
ಗೌರಿಬಿದನೂರು: ತಾಲ್ಲೂಕಿನ ಗಡಿಭಾಗದ ಬೈಚಾಪುರ ಪಂಚಾಯಿತಿ ವ್ಯಾಪ್ತಿಯ ಉಚ್ಚೋದನಹಳ್ಳಿ ಗ್ರಾಮಕ್ಕೆ ಸರ್ಕಾರಿ ಬಸ್‌ಗಳು ಸಹ ಹೋಗುವುದಿಲ್ಲ. ಇಂತಹ ಕುಗ್ರಾಮದಲ್ಲಿರುವ ಸರ್ಕಾರಿ ಶಾಲೆ ತಾಲ್ಲೂಕಿನ ಗಮನ ಸೆಳೆದಿದೆ.
ಆಂಧ್ರ ಪ್ರದೇಶ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಈ ಶಾಲೆ ಪ್ರಾರಂಭವಾಗಿದ್ದು 1957 ರಲ್ಲಿ. 36 ಗುಂಟೆಯ ವಿಶಾಲವಾದ ಜಾಗದಲ್ಲಿ ಶಾಲೆ, ಮೈದಾನ ಮತ್ತು ಮನ ಸೆಳೆಯುವ ಹಚ್ಚ ಹಸಿರಿನ ವಾತಾವರಣವಿದೆ.
ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಯಲು ಹೇಳಿ ಮಾಡಿಸಿದ ವಾತಾವರಣ ಇಲ್ಲಿದೆ.
ಕಾಂಪೌಂಡ್ ಸುತ್ತಲೂ 160 ವಿವಿಧ ಬಗೆಯ ದೊಡ್ಡ ಮರಗಳ ಅಹ್ಲಾದಕರ ವಾತಾವರಣವಿದೆ.
ಕಾಡು ಬಾದಾಮಿ, ನೆಲ್ಲಿ, ಸೀಮರೂಬ, ತೆಂಗು, ಮಾವು, ಆಕಾಶ್ ಮಲ್ಲಿಗೆ, ಹೊಂಗೆ, ಟಕೋಮಾ, ಸಿಲ್ವರ್ ಒಕ್, ನೇರಳೆ, ನುಗ್ಗೆ, ಹೂವಿನ ಗಿಡಗಳು ಸೇರಿದಂತೆ ಹಲವು ಬಗೆಯ ಗಿಡ ಮರಗಳು ಸೋಂಪಾಗಿ ಬೆಳೆದಿವೆ.
ಬೈಚಾಪುರ ಪಂಚಾಯಿತಿ ಜಲಜೀವನ್ ಮಿಷನ್ ಮೂಲಕ ಶಾಲೆಗೆ ಬೇಕಾಗುವಷ್ಟು ನೀರನ್ನು ಒದಗಿಸುತ್ತಿದೆ. ಇಂತಹ ಗ್ರಾಮದ ಶಾಲೆಯಲ್ಲಿ 52 ವಿದ್ಯಾರ್ಥಿಗಳು ಇದ್ದಾರೆ. ನಾಲ್ಕು ಮಂದಿ ಶಿಕ್ಷಕರು ಕೆಲಸ ನಿರ್ವಹಿಸುತ್ತಾರೆ.
ಇಲ್ಲಿನ ಶಾಲೆಗೆ ಬರುವ ಶೇ 90ರಷ್ಟು ಮಕ್ಕಳು ಹಿಂದುಳಿದ ಮತ್ತು ಬಡ ಕುಟುಂದವರು. ಇವರಿಗೆ ಇಂಗ್ಲಿಷ್, ಕಂಪ್ಯೂಟರ್ ಶಿಕ್ಷಣ ಒದಗಿಸಿ, ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ವಿದ್ಯಾರ್ಥಿಗಳ ಹಾಜರಾತಿ ಸಹ ಉತ್ತಮವಾಗಿದೆ.
