ಚಿಕ್ಕಬಳ್ಳಾಪುರ: ಗೃಹಲಕ್ಷ್ಮಿ ಯೋಜನೆ ಫಲಾನುಭವಿಯಾದ ಮನೆಯ ಯಜಮಾನಿಯು ಮೃತಪಟ್ಟರೆ ಆ ಕುಟುಂಬದ ಮಹಿಳಾ ಸದಸ್ಯರನ್ನು ಈ ಯೋಜನೆಯ ವ್ಯಾಪ್ತಿಗೆ ತರಲು ತಳಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾಲೋಚಿತವಾಗಿ ಕ್ರಮವಹಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್. ರಮೇಶ ತಿಳಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಮಾಹಿತಿಯು ಪ್ರತಿಯೊಬ್ಬರಿಗೂ ವ್ಯಾಪಕವಾಗಿ ತಲುಪಿದೆ. ಆದರೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಮೃತರಾದ ಸಂದರ್ಭದಲ್ಲಿ ಆ ಕುಟುಂಬದ ಇತರ ಸದಸ್ಯರು ಯೋಜನೆಯ ಅನುಕೂಲ ಪಡೆಯುವ ನಿಟ್ಟಿನಲ್ಲಿ ಗ್ರಾಮ ಮಟ್ಟದ ಕೆಲವು ಮಹಿಳೆಯರಿಗೆ ಅರಿವು ಇರುವುದಿಲ್ಲ ಎಂದು ಹೇಳಿದರು.
ಅಂತಹ ಕುಟುಂಬ ಸದಸ್ಯರು ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯ ಆಹಾರ ನಿರೀಕ್ಷಕರು, ಅಂಗನವಾಡಿ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು. ಸಂಬಂಧಪಟ್ಟ ದಾಖಲೆಗಳನ್ನು ಸೇವಾ ಸಿಂಧು ಮೂಲಕ ಸಲ್ಲಿಸಿ ಮತ್ತೆ ಯೋಜನೆ ಅನುಕೂಲ ಪಡೆಯಬಹುದು ಎಂದರು.
ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಅರ್ಹರು ಗ್ಯಾರಂಟಿ ಯೋಜನೆ ಗಳಿಂದ ವಂಚಿತರಾಗದಂತೆ ಕ್ರಮವಹಿಸಲು ಸೂಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಈ ಕುರಿತು ತಮ್ಮ ವ್ಯಾಪ್ತಿಯಲ್ಲಿ ಸಮೀಕ್ಷೆ ಮಾಡಿ ಗ್ಯಾರಂಟಿ ಯೋಜನೆಗಳ ವಂಚಿತರನ್ನು ಯೋಜನೆಗಳ ವ್ಯಾಪ್ತಿಗೆ ತರಲು ಮುಂದಾಗಬೇಕು ಎಂದು ಹೇಳಿದರು.
ಜುಲೈ ಗೃಹಲಕ್ಷ್ಮಿ ಹಣ ಸದ್ಯದಲ್ಲೆ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಹಣವು ಸಹ ಮುಂದಿನ ದಿನಗಳಲ್ಲಿ ಜಮೆ ಆಗಲಿದೆ ಎಂದು ತಿಳಿಸಿದರು.
ಶಕ್ತಿ ಯೋಜನೆಯು ಜಿಲ್ಲೆಯಲ್ಲಿಯೂ ಯಶಸ್ವಿಯಾಗಿ ಜಾರಿಯಾಗುತ್ತಿದೆ. ಜಿಲ್ಲೆಯಲ್ಲಿ ₹ 8.41 ಕೋಟಿ ಉಚಿತ ಟಿಕೆಟ್‌ಗಳನ್ನು ಪಡೆದು ಮಾಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಈ ಪ್ರಯಾಣಕ್ಕೆ₹ 321.24 ಕೋಟಿ ಸರ್ಕಾರ ಪಾವತಿಸಿದೆ. ಯಾವ ಮಾರ್ಗಗಳಲ್ಲಿ ಬಸ್‌ಗಳ ಕೊರತೆ ಇದೆ. ಯಾವ ಕಡೆ ನಿಲುಗಡೆ ನೀಡುತ್ತಿಲ್ಲ ಎಂಬ ಕುರಿತು ಪರಿಹಾರ ಕ್ರಮ ಕೈಗೊಳ್ಳಲು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅವರಿಗೆ ತಿಳಿಸಲಾಗಿದೆ ಎಂದರು.
ಪಂಚಾಯಿತಿ ಮಟ್ಟದಲ್ಲಿ ಕೆಲವು ಯುವಕರು ಮತ್ತು ಯುವತಿಯರು ಯುವನಿಧಿ ಯೋಜನೆ ಕುರಿತು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಅಂತಹವರಿಗೆ ಅರಿವು ಮೂಡಿಸಲು ಸ್ಥಳೀಯ ಕಾಲೇಜುಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರಪತ್ರಗಳು ಮತ್ತು ಭಿತ್ತಿ ಪತ್ರ ವಿತರಣೆಗೆ ಹಾಗೂ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ವಿಚಾರ ಸಂಕಿರಣಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 6,30,781 ಫಲಾನುಭವಿಗಳಿಗೆ ಇಲ್ಲಿಯವರೆಗೆ ₹ 233.71 ಕೋಟಿ ವೆಚ್ಚದ ವಿದ್ಯುತ್ ಉಚಿತವಾಗಿ ನೀಡಲಾಗಿದೆ. ಗೃಹ ಬಳಕೆಯ ಉದ್ದೇಶ ಹೊರತುಪಡಿಸಿ ಈ ಯೋಜನೆಯಡಿ ಇತರ ಉದ್ದೇಶಗಳಿಗೆ ವಿದ್ಯುತ್ ಬಳಕೆ ಮಾಡುತ್ತಿದ್ದರೆ, ಅಂತಹದ್ದನ್ನು ತಡೆಯಲು ಸೂಚಿಸಲಾಗಿದೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ. ನವೀನ್ ಭಟ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅತಿಕ್ ಪಾಷಾ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ. ಬಸವರಾಜು, ಜಿಲ್ಲಾ ಉದ್ಯೋಗಾಧಿಕಾರಿ ಎಂ. ಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೆಂಕಟೇಶ್ ರೆಡ್ಡಿ, ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ಕೆಳಗಿನಮನಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ರಾಮಕೃಷ್ಣಪ್ಪ, ಜಿ. ಸುಬ್ಬಾರೆಡ್ಡಿ, ಆದಿರೆಡ್ಡಿ, ಸದಸ್ಯರಾದ ನಿರ್ಮಲಾ ಗಂಗಾಧರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.