ADVERTISEMENT

ಚಿಕ್ಕಬಳ್ಳಾಪುರ | ಸರ್ಕಾರಗಳಿಗೆ ಕಿಂಚಿತ್‌ ಕಾಳಜಿ ಇಲ್ಲ

ರೈತಸಂಘದ ವತಿಯಿಂದ ನಗರದಲ್ಲಿ 40ನೇ ರೈತ ಹುತಾತ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 13:28 IST
Last Updated 21 ಜುಲೈ 2020, 13:28 IST
ಕಾರ್ಯಕ್ರಮದಲ್ಲಿ ರೈತಸಂಘದ ಮುಖಂಡರೊಬ್ಬರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರೈತಸಂಘದ ಮುಖಂಡರೊಬ್ಬರು ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಉದ್ಯಮಿಗಳ ಲಾಬಿಗೆ ಮಣಿದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರನ್ನು ನಿರ್ಲಕ್ಷ್ಯ ಮಾಡುತ್ತ ಬಂದ ಪರಿಣಾಮ, ಇವತ್ತು ಅನ್ನದಾತರು ಬೀದಿಗೆ ಬೀಳುವ ಸ್ಥಿತಿ ಬಂದಿದೆ. ಸರ್ಕಾರಗಳ ಧೋರಣೆ ಖಂಡಿಸಿ ರೈತರು ಬೀದಿಗಿಳಿಯುವ ಸಂದರ್ಭ ಬಂದಿದೆ’ ಎಂದು ರೈತಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಹೇಳಿದರು.

ನಗರದಲ್ಲಿ ಮಂಗಳವಾರ ರೈತಸಂಘದ ಆಯೋಜಿಸಿದ್ದ 40ನೇ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನವಲಗುಂದ ಮತ್ತು ನರಗುಂದದಲ್ಲಿ 40 ವರ್ಷಗಳ ಹಿಂದೆ ನಡೆದಿದ್ದ ರೈತರ ನರಮೇಧದಲ್ಲಿ ಸುಮಾರು 154 ರೈತರು ಪೊಲೀಸರ ಗೋಲಿಬಾರ್‌ಗೆ ಬಲಿಯಾಗಿದ್ದರು. ಅದರ ನೆನಪಿಗಾಗಿ ಪ್ರತಿ ವರ್ಷ ರೈತ ಹುತಾತ್ಮ ದಿನಾಚರಣೆ ಆಚರಿಸುತ್ತ ಬರಲಾಗುತ್ತಿದೆ. ಇಂದು ರೈತರು ಹಿಂದೆಂದಿಗಿಂತಲೂ ಸಂಕಷ್ಟದಲ್ಲಿದ್ಧಾರೆ’ ಎಂದು ತಿಳಿಸಿದರು.

ADVERTISEMENT

‘ಕೆಲ ದಶಕಗಳ ಹಿಂದೆ ರೈತರು ಎರಡ್ಮೂರು ಸಮಸ್ಯೆಗಳನ್ನು ಮಾತ್ರ ಎದುರಿಸುತ್ತಿದ್ದರು. ಇವತ್ತು ರೈತರಿಗೆ ಮೈತುಂಬಾ ಸಮಸ್ಯೆಗಳೇ ಇವೆ. ಕೋವಿಡ್‌ನಂತಹ ಸಂಕಷ್ಟದ ಸಮಯದಲ್ಲೂ ದೇಶದ 135 ಕೋಟಿ ಜನರಿಗೆ ಅನ್ನ ಹಾಕುವ ರೈತನ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕಿಂಚಿತ್‌ ಕಾಳಜಿ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಭೂಸುಧಾರಣೆ, ಎಪಿಎಂಸಿ, ಅಗತ್ಯ ವಸ್ತುಗಳು, ವಿದ್ಯುತ್, ಬೀಜ ಮಸೂದೆ ಹೀಗೆ ಹಲವು ಕಾಯ್ದೆಗಳಿಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರುತ್ತಿರುವ ಸರ್ಕಾರಗಳು ಕೃಷಿ ಕ್ಷೇತ್ರವನ್ನು ಕಾರ್ಪೋರೆಟ್‌ ಕಂಪೆನಿಗಳು, ಬಂಡವಾಳಶಾಹಿಗಳ ಕೈಗೆ ಹಸ್ತಾಂತರಿಸುವ ಹುನ್ನಾರ ನಡೆಸಿವೆ’ ಎಂದು ಆರೋಪಿಸಿದರು.