ತೆಲುಗು ಪ್ರಭಾವ ಹೆಚ್ಚಾಗಿರುವ ಈ ಗಡಿಭಾಗದಲ್ಲಿ ಶಿಕ್ಷಕರು ಮಕ್ಕಳು ಶಾಲೆಯಲ್ಲಿ ಅಷ್ಟೇ ಅಲ್ಲ ಮನೆಗಳಲ್ಲಿಯೂ ಕನ್ನಡ ಮಾತನಾಡುವಂತೆ ಮಾಡುತ್ತಿದ್ದಾರೆ.
ಪೋಷಕರು ಮತ್ತು ವಿದ್ಯಾರ್ಥಿಗಳ ವಿಶ್ವಾಸ ಮತ್ತು ಸಹಕಾರಗಳಿಸಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅನೇಕ ಕಾರ್ಯಕ್ರಮಗಳನ್ನು ರೂಪಿದ್ದಾರೆ. ಮಕ್ಕಳ ಕಲಿಕೆಯಲ್ಲಿ ಹೊಸತನ ತರಲು ಚಿತ್ರಗಳ ಮೂಲಕ ಕಲಿಸುತ್ತಿದ್ದಾರೆ. ಮಕ್ಕಳು ಶಾಲೆಗೆ ತಪ್ಪಿಸಿಕೊಳ್ಳದಂತೆ ಹಾಗೂ ಮಕ್ಕಳ ಕಲಿಕೆಯಿಂದ ಕುಟುಂಬಕ್ಕಾಗುವ ಅನುಕೂಲದ ಬಗ್ಗೆ ಪೋಷಕರ ಸಭೆಯನ್ನು ಪ್ರತಿ ತಿಂಗಳು ನಡೆಸಲಾಗುವುದು.
ಇಲ್ಲಿನ ಚಟುವಟಿಕೆಗಳ ಬಗ್ಗೆ ತಿಳಿದಿರುವ ಸಾರ್ವಜನಿಕರು, ಸಂಘ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಶಾಲೆಗೆ ಅನುಕೂಲವಾಗುವ ಉಪಕರಣಗಳನ್ನು ನೀಡುತ್ತಿದ್ದಾರೆ.
ನೇತಾಜಿ ಯುವಕ ಸಂಘ ಶಾಲೆಯನ್ನು ದತ್ತು ತೆಗೆದುಕೊಂಡಿದೆ. ಶಾಲೆಗೆ ಅತಿಥಿ ಶಿಕ್ಷಕರನ್ನು ನೇಮಿಸಿ, ಮಕ್ಕಳ ಶೈಕ್ಷಣಿಕ ಕಲಿಕೆಗೆ ನೆರವಾಗುತ್ತಿದೆ. ಇನ್ನು ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ, ಸ್ವಾಮಿ ವಿವೇಕಾನಂದ ಫೌಂಡೇಶನ್, ವಿಜಯ ಪ್ರಸನ್ನ ಆಂಜನೇಯ ಸ್ವಾಮಿ ಸೇವಾ ಸಮಿತಿ, ಲಲಿತಾದ್ರಿ ದಂತ ಚಿಕಿತ್ಸಾಲಯ, ಎಸ್. ಎಂ.ವಿ ಎಜುಕೇಶನ್ ಟ್ರಸ್ಟ್ ಸೇರಿದಂತೆ ವಿವಿಧ ಸಂಸ್ಥೆಗಳು ಶಾಲೆಗೆ ಸೌಲಭ್ಯಗಳನ್ನು ನೀಡುತ್ತಿವೆ. ಇದು ಮಕ್ಕಳ ಕಲಿಕೆಗೆ ನೆರವಾಗಿದೆ.
ಇಲ್ಲಿನ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಕ್ರೀಡಾಕೂಟ, ರಸ ಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ. ರಾಜ್ಯ ಮಟ್ಟದಲ್ಲಿ ಗಾಯನ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.