ADVERTISEMENT

ಗೌರಿಬಿದನೂರು | ಬಡಾವಣೆ ನಿರ್ಮಾಣ: ಪಾಲನೆಯಾಗದ ನಿಯಮ

ಕೆ.ಎನ್‌.ನರಸಿಂಹಮೂರ್ತಿ
Published 6 ಫೆಬ್ರುವರಿ 2025, 5:46 IST
Last Updated 6 ಫೆಬ್ರುವರಿ 2025, 5:46 IST
<div class="paragraphs"><p>&nbsp;ಸಾಂಕೇತಿಕ ಚಿತ್ರ</p></div>

 ಸಾಂಕೇತಿಕ ಚಿತ್ರ

   

ಗೌರಿಬಿದನೂರು: ನಗರವು ನಾಲ್ಕು ದಿಕ್ಕುಗಳಲ್ಲೂ ವೇಗವಾಗಿ ಬೆಳೆಯುತ್ತಿದೆ. ಎಲ್ಲಿ ನೋಡಿದರು ಲೇಔಟ್‌ಗಳ ನಿರ್ಮಾಣ ಹೆಚ್ಚಿದೆ. ಮಧ್ಯಮ ವರ್ಗದವರು ಸಣ್ಣ ಸೂರು ನಿರ್ಮಿಸಿಕೊಳ್ಳಬೇಕು ಎಂಬ ಕನಸಿನೊಂದಿಗೆ, ಜೀವನ ಪರ್ಯಂತ ದುಡಿದ ಹಣದಲ್ಲಿ ನಿವೇಶನ ಖರೀದಿಸಲು ಮುಂದಾಗುತ್ತಿದ್ದಾರೆ.

ಹೂಡಿಕೆಯಾಗಿ ಶ್ರೀಮಂತರು ನಿವೇಶನ ಖರೀದಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳು ಬೇಕಾಬಿಟ್ಟಿಯಾಗಿ  ಲೇಔಟ್ ನಿರ್ಮಿಸುತ್ತಿದ್ದಾರೆ.

ADVERTISEMENT

ನಗರದಲ್ಲಿ ಇಲ್ಲಿಯವರೆಗೆ 240ಕ್ಕೂ ಹೆಚ್ಚು ಲೇಔಟ್‌ಗಳು ನಿರ್ಮಾಣವಾಗಿವೆ. ಬಡಾವಣೆಗಳ ನಿರ್ಮಾಣಕ್ಕೆ ಬಿಲ್ಡರ್‌ಗಳು ಜಿಲ್ಲಾಧಿಕಾರಿ ಅವರಿಂದ ಮತ್ತು ನಗರ ಯೋಜನಾ ಪ್ರಾಧಿಕಾರದಿಂದ ಅಧಿಕೃತವಾಗಿ ಅನುಮತಿ ಪಡೆಯುತ್ತಾರೆ. ನಂತರ ಯೋಜನಾ ಪ್ರಾಧಿಕಾರದ ನಿಯಮದಂತೆ ಲೇಔಟ್ ಪ್ಲಾನ್ ಮಾಡದೇ, ಹೆಚ್ಚುವರಿ ನಿವೇಶನಗಳನ್ನು ಮಾಡಲು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. 

ತಮಗೆ ಇಷ್ಟಬಂದಂತೆ ಲೇಔಟ್ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಖರೀದಿ ಮಾಡಿದ ಗ್ರಾಹಕರು ತಮ್ಮದಲ್ಲದ ತಪ್ಪಿಗೆ ಕಷ್ಟ ಅನುಭವಿಸುವಂತಾಗಿದೆ ಎಂದು ಖರೀದಿದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದ ಅನೇಕ ಲೇಔಟ್‌ಗಳಲ್ಲಿ ರಸ್ತೆ, ರಾಜ ಕಾಲುವೆ ಮತ್ತು ಪಾರ್ಕ್ ಜಾಗಗಳು ನಿವೇಶನಗಳಾಗಿವೆ. ಈ ಜಾಗಗಳನ್ನು ಮಾರಾಟ ಸಹ ಮಾಡಿದ್ದಾರೆ. ಇಂತಹ ಜಾಗಗಳನ್ನು ಖರೀದಿಸಿ ತಮಗೆ ಅರಿವಿಲ್ಲದಂತೆ ಮನೆಗಳನ್ನು ನಿರ್ಮಿಸಿದ್ದಾರೆ. 

