ADVERTISEMENT

ಚಿಕ್ಕಬಳ್ಳಾಪುರ: ಕರ್ನಾಟಕ ಬಂದ್‌ಗೆ ಉತ್ತಮ ಬೆಂಬಲ

ಸ್ವಯಂ ಪ್ರೇರಿತರಾಗಿ ಬಂದ್‌ ಬೆಂಬಲಿಸಿದ ವರ್ತಕರು, ಎಲ್ಲ ತಾಲ್ಲೂಕುಗಳಲ್ಲಿ ಭಾಗಶಃ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 13:32 IST
Last Updated 28 ಸೆಪ್ಟೆಂಬರ್ 2020, 13:32 IST
ಚಿಕ್ಕಬಳ್ಳಾಪುರದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಚಿಕ್ಕಬಳ್ಳಾಪುರದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.   

ಚಿಕ್ಕಬಳ್ಳಾಪುರ: ವಿವಿಧ ಕಾಯ್ದೆಗಳ ತಿದ್ದುಪಡಿ ಸುಗ್ರಿವಾಜ್ಞೆಗಳ ವಿರೋಧಿಸಿ ವಿವಿಧ ಸಂಘಟನೆಗಳು ಮತ್ತು ಕೆಲ ಪಕ್ಷಗಳು ಸೇರಿ ಸೋಮವಾರ ನಡೆಸಿದ ಕರ್ನಾಟಕ ಬಂದ್‌ಗೆ ಜಿಲ್ಲೆಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಯಿತು.

ಬಹುಪಾಲು ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಸ್ವಯಂ ಪ್ರೇರಿತರಾಗಿ ಬೆಂಬಲ ನೀಡಿದರು. ಕೆಎಸ್‌ಆರ್‌ಟಿಸಿ ಬಸ್‌ಗಳು, ಆಟೊಗಳು ಮತ್ತು ಜನ ಸಂಚಾರ ವಿರಳವಾಗಿತ್ತು. ಖಾಸಗಿ ಬಸ್‌ಗಳು, ಸಾರಿಗೆ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.

ಔಷಧಿ ಮಳಿಗೆ, ಆಸ್ಪತ್ರೆಗಳು ಎಂದಿನಂತೆ ಬಾಗಿಲು ತೆರೆದಿದ್ದವು. ಉಳಿದಂತೆ ನಗರದ ಬಹುಪಾಲು ಅಂಗಡಿ, ಮಳಿಗೆಗಳು, ಹೊಟೇಲ್‌ಗಳು ಬಾಗಿಲು ಮುಚ್ಚಿದ್ದವು. ಪೆಟ್ರೋಲ್ ಬಂಕ್‌ಗಳು ವಹಿವಾಟು ನಿಲ್ಲಿಸಿದ್ದವು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ ಶಾಖೆಗಳು ಬಾಗಿಲು ತೆರೆದರೂ ಜನರಿಲ್ಲದೆ ಭಣಗುಡುತ್ತಿದ್ದವು. ಸಂಜೆ ವೇಳೆಗೆ ನಗರ ಸಹಜ ಸ್ಥಿತಿ ಮರಳಿತು.

ADVERTISEMENT

ರೈತ ಸಂಘದ ವಿವಿಧ ಬಣಗಳು, ಸಿಐಟಿಯು, ಕರುನಾಡು ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಮತ್ತು ಸಿಪಿಎಂ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಪದಾಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಪಂಜಿನ ಮೆರವಣಿಗೆ, ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ‘ಭೂಸುಧಾರಣೆ, ಎಪಿಎಂಸಿ, ಅಗತ್ಯ ವಸ್ತುಗಳು, ವಿದ್ಯುತ್, ಬೀಜ ಮಸೂದೆ ಹೀಗೆ ಹಲವು ಕಾಯ್ದೆಗಳಿಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರುತ್ತಿರುವ ಸರ್ಕಾರಗಳು ಕೃಷಿ ಕ್ಷೇತ್ರವನ್ನು ಕಾರ್ಪೋರೆಟ್‌ ಕಂಪೆನಿಗಳು, ಬಂಡವಾಳಶಾಹಿಗಳ ಕೈಗೆ ಹಸ್ತಾಂತರಿಸುವ ಹುನ್ನಾರ ನಡೆಸಿವೆ’ ಎಂದು ಆರೋಪಿಸಿದರು.

