
ಚೇಳೂರು: ಈ ಭಾಗದ ಕ್ಷೇತ್ರದ ಜನರ ಕುಂದುಕೊರತೆಗಳು ಮತ್ತು ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಯಾವುದೇ ರಾಜಕೀಯ ಲಾಭಕ್ಕಲ್ಲ ಎಂದು ಶಾಸಕ ಎಸ್.ಎಸ್ ಸುಬ್ಬಾರೆಡ್ಡಿ ಹೇಳಿದರು.
ತಾಲೂಕು ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಂದೇ ಸೂರಿನಡಿ ಕರೆತರಲಾಗಿದೆ ಎಂದರು.
ಚೇಳೂರು ಮತ್ತು ಬಾಗೇಪಲ್ಲಿ ಭಾಗಗಳಲ್ಲಿ ಗ್ರಾಮಗಳ ಹೆಸರುಗಳು ಒಂದೇ ರೀತಿ ಇರುವುದರಿಂದ ತಾಂತ್ರಿಕವಾಗಿ ಕೆಲವು ಸಮಸ್ಯೆಗಳಾಗುತ್ತಿವೆ. ಇದರಿಂದ ಕಂದಾಯ ದಾಖಲೆಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದೆ. ಇನ್ನು ಒಂದು ತಿಂಗಳೊಳಗೆ ದರಖಾಸ್ತು ಸಮಿತಿ ಸಭೆ ನಡೆಸಿ, ಬಾಕಿ ಇರುವ ಸುಮಾರು 765 ಕಡತಗಳನ್ನು ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ ಎಂದು ಶಾಸಕರು ವಿವರಿಸಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದ ರಸ್ತೆ ಒತ್ತುವರಿ ತೆರವು, ಪೋಡಿ, ದುರಸ್ತಿ, ಪೌತಿ ಖಾತೆ, ಪಹಣಿ ತಿದ್ದುಪಡಿ, ಖಾತೆ ಬದಲಾವಣೆ, ವೃದ್ಧಾಪ್ಯ, ವಿಧವಾ ವೇತನ, ಅಂಗವಿಕಲರ ಪಿಂಚಣಿ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಸ್ಮಶಾನಕ್ಕೆ ಜಾಗ ಹಾಗೂ ವಸತಿ ಯೋಜನೆಗಳಿಗೆ ಸಂಬಂಧಿಸಿದ ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿಗೆ ಮಿನಿ ವಿಧಾನಸೌಧ ಮಂಜೂರಾಗಿದೆ. ಶೀಘ್ರದಲ್ಲೇ ಭೂಮಿ ಪೂಜೆ ನೆರವೇರಿಸಲಾಗುವುದು. ಇ.ಓ ಕಚೇರಿ ಸೇರಿದಂತೆ ವಿವಿಧ ಇಲಾಖಾ ಕಚೇರಿಗಳ ಸ್ಥಾಪನೆಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಸಾರ್ವಜನಿಕರು ನೀಡಿದ ಪ್ರತಿಯೊಂದು ಅರ್ಜಿಯೂ ಅಮೂಲ್ಯವಾದದ್ದು. ಸಭೆಯಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ಆಯಾ ಇಲಾಖೆಯ ಅಧಿಕಾರಿಗಳು ವಿಳಂಬ ಮಾಡದೆ ತಕ್ಷಣ ಪರಿಶೀಲಿ ಇತ್ಯರ್ಥಗೋಳಿಗಬೇಕು. ತಾಂತ್ರಿಕ ತೊಂದರೆಗಳಿದ್ದರೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟು, ಕಾನೂನು ಚೌಕಟ್ಟಿನಲ್ಲಿ ಶೀಘ್ರ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು.
ವೃತ್ತ ನಿರೀಕ್ಷಕ ಎಂ.ಶ್ರೀನಿವಾಸ್, ಇ.ಓ ರಮೇಶ್, ಆರ್.ಐ. ಈಶ್ವರ್, ಪಿಡಿಒ ಗೌಸ್‌ಪೀರ್ ಮತ್ತಿತರರು ಪಾಲ್ಗೊಂಡಿದ್ದರು.
ರಾಜೀವಗೌಡ ಬಂಧನ ಖಚಿತ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ವಿರುದ್ಧ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮಾತಾಡಿದ್ದು ಅಕ್ಷಮ್ಯ ಅಪರಾಧ. ಕಾನೂನಿಗೆ ಯಾರಾದರೂ ತಲೆ ಬಾಗಲೇಬೇಕು. ಈಗಾಗಲೇ ಆತನ ಮೇಲೆ ಎರಡು ಪ್ರಕರಣಗಳು ದಾಖಲಾಗಿವೆ. ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಬಂಧನ ಖಚಿತ ಎಂದು ಶಾಸಕ ಎಸ್ ಎಸ್ ಸುಬ್ಬಾರೆಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.