ಈ ಬಗ್ಗೆ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಜಾಣ ಮೌನ ವಹಿಸಿದ್ದಾರೆ. ಇದರಿಂದ ಇಂದಿಗೂ ಅನೇಕ ಕಾನೂನಾತ್ಮಕ ಸಮಸ್ಯೆಗಳನ್ನು ನಿವೇಶನ ಖರೀದಿಸಿದ  ಮಾಲೀಕರು ಎದುರಿಸುತ್ತಿದ್ದಾರೆ .

ಲೇಔಟ್‌ ನಿರ್ಮಾಣಕ್ಕೆ ಅನುಮತಿ ನೀಡಿದ ನಂತರ ನಿವೇಶನಗಳನ್ನು ಮಾಡುವಾಗ ಸರ್ಕಾರದ ನಿಯಮಗಳನ್ನು ಪಾಲಿಸಿದ್ದಾರೆಯೇ ಅಥವಾ ಉಲ್ಲಂಘನೆ ಮಾಡಿದ್ದಾರೆಯೇ ಎಂದು ಪರಿಶೀಲನೆ ಮಾಡುವ ಗೋಜಿಗೆ ಅಧಿಕಾರಿಗಳು ಗಮನವಹಿಸುತ್ತಿಲ್ಲ. ಅಧಿಕಾರಿಗಳ ಈ ನಡೆ ಸಂಶಯಕ್ಕೆ ಕಾರಣವಾಗಿದೆ.

ಕೆಲ ಗ್ರಾಹಕರಿಗೆ ಯಾವ ರೀತಿಯ ಲೇಔಟ್‌ಗಳಲ್ಲಿ ನಿವೇಶನ ಖರೀದಿಸಬೇಕು ಎಂಬ ತಿಳಿವಳಿಕೆ ಕಡಿಮೆ ಇರುವುದರಿಂದ ಇದರ ಮಾಹಿತಿ ತಿಳಿದುಕೊಳ್ಳುವ ಗೋಜಿಗೂ ಹೋಗುವುದಿಲ್ಲ. ಆಕರ್ಷಕ ಜಾಹೀರಾತು ಅಥವಾ ಮಧ್ಯವರ್ತಿಗಳ ಮಾತಿಗೆ ಮರುಳಾಗಿ ಮೋಸ ಹೋಗುವವರೇ ಹೆಚ್ಚು. ಹಣ ಕೊಟ್ಟು ಸಮಸ್ಯೆಗೆ ಸಿಲುಕುತ್ತಿರುವವರ ಸಂಖ್ಯೆ ಗೌರಿಬಿದನೂರಿನಲ್ಲಿ ಹೆಚ್ಚುತ್ತಿದೆ. 

ಗ್ರಾಮೀಣ ಭಾಗದಲ್ಲೂ ಸಹ ರಿಯಲ್ ಎಸ್ಟೇಟ್ ಉದ್ಯಮ ಜೋರಾಗಿದೆ. ಗುಡಿಬಂಡೆ ರಸ್ತೆಯಲ್ಲಿ ನಿರ್ಮಿಸಿರುವ ಲೇಔಟ್‌ಗಳಲ್ಲಿ ರಾಜಕಾಲುವೆ ಹಾದು ಹೋಗಿವೆ. ಇವುಗಳನ್ನು ಮುಚ್ಚಿ ಯಾವುದೇ ಬಫರ್ ವಲಯವನ್ನು ಸಹ ಬಿಡದೆ ನಿರ್ಮಿಸಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಬಹುಪಾಲು ನಿವೇಶನಗಳನ್ನು ಖರೀದಿಸಿದ್ದಾರೆ. ಈಗ ಬೇರೊಬ್ಬರು ತಮ್ಮ ಜಮೀನು ಎಂದು ನ್ಯಾಯಾಲಯದಿಂದ ಆದೇಶ ತಂದು ಬೇಲಿ ನಿರ್ಮಿಸಿ ಬೆಳೆ ಬೆಳೆಯುತ್ತಿದ್ದಾರೆ.