‘ಉದ್ಯಮಿಗಳ ಲಾಬಿಗೆ ಮಣಿದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರನ್ನು ನಿರ್ಲಕ್ಷ್ಯ ಮಾಡುತ್ತ ಬಂದ ಪರಿಣಾಮ, ಇವತ್ತು ಅನ್ನದಾತರು ಬೀದಿಗೆ ಬೀಳುವ ಸ್ಥಿತಿ ಬಂದಿದೆ. ಸರ್ಕಾರಗಳ ಧೋರಣೆ ಖಂಡಿಸಿ ರೈತರು ಬೀದಿಗಿಳಿಯುವ ಸಂದರ್ಭ ಬಂದಿದೆ’ ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಿನಾರಾಯಣ ರೆಡ್ಡಿ ಮಾತನಾಡಿ, ‘ಕೃಷಿ ಭೂಮಿ, ವಿದ್ಯುತ್‌ ಕ್ಷೇತ್ರ ಮತ್ತು ಎಪಿಎಂಸಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಪೋರೆಟ್‌ ಕಂಪೆನಿಗಳ ಕೈಗೆ ಒಪ್ಪಿಸಲು ಹೊರಟಿವೆ. ಅದರ ವಿರುದ್ಧ ಎಲ್ಲ ವರ್ಗದ ಜನರು ದಂಗೆ ಎಂದಿದ್ದು, ಚರಿತ್ರೆಯಲ್ಲಿ ಇದು ಕರಾಳ ದಿನ’ ಎಂದು ಹೇಳಿದರು.

‘ಮೋದಿ ಅವರ ಸರ್ಕಾರದಲ್ಲಿ ಬಂಡವಾಳಶಾಹಿಗಳಿಗೆ, ಕಾರ್ಪೊರೇಟ್‌ ಕುಳಗಳಿಗೆ, ಲೂಟಿಕೋರರಿಗೆ ಒಳ್ಳೆಯ ದಿನಗಳು ಬಂದಿವೆ. ರೈತರಿಗೆ, ಸಾಮಾನ್ಯ ಜನರಿಗೆ ಒಳ್ಳೆಯ ದಿನಗಳು ಬರಲಿಲ್ಲ. ಪರಿಣಾಮ, ಕೃಷಿರಂಗ ಸಂಪೂರ್ಣ ದಿವಾಳಿ, ಕೈಗಾರಿಕಾ ಕ್ಷೇತ್ರ ನಾಶವಾಗಿದೆ. ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಯುವಜನರನ್ನು ಬೀದಿಗೆ ತಳ್ಳಲಾಗುತ್ತಿದೆ’ ಎಂದು ಆರೋಪಿಸಿದರು.

ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ‘ತನ್ನ ಧೋರಣೆ ವಿರುದ್ಧ ಜನಾಕ್ರೋಶ ವ್ಯಕ್ತವಾಗುವುದು ಅರಿತು ರಾಜ್ಯ ಸರ್ಕಾರ ಬಂದ್‌ ಹತ್ತಿಕ್ಕಲು ಪೊಲೀಸ್‌ ಇಲಾಖೆಯನ್ನು ಬಳಸಿಕೊಂಡಿದೆ. ಪೊಲೀಸರು ಬಂದ್‌ ವಿಫಲಗೊಳಿಸಲು, ಹೋರಾಟದ ದಿಕ್ಕು ತಪ್ಪಿಸಲು ಪ್ರಯತ್ನಿಸಿದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಬಂದ್‌ಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಮಸೂದೆಗಳ ವಿರುದ್ಧ ಜನರು ಇದ್ದಾರೆ ಎಂಬ ಸಂದೇಶ ಜನ ನೀಡಿದ್ದಾರೆ. ಈ ಚಳವಳಿ ತೀವ್ರಗೊಳ್ಳಬೇಕಿದೆ. ಹಳ್ಳಿ ಹಳ್ಳಿಗಳಲ್ಲಿ ಕಾಯ್ದೆ ತಿದ್ದುಪಡಿಗಳಿಂದ ಆಗುವ ಅಪಾಯಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಎಲ್ಲ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹೋರಾಟ ಬಲಿಷ್ಠಗೊಳಿಸಲು ತೀರ್ಮಾನಿಸಿದ್ದೇವೆ’ ಎಂದು ಹೇಳಿದರು.

ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ, ಕಾಂಗ್ರೆಸ್‌ ಮುಖಂಡರಾದ ಯಲುಹಳ್ಳಿ ರಮೇಶ್‌, ಜಯರಾಂ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಮುನೇಗೌಡ, ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಎಸ್‌.ವೆಂಕಟಸ್ವಾಮಿ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಆರ್.ಮಂಜುಳಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.