ಗೌರಿಬಿದನೂರು: ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದನ್ನು ಖಂಡಿಸಿ ಹಾಗೂ ಅವರನ್ನು ಸಂಪುಟಕ್ಕೆ ಮರುಸೇರ್ಪಡೆ ಮಾಡುವಂತೆ ಒತ್ತಾಯಿಸಿ ದಲಿತ ಪರ ಸಂಘಟನೆ, ವಾಲ್ಮೀಕಿ ಸಮುದಾಯ, ಮಹಿಳಾ ಸಂಘಟನೆ, ಹಿಂದುಳಿದ ವರ್ಗಗಳ ಸಂಘಟನೆ, ಕೆ.ಎನ್.ರಾಜಣ್ಣ ಅಭಿಮಾನಿಗಳ ಬಳಗದಿಂದ ಶನಿವಾರ ಪ್ರತಿಭಟನೆ ನಡೆಯಿತು.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ವಾಲ್ಮೀಕಿ ವೃತ್ತ ಮಾರ್ಗವಾಗಿ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು.
ವಾಲ್ಮೀಕಿ ಸಮುದಾಯದ ಮುಖಂಡ ಆರ್.ಅಶೋಕ್ ಮಾತನಾಡಿ, ‘ಹಿಂದುಳಿದ ವರ್ಗಕ್ಕೆ ಸೇರಿದ ಮತ್ತು ನಿಷ್ಟೂರವಾದಿ ರಾಜಣ್ಣ ಅವರನ್ನು ಕೆಲವರು ರಾಜಕೀಯ ಕುತಂತ್ರದಿಂದ ತುಳಿಯುತ್ತಿದ್ದಾರೆ. ಸಚಿವ ಸಂಪುಟದಿಂದ ರಾಜಣ್ಣ ಅವರನ್ನು ಕೈಬಿಟ್ಟಿರುವುದು ದಲಿತ ಸಮುದಾಯಕ್ಕೆ ನೋವನ್ನು ಉಂಟುಮಾಡಿದೆ. ಮತ್ತೆ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ತಕ್ಕಪಾಠ ಕಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಬಾಲಕುಂಟಹಳ್ಳಿ ಗಂಗಾಧರ್ ಮಾತನಾಡಿ, ‘ಸರ್ಕಾರ ನಡೆಸುವವರಿಗೆ ಎಸ್‌ಸಿ. ಎಸ್‌ಟಿ ಜನರ ಮತ ಮಾತ್ರ ಬೇಕಾಗಿವೆ. ಅಧಿಕಾರ ಮಾತ್ರ ಬೇರೆಯವರಿಗೆ ಬೇಕಾಗಿದೆ. ಇಂಥ ಪರಿಸ್ಥಿತಿ ರಾಜ್ಯದಲ್ಲಿ ನಡೆಯುತ್ತಿದೆ. ಸಿದ್ದರಾಮಯ್ಯ ಹಿಂದುಳಿದ ಮತ್ತು ಸಮಾಜವಾದಿ ನಾಯಕನೆಂದು ಹೆಸರು ಪಡೆದಿದ್ದಾರೆ. ಅವರ ಬೆಂಬಲಕ್ಕೆ ನಿಲ್ಲುವ ದಲಿತ ನಾಯಕರನ್ನು ಷಡ್ಯಂತ್ರ ಮಾಡಿ ಮಟ್ಟಹಾಕುವ ಪರಿಸ್ಥಿತಿ ಆಗುತ್ತಿದೆ. ರಾಜಣ್ಣ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
ವಕೀಲ ಎಚ್ಎಲ್ ವೆಂಕಟೇಶ್ ಮಾತನಾಡಿ, ‘ದಲಿತರನ್ನ ಸುಟ್ಟ ಬೆಂಕಿ, ದೇಶವನ್ನೇ ಸುಡುತ್ತದೆ, ಎಂದು ಅಂಬೇಡ್ಕರ್ ಹೇಳಿದ್ದಾರೆ. ದಲಿತ ವರ್ಗಕ್ಕೆ ಸೇರಿದ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ತೆಗೆದು ಹಾಕಿರುವುದು, ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಬೆಂಕಿಯಾಗಿ ಉರಿಯುತ್ತದೆ. ಈ ಹೋರಾಟದಲ್ಲಿ ಜಾತಿ ರಹಿತವಾಗಿ ಎಲ್ಲರೂ ಭಾಗವಹಿಸಿದ್ದಾರೆ. ಇನ್ನು ಮುಂದೆ ದಲಿತ ವಿರೋಧಿ ಪಿತೂರಿಗಳು ನಡೆದರೆ ಸುಮ್ಮನೆ ಇರುವುದಿಲ್ಲ’ ಎಂದರು.
ಉಪ ತಹಶೀಲ್ದಾರ್ ಆಶಾ ಅವರಿಗೆ ಮನವಿ ಸಲ್ಲಿಸಿದರು. ಹನುಮೇಗೌಡ, ರಾಜೇಂದ್ರ, ವೆಂಕಟರೆಡ್ಡಿ, ರೂಪ ಅನಂತರಾಜು, ಮಂಜುಳಾ ರಾಮಾಂಜಿ, ಗೋಪಾಲ್, ಗೋಪಿನಾಥ್, ಚಂದ್ರಮೋಹನ್, ಕೊಡಿಗೇಹಳ್ಳಿ ರಂಗನಾಥ, ಅಲ್ಲಂಪಲ್ಲಿ ವೇಣು, ರವೀಂದ್ರ, ನಾಗರಾಜಪ್ಪ, ವಿಕ್ರಮ್, ನಾರಾಯಣ ಸ್ವಾಮಿ, ಎಸ್‌ವಿಟಿ ಲೋಕೇಶ್, ಬೈಚಾಪುರ ಗಂಗಾಧರಪ್ಪ, ಎನ್.ಆರ್ ಮಂಜುನಾಥ್, ನಿರಂಜನ್, ಮೂರ್ತಿ, ಮಲ್ಲಸಂದ್ರ ಗಂಗಾಧರಪ್ಪ, ಮುನಿಯಪ್ಪ, ನಂಜುಂಡಪ್ಪ, ಸತೀಶ್, ಜಯಲಕ್ಷ್ಮಮ್ಮ, ಲಕ್ಷ್ಕ್ಷ್ಮಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.