ಚಿಕ್ಕಬಳ್ಳಾಪುರ: ಜಿಲ್ಲೆಯ ಎಲ್ಲೆಡೆ ಶ್ರದ್ಧಾಭಕ್ತಿಯಿಂದ ಮಂಗಳವಾರ ಗೌರಿ ಹಬ್ಬ ಜರುಗಿತು. ಮನೆ ಮನೆಗಳಲ್ಲಿ ಗೌರಿ ದೇವಿಯನ್ನು ಪ್ರತಿಷ್ಠಾಪಿಸಿ ಮಹಿಳೆಯರು ಪೂಜೆ ಸಲ್ಲಿಸಿ, ಬಾಗಿನ ನೀಡಿದರು.
ಹಬ್ಬದ ಹಿಂದಿನ ದಿನವಾದ ಸೋಮವಾರ ಗೌರಿ ಹಬ್ಬಕ್ಕೆ ಮಹಿಳೆಯರು ಭರ್ಜರಿ ತಯಾರಿ ನಡೆಸಿದ್ದರು. ಮಂಗಳವಾರ ಬೆಳಗ್ಗೆ ಮನೆಯ ಮುಂಭಾಗದಲ್ಲಿ ರಂಗೋಲಿ ಬಿಡಿಸಿದರು. ಮಾವಿನ ತೋರಣಗಳಿಂದ ಮನೆಯ ಆವರಣ ಮತ್ತು ಬಾಗಿಲನ್ನು ಶೃಂಗರಿಸಲಾಯಿತು. ನಂತರ ಪೂಜೆಗಳು ನಡೆದವು.
ಕೆಲವರು ಮನೆಗಳಲ್ಲಿ ದೇವಿಯ ಭಾವಚಿತ್ರಗಳು, ಕಳಸಗಳಿಗೆ ಪೂಜೆ ಸಲ್ಲಿಸಿದರು. ಮತ್ತಷ್ಟು ಮನೆಗಳಲ್ಲಿ ಮಾರುಕಟ್ಟೆಯಲ್ಲಿ ಖರೀದಿಸಿ ತಂದ ಗೌರಿ ಮೂರ್ತಿಗೆ ಪೂಜೆ ನಡೆಯಿತು. ಮನೆಗೆ ಬಂದ ಮುತ್ತೈದೆಯರಿಗೆ ಬಾಗಿನ ಕುಂಕುಮ ನೀಡಲಾಯಿತು. ಸಂಜೆವರೆಗೆ ಇದೇ ದೃಶ್ಯಗಳು ಕಂಡು ಬಂದವು. ದೇಗುಲಗಳಲ್ಲಿಯೂ ಪೂಜೆಗಳು ಜರುಗಿದವು.
ಹಬ್ಬದ ಉಡುಗೆಯಲ್ಲಿ ಮಿಂಚುತ್ತಿದ್ದ ಮಹಿಳೆಯರು ಬಾಗಿನ ಹಿಡಿದು ಸಾಗುತ್ತಿದ್ದ ದೃಶ್ಯಗಳು ಕಂಡುಬಂದವು. ಸುಮಂಗಲಿಯರು ತವರಿನಿಂದ ಬಂದವರು ಮಾತ್ರವಲ್ಲದೇ ಹತ್ತಿರದ ಬಂಧು– ಬಳಗ, ಅಕ್ಕಪಕ್ಕದ ಮನೆಯವರನ್ನು ಕರೆದು ಮೊರದಲ್ಲಿ ಅಕ್ಕಿ, ಬೆಲ್ಲ, ನವಧಾನ್ಯಗಳು ಉಪ್ಪು, ತೆಂಗಿನಕಾಯಿ, ಹಣ್ಣು, ಅರಿಶಿನ-ಕುಂಕುಮ, ವೀಳ್ಯದ ಎಲೆ, ಅಡಿಕೆ, ಬಳೆ, ಕನ್ನಡಿ, ಕಾಡಿಗೆ, ಬಾಚಣಿಕೆ, ಕುಂಕುಮ, ಕಪ್ಪು ಬಳೆ, ಕಪ್ಪು ಮಣಿ ಇಟ್ಟು ಸಿದ್ಧಪಡಿಸಿದ ಬಾಗಿನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.