
ಗೌರಿಬಿದನೂರು: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ತಾಲ್ಲೂಕು ಸಮಿತಿಯಿಂದ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಗುರುವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಜಮಾವಣೆಗೊಂಡ ನೂರಾರು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರು ನಗರದ ಅಂಬೇಡ್ಕರ್ ವೃತ್ತದವರೆಗೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದರು. ಬಳಿಕ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಡೆಸಿ ಪ್ರತಿಭಟಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಿದ್ಧಗಂಗಪ್ಪ ಮಾತನಾಡಿ, ‘ಕೇಂದ್ರ ಸರ್ಕಾರವು ಕಾರ್ಮಿಕ ಮತ್ತು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ರೈತರ ಹಕ್ಕುಗಳನ್ನು ಕಸಿದುಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಬೀಜ ಮಸೂದೆ, ವಿದ್ಯುತ್ ಮಸೂದೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿ ಮಾಡಲು ಹೊರಟಿರುವುದು ಸಾಮಾಜಿಕ ಭದ್ರತೆ ಇಲ್ಲದ, ಜನ ವಿರೋಧಿ ನೀತಿಯಾಗಿದೆ. ಇದನ್ನು ವಿರೋಧಿಸಿ ಇಂದು ದೇಶದಲ್ಲಿ 6,500 ರೈತ ಸಂಘಟನೆಗಳು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿವೆ. ಕೆಲವೆಡೆ ಭಾರತ್ ಬಂದ್ ರೀತಿಯಲ್ಲಿ ಹೋರಾಟ ನಡೆಸಲಾಗಿದೆ’ ಎಂದರು.
‘ವಿದೇಶ ಬಂಡವಾಳ ಆಕರ್ಷಣೆ ಎಂದು ಪ್ರಧಾನಮಂತ್ರಿ ವಿದೇಶ ಸುತ್ತುತ್ತಿದ್ದಾರೆ. ಭೂಮಿಯನ್ನು ಕೊಳ್ಳೆಹೊಡೆದು ಉದ್ಯಮಿಗಳಿಗೆ ಮಾತ್ರ ನೀಡುತ್ತಿದ್ದಾರೆ. ಯಾವುದೇ ಉದ್ಯೋಗ ಸೃಷ್ಟಿ ಇಲ್ಲ. ದುಡಿಯುವ ಕೈಗಳಿಗೆ ಕೆಲಸವಿಲ್ಲ, ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದಾರೆ. ದೇಶದ ಸಾಲ ಜಾಸ್ತಿಯಾಗಿದೆ ಆದರೆ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜನರು ಬೀದಿಗಿಳಿದು ಹೋರಾಟ ಮಾಡುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ತಾಲ್ಲೂಕಿನಲ್ಲಿ ಇಂದಿಗೂ ಬಗರ್ ಹುಕುಂ ಚೀಟಿ ನೀಡಿಲ್ಲ. ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಜಮೀನನ್ನು ಮಾತ್ರ ಸರ್ಕಾರ ವಶಪಡಿಸಿಕೊಳ್ಳುತ್ತಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಕೇವಲ ರೈತರಿಂದ ಭೂಮಿ ಕಸಿದುಕೊಳ್ಳಲಾಗುತ್ತಿದೆ’ ಎಂದರು.
ಹಸಿರು ಸೇನೆ ಮತ್ತು ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣ ಮಾತನಾಡಿ, ಕೇಂದ್ರ ಸರ್ಕಾರ ರೈತರ ಫಲವತ್ತಾದ ಭೂಮಿಗಳನ್ನು ಉದ್ಯಮಿಗಳಿಗೆ ಮಾರಿಕೊಳ್ಳುತ್ತಿದೆ. ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಕಾರ್ಮಿಕರ ಕಾಯ್ದೆಗಳನ್ನು ರಾತ್ರೋರಾತ್ರಿ ಬದಲಾಯಿಸಿ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ’ ಎಂದರು.
ದಲಿತ ಮುಖಂಡ ಸಿ.ಜಿ ಗಂಗಪ್ಪ ಮಾತನಾಡಿ, ‘ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದೇವೆ. ಇಂತಹ ಕರಾಳ ಕಾನೂನುಗಳನ್ನು ಖಂಡಿಸುತ್ತೇವೆ’ ಎಂದರು.
ಸಿಪಿಎಂ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಾಬುರೆಡ್ಡಿ, ಮಹಿಳಾ ಅಧ್ಯಕ್ಷೆ ಜಯಮಂಗಳ, ಪ್ರಧಾನ ಕಾರ್ಯದರ್ಶಿ ವೆಂಕಟಲಕ್ಷ್ಮಮ್ಮ, ಸುಗುಣಮ್ಮ, ನರಸಿಂಹಮೂರ್ತಿ, ರಾಜಮ್ಮ, ನಾಗರಾಜು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.