‘ಇಡೀ ಜನಜೀವನದ ಮೇಲೆ ಪರಿಣಾಮ ಬೀರುವಂತಹ ತಿದ್ದುಪಡಿಗಳನ್ನು ಶಾಸನಸಭೆ, ಸಂಸತ್ತಿನಲ್ಲಿ ಚರ್ಚಿಸದೆ ಸುಗ್ರಿವಾಜ್ಞೆ ಮೂಲಕ ಕಾಯ್ದೆ ಜಾರಿಗೆ ಮುಂದಾಗುತ್ತಿರುವುದು ಜನರನ್ನು ವಂಚಿಸುವ ಕೆಲಸವಾಗಿದೆ. ಬಡ ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸಿ ದಿವಾಳಿ ಮಾಡುವುದು ಇದರ ಹಿಂದಿನ ಸಂಚು’ ಎಂದು ಹೇಳಿದರು.

‘ಲಾಕ್‌ಡೌನ್‌ನಂತಹ ಸಂದರ್ಭದಲ್ಲಿ ಸರ್ವಾಧಿಕಾರಿ ಕ್ರಮದಿಂದ ಸುಗ್ರಿವಾಜ್ಞೆ ಮೂಲಕ ಹಲವು ಕಾಯ್ದೆಗಳಿಗೆ ತಿದ್ದುಪಡಿ ತರುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಮತ್ತು ಜನವಿರೋಧಿ ನೀತಿಗಳನ್ನು ಖಂಡಿಸಬೇಕಿದೆ. ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತಸಂಘ ಜುಲೈ 23 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಲಾಕ್‌ಡೌನ್‌ನಂತಹ ವಿಷಮ ಪರಿಸ್ಥಿತಿಯಲ್ಲಿ ಸರ್ಕಾರಗಳು ಕೃಷಿ ಕ್ಷೇತ್ರವನ್ನು ಕಳ್ಳರ ರೀತಿಯಲ್ಲಿ ಕಾರ್ಪೋರೆಟ್‌ ಕಂಪೆನಿಗಳಿಗೆ ಧಾರೆ ಎರೆದಿರುವುದು ಅತ್ಯಂತ ಅಮಾನವೀಯ ಕ್ರಮ. ಇದು ಕೃಷಿ ರಂಗಕ್ಕೆ ಕಂಟಕ. ಇದರಿಂದ ರೈತರು ಬೀದಿಗೆ ಬೀಳುವ ಸಂದರ್ಭ ಬಂದಿದೆ’ ಎಂದರು.

ರೈತಸಂಘದ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಪಿ.ರಾಮನಾಥ್, ಕಾರ್ಯದರ್ಶಿ ವಿ.ವೇಣುಗೋಪಾಲ್, ಗೌರವಾಧ್ಯಕ್ಷ ಎಸ್.ಎಂ.ನಾರಾಯಣಸ್ವಾಮಿ, ರಾಜ್ಯ ಘಟಕದ ಸಂಚಾಲಕ ಲಕ್ಷ್ಮಣ ರೆಡ್ಡಿ, ಮಹಿಳಾ ಸಂಚಾಲಕಿ ಉಮಾ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ರಮಣ ರೆಡ್ಡಿ, ತಾದೂರು ಮಂಜುನಾಥ್, ರಾಮಾಂಜನಪ್ಪ, ಮಾಳಪ್ಪ, ದಪ್ಪರ್ತಿ ಮುರಳಿ, ಲಕ್ಷ್ಮಣ ರೆಡ್ಡಿ, ಬಯ್ಯಾರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.