ADVERTISEMENT

ಗೌರಿಬಿದನೂರು | ತ್ಯಾಜ್ಯದ ಅಡ್ಡೆಯಾದ ಉತ್ತರ ಪಿನಾಕಿನಿ

ಅಧಿಕಾರಿಗಳ ಜಾಣ ಕುರುಡು * ಅಂತರ್ಜಲ ಸೇರುತ್ತಿರುವ ರಾಸಾಯನಿಕ

ಕೆ.ಎನ್‌.ನರಸಿಂಹಮೂರ್ತಿ
Published 10 ಅಕ್ಟೋಬರ್ 2025, 5:30 IST
Last Updated 10 ಅಕ್ಟೋಬರ್ 2025, 5:30 IST
ಗೌರಿಬಿದನೂರು ನಗರದ ಬೈ ಪಾಸ್ ರಸ್ತೆ ಬಳಿಯ ಜಮೀನಿನಲ್ಲಿ ಕಾರ್ಖಾನೆ ಮಲಾಸಿಸ್ ನಿಂತಿರುವುದು.
ಗೌರಿಬಿದನೂರು ನಗರದ ಬೈ ಪಾಸ್ ರಸ್ತೆ ಬಳಿಯ ಜಮೀನಿನಲ್ಲಿ ಕಾರ್ಖಾನೆ ಮಲಾಸಿಸ್ ನಿಂತಿರುವುದು.   

ಗೌರಿಬಿದನೂರು: ಈಚೆಗೆ ತಾಲ್ಲೂಕಿನಲ್ಲಿ ಕಾರ್ಖಾನೆಗಳ ತ್ಯಾಜ್ಯವನ್ನು ರೈತರ ಹೊಲ, ಕೆರೆ, ಅರಣ್ಯ ಪ್ರದೇಶದ ಜಾಗಗಳಲ್ಲಿ ಬಿಡುವ ಕೃತ್ಯ ನಿರಂತರವಾಗಿ ಹೆಚ್ಚುತ್ತಿದೆ.

ಕುಡಮಲಕುಂಟೆ ಕೈಗಾರಿಕಾ ಪ್ರದೇಶ ಆರಂಭಗೊಂಡ ನಂತರ ತಾಲ್ಲೂಕಿನ ಕೆಲವು ಭಾಗಗಳಲ್ಲಿ ರಾಸಾಯನಿಕ ತ್ಯಾಜ್ಯ ಸುರಿಯುತ್ತಿದ್ದರು. ಅದರೆ, ಈಗ ರಾತ್ರಿಯಾಗುತ್ತಿದ್ದಂತೆ ಜನನಿಬಿಡ ಪ್ರದೇಶಗಳಲ್ಲೂ ಕಾರ್ಖಾನೆ ತ್ಯಾಜ್ಯ ಸುರಿಯಲು ಪ್ರಾರಂಭಿಸಿದ್ದಾರೆ.

ನಗರದ ಬೈಪಾಸ್ ರಸ್ತೆ, ಡಾ.ಎಚ್.ಎನ್ ಪಾರ್ಕ್ ಸುತ್ತಮುತ್ತ, ಉತ್ತರ ಪಿನಾಕಿನಿ ನದಿಪಾತ್ರ, ರಸ್ತೆ ಪಕ್ಕದ ಮೋರಿ ಸೇರಿದಂತೆ ಹಲವು ಭಾಗಗಳಲ್ಲಿ ರಾಸಾಯನಿಕ ತ್ಯಾಜ್ಯ ಸುರಿಯುತ್ತಿರುವುದರಿಂದ ಸುತ್ತಮುತ್ತಲಿನ ಪರಿಸರಕ್ಕೆ ಹಾನಿಯಾಗುವುದರ ಜತೆಗೆ ಪ್ರಾಣಿ, ಪಕ್ಷಿ, ಜಾನುವಾರು ಜೀವ ಸಂಕುಲಕ್ಕೆ ಮಾರಕವಾಗಿ ಪರಿಣಮಿಸಿದೆ.

ADVERTISEMENT

ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಉತ್ತರ ಪಿನಾಕಿನಿ ನದಿಯು ಮರಳೂರು, ಇಡಗೂರು, ಚಂದನದೂರು ಸೇರಿದಂತೆ ಏಳು ಕೆರೆಗಳಿಗೆ ಹರಿಯುತ್ತದೆ. ಈ ಕಾಲುವೆಗೆ ಕೆಲವು ದಿನಗಳ ಹಿಂದೆ ರಾಸಾಯನಿಕ ಸುರಿದಿದ್ದರು. ನೀರೆಲ್ಲ ಬಿಳಿ ಬಣ್ಣಕ್ಕೆ ತಿರುಗಿ ಮೀನುಗಳು ಸಹ ಸಾವನ್ನಪ್ಪಿದ್ದವು.

