ಶಿಡ್ಲಘಟ್ಟ: ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗುರುವಾರ ಪೊಲೀಸ್ ಬಂದೋಬಸ್ತ್‌ನಲ್ಲಿ ಆರಂಭವಾಗಬೇಕಿದ್ದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯು ಕೊನೆಯ ಘಳಿಗೆಯಲ್ಲಿ ದಿಢೀರ್ ರದ್ದಾಗಿದೆ. ಇದರಿಂದಾಗಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಗ್ರಹಣ ಹಿಡಿದಂತಾಗಿದೆ.
ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಚೊಚ್ಚಲ ಸಭೆಯಲ್ಲಿ ‘ಗೃಹ ಲಕ್ಷ್ಮಿ’ ಯೋಜನೆ ಕುರಿತು ಚರ್ಚೆ ಆರಂಭಿಸಬೇಕಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸಭೆ ರದ್ದುಪಡಿಸಲಾಗಿದೆ ಎಂದು ಸಭೆಯಲ್ಲಿದ್ದ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಆರ್. ಹೇಮಾವತಿ ಘೋಷಣೆ ಮಾಡಿದರು.
ಜಿಲ್ಲಾಧಿಕಾರಿ, ಕಾರ್ಯನಿರ್ವಹಣಾಧಿಕಾರಿ ಮತ್ತು ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರಿಗೆ ಕರೆ ಮಾಡಿದ ಸಮಿತಿ ಅಧ್ಯಕ್ಷ ಎಚ್.ಎಂ.ಮುನಿಯಪ್ಪ, ‘ಸಭೆ ಆರಂಭಿಸಲಾಗಿದೆ. ಸಭೆಗೆ ಎಲ್ಲ ಸದಸ್ಯರು ಬಂದಿದ್ದು, ಏಕಾಏಕಿ ಸಭೆ ರದ್ದುಪಡಿಸಿದರೆ ಹೇಗೆ? ಸಭೆ ಮುಂದುವರಿಸಲು ಅವಕಾಶ ನೀಡಬೇಕು’ ಎಂದು ಮನವರಿಕೆ ಮಾಡಲು ಯತ್ನಿಸಿದರು. ಆದರೆ, ಈ ಯತ್ನ ಫಲ ನೀಡಲಿಲ್ಲ.
ಪ್ರತಿಭಟನೆ: ಮತ್ತೊಂದೆಡೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನಡೆಯುತ್ತಿದೆ ಎಂಬುದನ್ನು ತಿಳಿದು, ಸ್ಥಳಕ್ಕಾಗಮಿಸಿದ ರಾಜೀವ್ ಗೌಡ ಅವರ ಬೆಂಬಲಿಗರು, ಪ್ರತಿಭಟನೆ ನಡೆಸಿದರು.
ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಲ್ಲಿ ಇರುವವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲ. ಸಮಿತಿಯಲ್ಲಿ ಜೆಡಿಎಸ್, ಬಿಜೆಪಿಯಿಂದ ವಲಸೆ ಬಂದಿರುವವರಿಗೆ ಅವಕಾಶ ನೀಡಲಾಗಿದ್ದು, ನಿಷ್ಠಾವಂತರನ್ನು ಕಡೆಗಣಿಸಲಾಗಿದೆ. ಈ ವಿಷಯವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗಮನಕ್ಕೆ ತರಲಾಗಿದ್ದು, ಹೊಸ ಸಮಿತಿ ರಚನೆಗಾಗಿ ಸಚಿವರಿಗೆ ಶಿಫಾರಸು ಮಾಡಿದ್ದಾರೆ ಎಂದು ಪ್ರತಿಭಟನಕಾರರು ಹೇಳಿದರು.
ಶೀಘ್ರವೇ ಹೊಸ ಸಮಿತಿ ರಚನೆಯಾಗಲಿದ್ದು, ಅದುವರೆಗೆ ಸಮಿತಿ ಸಭೆ ನಡೆಸಬಾರದು ಎಂದು ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಐಎನ್‌ಟಿಯುಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಜಯ್ಯದ್ ಅಪ್ನಾನ್, ನಾಗನರಸಿಂಹ, ಮುತ್ತೂರು ವೆಂಕಟೇಶ್, ಕೆ. ನಾರಾಯಣಸ್ವಾಮಿ, ಆನೂರು ರವಿ, ದೇವರಮಳ್ಳೂರು ರವಿ ಸೇರಿದಂತೆ ಇತರರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.