
ಗೌರಿಬಿದನೂರು: ನಗರದ ಕರೇಕಲ್ಲಹಳ್ಳಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಹಾಯಕ ಅಡುಗೆ ಸಿಬ್ಬಂದಿ ಪತಿ ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಹಾಸ್ಟೆಲ್‌ನಲ್ಲಿ ಅಡುಗೆ ಸಿಬ್ಬಂದಿ ಮತ್ತು ಅವರ ಪತಿಗೂ ಉಳಿದುಕೊಳ್ಳಲು ಜಾಗ ನೀಡಲಾಗಿದೆ. ಅಡುಗೆ ಸಿಬ್ಬಂದಿ ಪತಿ ಖಲಂದರ್ ವಿದ್ಯಾರ್ಥಿಗಳ ಮೇಲೆ ದರ್ಪ ತೋರಲು ಪ್ರಾರಂಭಿಸಿದ್ದಾನೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ವ್ಯಕ್ತಿಗಳು ಪತ್ರಕರ್ತರು ಎಂದು ಹೇಳಿಕೊಂಡು ಮಂಗಳವಾರ ರಾತ್ರಿ ಗೋಡೆ ಹಾರಿ ಹಾಸ್ಟೆಲ್ ಪ್ರವೇಶಿಸಿ ಅಲ್ಲಿನ ಸಿಬ್ಬಂದಿಗೆ ಧಮ್ಕಿ ಹಾಕಿದ್ದಾರೆ.
20 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇರುವ ಹಾಸ್ಟೆಲ್ ನಲ್ಲಿ ತಡರಾತ್ರಿ ಕೆಲವರು ಅಲ್ಲಿನ ಶಿಕ್ಷಕರೊಂದಿಗೆ ಕುಳಿತು ಮಾತನಾಡುತ್ತಿರುವ ವಿಡಿಯೊಗಳ ಸಹ ಹರಿದಾಡುತ್ತಿವೆ.
ಹಾಸ್ಟೆಲ್‌ಗೆ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶವಿಲ್ಲ. ಆದರೆ ಹೊರಗಿನವರಿಗೆ ಮುಕ್ತ ಪ್ರವೇಶ ನೀಡಿರುವುದು ಹಾಗೂ ಇಲ್ಲಿ ಸಿಸಿ ಟಿವಿ ಕ್ಯಾಮೆರಾಗಳು ಇಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಿದ್ಯಾರ್ಥಿಗಳಿಗೆ ಭದ್ರ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಾರ್ಡನ್ ನವೀನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿಗೆ ಅಡುಗೆ ಸಿಬ್ಬಂದಿ ಪತಿ ಥಳಿಸಿರುವ ಘಟನೆಯ ವಿಡಿಯೊ ಎರಡು ತಿಂಗಳ ಹಿಂದೆ ನಡೆದಿರುವುದು. ಈಗ ನನ್ನ ಗಮನಕ್ಕೆ ಬಂದಿದೆ. ರಾತ್ರಿ ಸಹ ಇಬ್ಬರು ವ್ಯಕ್ತಿಗಳು ಹಾಸ್ಟೆಲ್ ನ ಕಾಂಪೌಂಡ್ ಹಾರಿ ಬಂದು ನಾವು ಪತ್ರಕರ್ತರು ಎಂದು ಹೇಳಿಕೊಂಡು ಹಾಸ್ಟೆಲ್ ತರಗತಿಗಳನ್ನು ಪರಿಶೀಲಿಸಿದರು. ಅವರು ಪತ್ರಕರ್ತರೋ ಅಲ್ಲವೋ ನನಗೆ ಸರಿಯಾದ ಮಾಹಿತಿಯಿಲ್ಲ. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತಂದು, ಪೊಲೀಸರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಸ್ಥಳಕ್ಕೆ ತಹಶೀಲ್ದಾರ್ ಅರವಿಂದ್ ಭೇಟಿ ನೀಡಿದ್ದರು. ಹಾಸ್ಟೆಲ್ ಪ್ರಾರಂಭವಾಗಿ 3 ತಿಂಗಳು ಕಳೆದರು ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲ. ಸಿಸಿ ಟಿವಿ ಕ್ಯಾಮೆರಾ, ಬಯೊ ಮೆಟ್ರಿಕ್ ಇಲ್ಲ. ಯಾವುದೇ ಭದ್ರತೆ ಇಲ್ಲ. ರಾತ್ರಿ ವೇಳೆ ರಕ್ಷಣಾ ಸಿಬ್ಬಂದಿ ಇಲ್ಲ ಎಂದು ವಾರ್ಡನ್‌ನನ್ನು ತರಾಟೆಗೆ ತೆಗೆದುಕೊಂಡರು.
ಅಪರಿಚಿತರು ಬಂದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲು ವಾರ್ಡನ್‌ಗೆ ಸೂಚಿಸಿದರು.
ಉಪ ತಹಶೀಲ್ದಾರ್ ಆಶಾ, ಆರ್‌ಐ ಖಾದರ್, ವಿ.ಎ ಅಮರ್ ನಾರಾಯಣ, ವಾರ್ಡನ್ ನವೀನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.