗಳ ಮುಂದೆ ಬೆಳೆದಿರುವ ಗಿಡ ಮರಗಳು ಅಲ್ಲಿ ಬರುವ ರಾಸಾಯನಿಕ ಹೊಗೆಗೆ ಕಪ್ಪು ಬಣ್ಣಕ್ಕೆ ತಿರುಗಿವೆ. ಕೈಗಾರಿಕಾ ಪ್ರದೇಶದ ಖಾಲಿ ಜಾಗದಲ್ಲಿ ಬೆಳೆದಿರುವ ಎತ್ತರದ ಹುಲ್ಲಿಗೆ ಕೆಲವು ಕಡೆ ಬೆಂಕಿ ಇಡಲಾಗಿದೆ. ಬೇಸಿಗೆ ಹತ್ತಿರ ಬರುತ್ತಿರುವುದರಿಂದ ಬೆಂಕಿ ಅವಘಡ ಸಂಭವಿಸಿದರೆ ಅದರ ಪರಿಣಾಮಗಳನ್ನು ಎದುರಿಸಲು, ಪ್ರಾಯಾಸಪಡಬೇಕಾಗುತ್ತದೆ.

ಈ ಬಗ್ಗೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳದೆ ಅಧಿಕಾರಿಗಳು ಸುಮ್ಮನೆ ಕುಳಿತಿರುವುದು ವಿಪರ್ಯಾಸ. ಇಡೀ ಕೈಗಾರಿಕಾ ಪ್ರದೇಶದಲ್ಲಿ ಎಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ನೀರಿನ ಟ್ಯಾಂಕ್‌ಗಳಾಗಲಿ ಎಲ್ಲೂ ಕಾಣ ಸಿಗುವುದಿಲ್ಲ.  

ಇನ್ನು ಈ ಪ್ರದೇಶದಕ್ಕೆ ಬಾರಿ ವಸ್ತುಗಳನ್ನು ಸಾಗಿಸುವ ಲಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವುದರಿಂದ ಅವುಗಳ ಭಾರ ತಾಳಲಾರದೆ ಸುತ್ತಮುತ್ತಲಿನ ಗ್ರಾಮಗಳ ರಸ್ತೆಗಳೆಲ್ಲ ಕಿತ್ತು ಹೋಗುತ್ತಿದೆ. ಕಾರ್ಖಾನೆಗಳಿಂದ ರಾತ್ರಿ ವೇಳೆ ಹೆಚ್ಚಿನ ಹೊಗೆ ಬರುತ್ತದೆ. ಇದರಿಂದ ರೋಗಗಳಿಗೆ ತುತ್ತಾಗುತ್ತಿದ್ದೇವೆ ಎಂದು ಸುತ್ತ ಮುತ್ತಲಿನ ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ. 

ಕುಡಮಲಕುಂಟೆ ಕೈಗಾರಿಕಾ ಪ್ರದೇಶದ ಖಾಲಿ ನಿವೇಶನಗಳ ಸ್ಥಿತಿ

ಅನುದಾನದ ಕೊರತೆ

ಹಿಂದಿನ ಬಜೆಟ್‌ಗಳಲ್ಲಿ ಅನುದಾನದ ಕೊರತೆಯಾದ ಕಾರಣ, ಮೂಲ ಸೌಕರ್ಯಗಳನ್ನು ನಿರ್ವಹಿಸಲಾಗಲಿಲ್ಲ. ಮುಂದಿನ ಬಜೆಟ್‌ನಲ್ಲಿ ಕೈಗಾರಿಕಾ ಪ್ರದೇಶದ ನಿರ್ವಹಣೆ ಬಗ್ಗೆ ಚರ್ಚಿಸಿ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಪಡಿಸಲಾಗುವುದು.

ಶಂಕರ್, ಎಂಜಿನಿಯರ್, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ, ಗೌರಿಬಿದನೂರು

ರಿಯಲ್ ಎಸ್ಟೇಟ್ ದಂಧೆ

ಈ ಭಾಗದಲ್ಲಿ ಕೈಗಾರಿಕೆಗಳ ಬೆಳವಣಿಗೆ ಉತ್ತಮ. ಆದರೆ ಪರಿಸರ  ರಕ್ಷಣೆ, ಶಿಕ್ಷಣ, ಆಮ್ಲಜನಕ ಉದ್ಯಾನ ನಿರ್ಮಾಣ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದರು. ಈವರೆಗೆ ಯಾವುದು ನೆರವೇರಿಲ್ಲ. ಕೇವಲ ಸಭೆಗಳಿಗೆ ಮತ್ತು ಭರವಸೆಗಳಿಗೆ ಸೀಮಿತವಾಗಿದೆ. ಇದು ಸಹ ರಿಯಲ್ ಎಸ್ಟೇಟ್ ದಂಧೆಯಾಗಿದೆ.

ಚೌಡಪ್ಪ, ಪರಿಸರವಾದಿ, ದೊಡ್ಡಕುರುಗೋಡು, ಗೌರಿಬಿದನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.