ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರವು ತನ್ನ ಮಹತ್ವದ ಗ್ಯಾರಂಟಿ ಯೋಜನೆಗಳ ಬಗ್ಗೆ ಫಲಾನುಭವಿಗಳಿಂದ ಪ್ರತಿಕ್ರಿಯೆಗಳನ್ನು ಪಡೆದಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಿದೆ. ಆ ಪ್ರಕಾರ ಜಿಲ್ಲೆಯಲ್ಲಿಯೂ ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಸಮೀಕ್ಷೆಯನ್ನು ನಡೆಸಿದೆ.
ಈ ಮೂರು ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 7,81,035 ಫಲಾನುಭವಿಗಳು ನೋಂದಣಿ ಆಗಿದ್ದಾರೆ. ಈ ಪೈಕಿ 5,94,566 ಫಲಾನುಭವಿಗಳು ಸಮೀಕ್ಷೆ ಮಾಡಲಾಗಿದೆ. 1,87,845 ಫಲಾನುಭವಿಗಳ ಸಮೀಕ್ಷೆ ಬಾಕಿ ಇದೆ.
ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ 2,80,712 ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಈ ಪೈಕಿ 2,00,955 ಫಲಾನುಭವಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಇನ್ನೂ ಸಹ 79,757 ಗೃಹಲಕ್ಷ್ಮಿ ಫಲಾನುಭವಿಗಳ ಜಿಲ್ಲೆಯಲ್ಲಿ ಸಮೀಕ್ಷೆಗೆ ಬಾಕಿ ಉಳಿದಿದ್ದಾರೆ.
ಗೃಹಜ್ಯೋತಿ ಗ್ಯಾರಂಟಿ ಯೋಜನೆಗೆ ಜಿಲ್ಲೆಯಲ್ಲಿ 2,21,280 ಫಲಾನುಭವಿಗಳು ನೋಂದಣಿ ಆಗಿದ್ದಾರೆ. ಈ ಪೈಕಿ 1,72,132 ಫಲಾನುಭವಿಗಳ ಸಮೀಕ್ಷೆ ನಡೆದಿದ್ದು 49,148 ಮಂದಿ ಬಾಕಿ ಇದ್ದಾರೆ.
ಅನ್ನಭಾಗ್ಯ ಯೋಜನೆಯಲ್ಲಿ 2,79,043 ಫಲಾನುಭವಿಗಳು ನೋಂದಣಿಯಾಗಿದ್ದು 2,20,879 ಫಲಾನುಭವಿಗಳು ಸಮೀಕ್ಷೆಗೆ ಒಳಪಟ್ಟಿದ್ದಾರೆ. 58,164 ಮಂದಿ ಸಮೀಕ್ಷೆಯಿಂದ ಹೊರಗೆ ಉಳಿದಿದ್ದಾರೆ. ಹೀಗೆ ಈ ಮೂರು ಗ್ಯಾರಂಟಿ ಯೋಜನೆಗಳ ಸಮೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 1,87,845 ಫಲಾನುಭವಿಗಳು ಬಾಕಿ ಇದ್ದಾರೆ.
ಯೋಜನೆಯ ಕುರಿತು, ಅವುಗಳ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಫಲಾನುಭವಿಗಳಿಂದ ಪ್ರತಿಕ್ರಿಯೆ ಪಡೆಯಲು ಸರ್ಕಾರವು ಗ್ಯಾರಂಟಿ ಸಮೀಕ್ಷೆ ನಡೆಸಿತ್ತು. 2024ರ ಮಾ.1ರಿಂದ ಮಾ.15ರವರೆಗೆ ರಾಜ್ಯದ ಎಲ್ಲೆಡೆ ಸಮೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಒಟ್ಟು 86,30,430 ಕುಟುಂಬಗಳು ಮತ್ತು 5.01 ಕೋಟಿ ಜನರನ್ನು ಸಮೀಕ್ಷೆ ಒಳಗೊಂಡಿದೆ.
ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಬಿಬಿಎಂಪಿ ಸಮೀಕ್ಷಾಕಾರರು ನಗರ ಮತ್ತು ಆರ್‌ಡಿಪಿಆರ್ ಸಮೀಕ್ಷಾಕಾರರು ಗ್ಯಾರಂಟಿ ಯೋಜನೆಗಳ ಬಗ್ಗೆ ಜನರ ಸಮೀಕ್ಷೆ ಮಾಡಿದ್ದಾರೆ.
ಈ ಸಮೀಕ್ಷೆಯ ಮೂಲಕ ಗ್ಯಾರಂಟಿ ಯೋಜನೆಗಳು ಯಾವ ರೀತಿಯಲ್ಲಿ ಜನರನ್ನು ಮುಟ್ಟಿವೆ ಎನ್ನುವುದನ್ನು ಕಂಡುಕೊಳ್ಳಲು ಸರ್ಕಾರ ಮುಂದಾಗಿತ್ತು.
ಗೃಹಜ್ಯೋತಿ ಸಮೀಕ್ಷೆಗೆ ಒಳಪಟ್ಟ ಶೇ 98ರಷ್ಟು ಫಲಾನುಭವಿಗಳು ಉಚಿತ ವಿದ್ಯುತ್ ತಮ್ಮ ಜೀವನ ಸುಧಾರಿಸಿದೆ ಎಂದಿದ್ದಾರೆ. ಶೇ 29ರಷ್ಟು ಜನರು ಹೆಚ್ಚಿನ ಅಧ್ಯಯನಕ್ಕೆ ಸಹಾಯ ಮಾಡಿದೆ ಎಂದಿದ್ದಾರೆ. ಶೇ 33ರಷ್ಟು ಜನರು ಹಣ ಉಳಿಸಿದೆ ಎಂದಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ಶೇ 43ರಷ್ಟು ಫಲಾನುಭವಿಗಳು ಹಣವನ್ನು ಹಣ್ಣು, ತರಕಾರಿ ಖರೀದಿಸಲು ಬಳಸಿದ್ದೇವೆ ಎಂದಿದ್ದಾರೆ. ಶೇ 13ರಷ್ಟು ಮಂದಿ ಮಕ್ಕಳ ಶಾಲಾ ಶಿಕ್ಷಣಕ್ಕೆ, ಶೇ 15ರಷ್ಟು ಫಲಾನುಭವಿಗಳು ವೈದ್ಯಕೀಯ ವೆಚ್ಚ, ಶೇ 23ರಷ್ಟು ಫಲಾನುಭವಿಗಳು ಮನೆಯ ವೆಚ್ಚಕ್ಕೆ ಬಳಸಿದ್ದೇವೆ ಎಂದು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.
ಶಕ್ತಿ ಯೋಜನೆಯ ಸಮೀಕ್ಷೆಗೆ ಒಳಪಟ್ಟ ಶೇ 98ರಷ್ಟು ಜನರು ಉಚಿತ ಪ್ರಯಾಣದ ಪ್ರಯೋಜನ ಬಳಸುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯ ಸಮೀಕ್ಷೆಗೆ ಒಳಪಟ್ಟವರಲ್ಲಿ ಶೇ 90ರಷ್ಟು ಮಂದಿ ಅಕ್ಕಿಯ ಜೊತೆಗೆ ಬೇಳೆಕಾಳುಗಳು, ತೈಲ ಮತ್ತಿತರ ಆಹಾರ ಪದಾರ್ಥಗಳನ್ನು ಒದಗಿಸಿದರೆ ಉತ್ತಮ ಎಂದಿದ್ದಾರೆ. ಈ ಅಂಶಗಳು ಗ್ಯಾರಂಟಿ ಯೋಜನೆಗಳ ಸಮೀಕ್ಷೆಯಿಂದ ತಿಳಿದು ಬಂದಿವೆ ಎಂದು ಸರ್ಕಾರ ತಿಳಿಸಿದೆ.
ಮಾ.1ರಿಂದ ಮಾ.15ರವರೆಗೆ ರಾಜ್ಯದ ಎಲ್ಲೆಡೆ ಸಮೀಕ್ಷೆ ಜಿಲ್ಲೆಯಲ್ಲಿ ಮೂರು ಯೋಜನೆಗಳ ಬಗ್ಗೆ ಅಭಿಪ್ರಾಯ ಸಂಗ್ರಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.