ಇದೇ ನೀರು ಕೊಳವೆ ಬಾವಿಗಳಲ್ಲಿ ಹೋಗಿ ಅಂತರ್ಜಲ ಸೇರುತ್ತಿದೆ. ಇಂತಹ ಅಪಾಯಕಾರಿ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜಾಣ ಕುರುಡು ಅನುಸರಿಸುತ್ತಿದ್ದಾರೆ ಎಂದು ರೈತ ಸಂಘಟನೆಗಳು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳನ್ನು ಸ್ಥಳ ಪರಿಶೀಲನೆ ಮಾಡಲು ಸಹ ಒತ್ತಾಯಿಸಲಾಗಿತ್ತು. ಈ ಸಂಬಂಧ ಅಧಿಕಾರಿಗಳು ಸಹ ಈ ನೀರನ್ನು ಪರೀಕ್ಷೆ ಮಾಡಲು ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದರು. ಆದರೆ, ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ರೈತ ಸಂಘಟನೆಗಳು ಎಚ್ಚರಿಕೆ ನೀಡುತ್ತಾ ಬಂದಿವೆ. ಆದರೆ, ಇದುವರೆಗೂ ಕಾರ್ಖಾನೆಗಳು ರಾಸಾಯನಿಕ ತ್ಯಾಜ್ಯ ಹಾಕುವುದನ್ನು ಮಾತ್ರ ನಿಲ್ಲಿಸಿಲ್ಲ. ಅಧಿಕಾರಿಗಳ ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡ ಬೇಕಿದೆ ಎಂದು ಸಾರ್ವಜನಿಕರು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮರಳೂರು ಕೆರೆಗೆ ಹರಿಯುವ ಉತ್ತರ ಪಿನಾಕಿನಿಗೆ ರಾಸಾಯನಿಕ ತ್ಯಾಜ್ಯ ಸೇರಿ ಬಿಳಿ ಬಣ್ಣಕ್ಕೆ ತಿರುಗಿರುವ ನದಿ ನೀರು

ಬೆಳೆ ಜಾನುವಾರುಗೆ ಹಾನಿ  ಈಗ ಎರಡು ದಿನಗಳ ಹಿಂದೆ ನಗರದ ಹೊರ ವಲಯಯದಲ್ಲಿ ಹದಿನೈದು ವರ್ಷಗಳ ಹಿಂದೆ ನಿಷ್ಕ್ರಿಯವಾಗಿದ್ದ ಗೌರಿ ಡಿಸ್ಟಿಲರಿ ಕಾರ್ಖಾನೆ ಹೊಂಡಗಳಲ್ಲಿ ಶೇಖರಣೆ ಮಾಡಿದ್ದ ಮಲಾಸಿಸ್ ಅನ್ನು ಅಕ್ರಮವಾಗಿ ಮರಳೂರು ಕೆರೆಗೆ ಹರಿಯಬಿಟ್ಟಿದ್ದಾರೆ. ಇದರಿಂದ ಬೆಳೆ ಜಲಚರ ಹಾಗೂ ದನಕರುಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಗೋಪಾಲ್ ಉಪಾಧ್ಯಕ್ಷ ಕಾದಲವೇಣಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ  ಸರ್ಕಾರ ಗಂಭೀರವಾಗಿ ಪರಿಗಣಿಸಲಿ  ಕಾರ್ಖಾನೆ ರಾಸಾಯನಿಕ ತ್ಯಾಜ್ಯವನ್ನು ಉತ್ತರ ಪಿನಾಕಿನಿ ನದಿ ನೀರಿಗೆ ಬಿಟ್ಟರೆ ಹರಿದು ಹೋಗುತ್ತದೆ ಎಂದು ನಿರಂತವಾಗಿ ತಂದು ಬಿಡುವುದು ಕಂಡು ಬರುತ್ತಿದೆ. ಇದರಿಂದ ಜನ ಜಾನುವಾರುಗೆ ಮಾರಕವಾಗುತ್ತಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಅಚ್ಯುತ್ ಮಾದನಹಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.