ADVERTISEMENT

ಗೌರಿಬಿದನೂರು: 30 ವರ್ಷದಿಂದ ರಸ್ತೆಯೇ ಬಂದ್!

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 4:41 IST
Last Updated 21 ಜುಲೈ 2025, 4:41 IST
ಒತ್ತುವರಿಯಾಗಿರುವ ರಸ್ತೆ
ಒತ್ತುವರಿಯಾಗಿರುವ ರಸ್ತೆ   

ಗೌರಿಬಿದನೂರು: ಒಂದು ರಸ್ತೆ ಎಷ್ಟು ವರ್ಷಗಳ ಕಾಲ ಬಂದ್ ಆಗಬಹುದು. ಒಂದು...ಎರಡು...ಹೀಗೆ ಬೆರಳೆಣಿಕೆಯ ವರ್ಷಗಳಲ್ಲ. ಕಳೆದ 30 ವರ್ಷಗಳಿಂದಲೂ ರಸ್ತೆ ಬಂದ್ ಆಗಿದೆ. ಈ ರಸ್ತೆಯ ಬಗ್ಗೆ ನಗರಸಭೆ ಅಧಿಕಾರಿಗಳು ಸ್ವಲ್ಪವೂ ಗಮನವಹಿಸುತ್ತಿಲ್ಲ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ.

ನಗರದ ಹಿಂದೂಪುರ ರಸ್ತೆಯಿಂದ ಆಚಾರ್ಯ ಶಾಲೆಯವರೆಗೆ ಇರುವ ರಸ್ತೆ, 30 ವರ್ಷಗಳಿಂದ ಬಳಕೆ ಬಂದಿಲ್ಲ. ಪಾದಚಾರಿಗಳ ಬಳಕೆಗೆ ಯೋಗ್ಯವಾಗಿಲ್ಲ. ಗಿಡ ಗಂಟಿಗಳು ಬೆಳೆದಿವೆ. ರಸ್ತೆ ಉದ್ಧಕ್ಕೂ ವಿದ್ಯುತ್ ಕಂಬಗಳು ನಿಂತಿವೆ. ಇದರಿಂದ ನಗರವಾಸಿಗಳಿಗೆ ಇಡೀ ರಸ್ತೆಯೇ ಮೂತ್ರಾಲಯವಾಗಿದೆ. ಕೆಲವೆಡೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಈ ರಸ್ತೆಯು 12ನೇ ವಾರ್ಡ್ ವ್ಯಾಪ್ತಿಗೆ ಒಳಪಡುತ್ತದೆ.

ಈ ರಸ್ತೆ ಎಲ್ಲೊ ನಗರದ ಮೂಲೆಯಲ್ಲಿ ಇಲ್ಲ. ಗೌರಿಬಿದನೂರು ಹೃದಯ ಭಾಗದಲ್ಲಿದೆ. ಹೆಚ್ಚಿನ ದರವಿರುವ ಇಂತಹ ಭಾಗದಲ್ಲಿ ರಸ್ತೆಯನ್ನೇ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. 

ADVERTISEMENT

ಇದು ರಸ್ತೆಯೇ ಎಂಬ ಅನುಮಾನ ಸಾರ್ವಜನಿಕರಿಗೆ ಹುಟ್ಟಿಸುವಷ್ಟರ ಮಟ್ಟಿಗೆ ರಸ್ತೆ ಕಳೆದುಹೋಗಿದೆ. ರಸ್ತೆಯಲ್ಲಿರುವ ಅಕ್ಕಪಕ್ಕದ ಮನೆ ಮತ್ತು ಅಂಗಡಿ ಮಾಲೀಕರು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. 

ಕೆಲವೆಡೆ ಮನೆ ಮಾಲೀಕರು ಇಡೀ ರಸ್ತೆಯನ್ನೇ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದಾರೆ. ಕೆಲವರು ಕಾಂಪೌಂಡ್ ಹಾಕಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಸಾರ್ವಜನಿಕ ರಸ್ತೆಯನ್ನು ಈ ರೀತಿ ಉದಾಸೀನ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ? ಸಾರ್ವಜನಿಕರ ಆಸ್ತಿ ಪಾಸ್ತಿ ಕಾಪಾಡುವುದು ಅಧಿಕಾರಿಗಳ ಕರ್ತವ್ಯ, ಆದರೆ ದಶಕಗಳಿಂದ ಈ ರಸ್ತೆಯನ್ನು ನಿರ್ಲಕ್ಷ್ಯ ವಹಿಸಿರುವುದು ಏಕೆ?ಎಂದು ಸಾರ್ವಜನಿಕರು ನಗರಸಭೆಯ ನಡೆಯನ್ನು ಪ್ರಶ್ನಿಸುತ್ತಿದ್ದಾರೆ. 

