ಚಿಂತಾಮಣಿ: ವಾಣಿಜ್ಯ ತೆರಿಗೆ ಇಲಾಖೆ ವ್ಯಾಪಾರಸ್ಥರ ಪೋನ್ ಪೇ, ಯುಪಿಐ ಮತ್ತಿತರ ಎಲ್ಲ ವಹಿವಾಟುಗಳನ್ನು ಜಾಲಾಡಿ ವಾರ್ಷಿಕ ವಹಿವಾಟು ಲೆಕ್ಕಕ್ಕೆ ಸೇರಿಸಿ ಜಿಎಸ್‌ಟಿ ಪಾವತಿಸಲು ನೋಟಿಸ್ ನೀಡುತ್ತಿದೆ ಎಂಬ ಸುದ್ದಿ ಸಣ್ಣ–ಪುಟ್ಟ ವ್ಯಾಪಾರಸ್ಥರಿಗೆ ನುಂಗಲಾರದ ತುತ್ತಾಗಿದೆ.
ಆಧಾರ್, ಮತ್ತು ಪಾನ್‌ಕಾರ್ಡ್‌ಗಳ ಲಿಂಕ್ ಬಳಸಿಕೊಂಡು ಬ್ಯಾಂಕ್‌ಗಳಲ್ಲಿನ ವ್ಯಾಪಾರಸ್ಥರ ಖಾತೆಗಳ ಮಾಹಿತಿ ಪಡೆದು ನೋಟಿಸ್ ನೀಡಿ ದಂಡ ವಸೂಲಿ ಮಾಡುತ್ತಿದೆ. ಜಿಎಸ್‌ಟಿ ವಂಚಿಸಲಾಗಿದೆ ಎಂದು ಮೊಕದ್ದಮೆ ಹೂಡಲಾಗುತ್ತದೆ ಎಂದು ವ್ಯಾಪಾರಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಅಂಗಡಿಗಳ ಮುಂದೆ ನೇತಾಡುತ್ತಿದ್ದ ಸ್ಕ್ಯಾನರ್‌ಗಳು ಮಾಯವಾಗುತ್ತಿವೆ. ಫೋನ್ ಪೇ ಬೇಡ ಕಾಸು ಕೊಡಿ, ಸ್ಕ್ಯಾನರ್ ತೆಗೆದು ಬಿಟ್ಟಿದೆ, ಚಿಲ್ಲರೆ ಇಲ್ಲದಿದ್ದರೆ ನಾಳೆ ಕೊಡಿ ಆದರೆ ಆನ್‌ಲೈನ್ ಪೇಮೆಂಟ್ ಬೇಡ ಎನ್ನುತ್ತಿದ್ದಾರೆ ಅಂಗಡಿಯವರು.
ಚಿಲ್ಲರೆ ಅಂಗಡಿಯವರು, ತಳ್ಳು ಗಾಡಿಯವರು, ಹೂವು, ಹಣ್ಣು ಮತ್ತು ತರಕಾರಿ ವ್ಯಾಪಾರಿಗಳಿಂದ ಒಂದು ವಾರದಿಂದ ಈ ಮಾತು ಕೇಳಿಬರುತ್ತಿದೆ. ನಮಗೆ ಬರುವ ಅಲ್ಪ ಲಾಭದಲ್ಲಿ ಜೀವನ ನಿರ್ವಹಣೆ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ತೆರಿಗೆ ನೋಟಿಸ್ ಬಂದರೆ ಏನು ಗತಿ ಎನ್ನುತ್ತಾರೆ ಸಣ್ಣ ಅಂಗಡಿ ಮಾಲೀಕ ನಾಗರಾಜ್.
ಸ್ಕ್ಯಾನರ್ ಮಾಯ: ಯುಪಿಐ, ಆನ್‌ಲೈನ್ ವಹಿವಾಟಿಗಾಗಿ ಅಂಟಿಸಿದ್ದ ಕ್ಯೂಆರ್ ಕೋಡ್‌ಗಳನ್ನು ಸಣ್ಣ ವ್ಯಾಪಾರಿಗಳು ಕಿತ್ತುಹಾಕಿದ್ದಾರೆ. ಹಣ ಕೊಟ್ಟು ವ್ಯಾಪಾರ ಮಾಡಿ ಎಂದು ಬೇಡಿಕೆ ಇಡುತ್ತಿದ್ದಾರೆ. ಇದರಿಂದ ಮತ್ತೆ ಚಿಲ್ಲರೆ ಸಮಸ್ಯೆ ಉದ್ಭವವಾಗಿದೆ.
ಬೆಳಿಗ್ಗೆಯಿಂದ ಸಂಜೆವರೆಗೂ ಗಾಡಿ ತಳ್ಳುತ್ತೇವೆ. ಆದರೂ ನಮಗೆ ಬರುವ ಲಾಭ ಅಷ್ಟಕಷ್ಟೆ. ನಾವು ಲೆಕ್ಕದ ವಹಿವಾಟುಗಳನ್ನು ಇಡಬೇಕು. ಜಿಎಸ್‌ಟಿ ಕಟ್ಟಬೇಕು ಎಂದರೆ ಹೇಗೆ ಜೀವನ ನಡೆಸುವುದು. ನಮ್ಮ ಹಣಕ್ಕೆ ನಾವೇ ತೆರಿಗೆ ಕಟ್ಟಬೇಕೆಂದರೆ ಹೇಗೆ? ನಮಗೆ ವ್ಯಾಪಾರ ಇಲ್ಲದಿದ್ರೂ ಪರವಾಗಿಲ್ಲ ನಾವು ಯುಪಿಐ ಪೇಮೆಂಟ್ ಸ್ವೀಕರಿಸುವುದಿಲ್ಲ. ಹಣ ಕೊಟ್ಟರೆ ಮಾತ್ರ ಹೂವು ಕೊಡುತ್ತೇವೆ ಎಂದು ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುವ ಸರೋಜಮ್ಮ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.