‘ಮುಖ್ಯ ರಸ್ತೆ ಎಂದು ನಿವೇಶನ ಖರೀದಿಸಿದ್ದೇವೆ. ಈಗ ಈ ಲೇಔಟ್‌ಗೆ ತೆರಳಲು ಹಳ್ಳಿಗಳ ಮೂಲಕ ಸಾಗಬೇಕು. ಅಧಿಕಾರಿಗಳು ಮಾತ್ರ ಯಾವುದನ್ನೂ ಗಮನಿಸದೆ ಅನುಮತಿ ನೀಡುತ್ತಿದ್ದಾರೆ. ಇದರಿಂದ ಗ್ರಾಹಕರ ಗೋಳು ಹೇಳ ತೀರಾದಾಗಿದೆ ಎಂದು ನಿವೇಶನ ಖರೀದಿಸಿದ ವೆಂಕಟೇಶ್  ಬೇಸರ ವ್ಯಕ್ತಡಿಸಿದರು.

ಮೊದಲು ನಗರಸಭೆ ವ್ಯಾಪ್ತಿಗೆ ಸಾರ್ವಜನಿಕ ಸೌಲಭ್ಯಕ್ಕಾಗಿ ಮೀಸಲಿಟ್ಟ ನಿವೇಶಗಳ ಜವಾಬ್ದಾರಿ ಇತ್ತು. 2017 ರ ನಂತರ ನಗರ ಯೋಜನಾ ಪ್ರಾಧಿಕಾರ ಹಸ್ತಾಂತರ ಮಾಡಲಾಯಿತು. ಆದರೆ ಸಂಬಂಧಪಟ್ಟ ಇಲಾಖೆಗಳು ಮಾತ್ರ ಸಾರ್ವಜನಿಕ ಸೌಲಭ್ಯಕ್ಕಾಗಿ ಮೀಸಲಿಟ್ಟ ನಿವೇಶನಗಳಿಗೆ ತಂತಿ ಬೇಲಿ, ನಾಮಫಲಕ ಅಳವಡಿಸಿಲ್ಲ. ಇದು ಒತ್ತುವರಿದಾರರಿಗೆ ಮತ್ತು ಭೂ ಕಬಳಿಕೆದಾರರಿಗೆ ಅನುಕೂಲವಾಗಿದೆ. 

ಲೋಪವಿದ್ದರೆ ಸರಿಪಡಿಸಲಾಗುವುದು
ನಗರದಲ್ಲಿ ಅಭಿವೃದ್ಧಿಪಡಿಸಲಾಗಿರುವ ಬಡಾವಣೆಗಳಿಗೆ ಎಲ್ಲ ಹಂತದಲ್ಲೂ ಪರಿಶೀಲಿಸಿಯೇ ಅನುಮತಿ ನೀಡಿದ್ದಾರೆ. ನಾನು ನಗರಕ್ಕೆ ಹೊಸದಾಗಿ ನಿಯೋಜನೆಗೊಂಡಿದ್ದೇನೆ. ಈ ಬಗ್ಗೆ ಪರಿಶೀಲಿಸುವೆ. ಲೋಪ ಕಂಡು ಬಂದಿದ್ದರೆ ಸರಿಪಡಿಸಲಾಗುವುದು ಎಂದು ಗೌರಿಬಿದನೂರು ನಗರ ಯೋಜನಾ ಪ್ರಾಧಿಕಾರ ಸಹಾಯಕ ನಿರ್ದೇಶಕಿ ಶಾಂತಲಾ ನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.