ನಗರಸಭೆ ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ಕಣ್ಮುಚ್ಚಿ ಕುಳಿತಿದ್ದಾರೆ.

ಒತ್ತುವರಿಯಾಗಿರುವ ರಸ್ತೆ ಸ್ಥಿತಿ

ಬಿ.ಚ್ ರಸ್ತೆಯ ಹಿಂದೂಪುರ ಬಸ್ ನಿಲ್ದಾಣದಿಂದ ಪ್ರಾರಂಭವಾಗುವ ಸಂಪರ್ಕ ರಸ್ತೆ, ಕೇಕ್ ವರ್ಲ್ಡ್ ಬೇಕರಿ, ಇಂಡಿಯನ್ ಗ್ಯಾಸ್ ಕಚೇರಿಯಿಂದ ಆಚಾರ್ಯ ಶಾಲೆಯವರೆಗೆ ಇದೆ. 20 ಅಡಿ ಅಗಲದ ಈ ರಸ್ತೆ, ನಗರದ ಬಹುತೇಕ ರಸ್ತೆಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಇಂತಹ ಪ್ರಮುಖ ರಸ್ತೆ ಬಗ್ಗೆ ವಾರ್ಡ್ ಸದಸ್ಯರು‌, ನಗರಸಭೆ ಅಧಿಕಾರಿಗಳು ಗಮನ ಹರಿಸದೆ, ಒತ್ತುವರಿದಾರರಿಗೆ ಅನುಕೂಲ ಮಾಡಿಕೊಟ್ಟಂತಿದೆ. ಸರ್ಕಾರ ಸಾರ್ವಜನಿಕರ ಅನುಕೂಲಕ್ಕೆ ನಿರ್ಮಿಸಿರುವ ಇಂತಹ ಪ್ರಮುಖ ರಸ್ತೆಯನ್ನು ಆದಷ್ಟು ಬೇಗ ಸಾರ್ವಜನಿಕರ ಓಡಾಟಕ್ಕೆ ನಗರಸಭೆ ಅನುಕೂಲ ಮಾಡಿಕೊಡಬೇಕು. ಈ ಬಗ್ಗೆ ಸಾರ್ವಜನಿಕರು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಒತ್ತುವರಿ ಆಗಿದ್ದರೆ ತೆರವುಗೊಳಿಸಲಾಗುವುದು. ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು. ಲಕ್ಷ್ಮಿನಾರಾಯಣಪ್ಪ ನಗರಸಭೆ ಅಧ್ಯಕ್ಷ ಗೌರಿಬಿದನೂರು ಅಧಿಕಾರಿಗಳ ಮೀನ ಮೇಷ ಹಲವು ಬಾರಿ ಈ ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತ ಮಾಡಿಕೊಡುವಂತೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ  ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಮೀಷಮೇಷ ಎನಿಸುತ್ತಿದ್ದಾರೆ.
ಅಶೋಕ್ ವಾರ್ಡ್ ನಿವಾಸಿ
ಬದ್ಧತೆ ಎಷ್ಟಿದೆ ಎನ್ನುವ ಅರಿವು ನಗರದ ಹೃದಯ ಭಾಗದ ಸಂಪರ್ಕ ರಸ್ತೆ ದಶಕಗಳ ಕಾಲ ಸಾರ್ವಜನಿಕರಿಗೆ ಓಡಾಡಲು ಆಗದೆ ಸಂಬಂಧಿಸಿದ ಅಧಿಕಾರಿಗಳು ಇದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಅಧಿಕಾರಿಗಳ ಬದ್ಧತೆ ಎಷ್ಟಿದೆ ಎಂದು ತಿಳಿಯುತ್ತದೆ.
ಅಂಜಿನಪ್ಪ ಗೌರಿಬಿದನೂರು
ನಗರದ ಪ್ರಮುಖ ರಸ್ತೆ ದಶಕಗಳಿಂದ ಒತ್ತುವರಿಯಾಗಿ ಅನೈತಿಕ ಚಟುವಟಿಗೆಗಳ ತಾಣವಾಗಿದೆ. ಹೀಗಿದ್ದರೂ ತಲೆಕೆಡಿಸಿಕೊಳ್ಳದ ಅಧಿಕಾರಿಗಳಿಗೆ ಜನರೇ ಪಾಠ ಕಲಿಸಬೇಕು.
ರಾಜೇಶ್ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.