ADVERTISEMENT

ವಿವಾದ, ಘರ್ಷಣೆ ವರ್ಷ; ಅಭಿವೃದ್ಧಿ ಪರ್ವ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 6:24 IST
Last Updated 29 ಡಿಸೆಂಬರ್ 2025, 6:24 IST
ಗುಡಿಬಂಡೆ ಪಟ್ಟಣದಲ್ಲಿ ಎರಡು ಸಮುದಾಯದ ನಡುವೆ ಹೈಡ್ರಾಮ
ಗುಡಿಬಂಡೆ ಪಟ್ಟಣದಲ್ಲಿ ಎರಡು ಸಮುದಾಯದ ನಡುವೆ ಹೈಡ್ರಾಮ   

ಗುಡಿಬಂಡೆ: 2025 ತಾಲ್ಲೂಕು ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ. ಪುತ್ಥಳಿ ವಿವಾದ, ಕ್ರೀಡಾಂಗಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ, ಸಾಹಿತ್ಯ ಸಮ್ಮೇಳನ, ಭೂ ಸುರಕ್ಷಾ ಯೋಜನೆಗೆ ಚಾಲನೆಗೆ ಚಾಲನೆ ನೀಡಲಾಗಿತ್ತು.

2025ನೇ ವರ್ಷದ ಮೊದಲ ತಿಂಗಳಲ್ಲಿ ಪತ್ರಕರ್ತ ಜಿ.ಎಸ್ ಭರತ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಪುತ್ಥಳಿ ವಿವಾದ: ಎರಡು ಸಮುದಾಯದ ನಡುವೆ ಪುತ್ಥಳಿ ವಿವಾದ, ಬಲಿಜ ಸಮುದಾಯದವರು ಫೋಟೊ ಇಟ್ಟು ಪೂಜೆ ಮಾಡಿದರೆ ಒಕ್ಕಲಿಗ ಸಮುದಾಯದವರು ರಸ್ತೆಯಲ್ಲಿ ಕೂತು ಪ್ರತಿಭಟನೆ ನಡೆಸಿದ್ದರು. ಗುಡಿಬಂಡೆಯಲ್ಲಿ ಎರಡು ಸಮುದಾಯದ ನಡುವೆ ಘರ್ಷಣೆ ನಡೆದಿತ್ತು. ಚಿಕ್ಕಬಳ್ಳಾಪುರ ಎಸ್.ಪಿ ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ಹತೋಟಿಗೆ ತಂದಿದ್ದರು.

ADVERTISEMENT

ಅಂಬೇಡ್ಕರ್ ವೃತ್ತದಲ್ಲಿರುವ 2 ಗುಂಟೆ ಜಾಗವು ಸರ್ಕಾರಿ ಜಾಗ ಆಗಿದ್ದು ಪಟ್ಟಣ ಪಂಚಾಯಿತಿಯಿಂದ ₹10 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಅದೇ ಜಾಗದಲ್ಲಿ ಉದ್ಯಾನ ನಿರ್ಮಿಸಿತ್ತು. ಕೆಂಪೇಗೌಡ ಜಯಂತಿ ವೇದಿಕೆಯಲ್ಲಿ ಹಾವಳಿ ಬೈರೇಗೌಡ ವಿಗ್ರಹ ಪ್ರತಿಷ್ಠಾಪನೆ ಮಾಡಬೇಕೆಂದು ನಿರ್ಧರಿಸಿತ್ತು. ಆ ಜಾಗದಲ್ಲಿ ಕೈವಾರ ಜಯಂತಿ ವೇದಿಕೆಯಲ್ಲಿ ಸಮುದಾಯದ ಮುಖಂಡರು ಕೈವಾರ ತಾತಯ್ಯ ವಿಗ್ರಹ ಪ್ರತಿಷ್ಠಾಪನೆ ಮಾಡಲು ನಿರ್ಧರಿಸಿದ್ದರು. ಎರಡು ಸಮುದಾಯ ಮುಖಂಡರು ಭೂಮಿಪೂಜೆ ಮಾಡಲು ಪ್ರಯತ್ನಿಸಿದ್ದರು. ಆ ಸಂದರ್ಭದಲ್ಲಿ ಘರ್ಷಣೆ ನಡೆದಿತ್ತು.

ಕ್ರೀಡಾಂಗಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ: ₹2 ಕೋಟಿ ವೆಚ್ಚದಲ್ಲಿ ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಡಿಸೆಂಬರ್‌ನಲ್ಲಿ ತಿಳಿಸಿದ್ದರು. ಪಟ್ಟಣದ ಹೊರ ವಲಯದಲ್ಲಿ 6 ಎಕರೆ ಜಮೀನು ಗುರುತು ಮಾಡಲಾಗಿದೆ. ಈ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದರು.

ಸಾಹಿತ್ಯ ಸಮ್ಮೇಳನ: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನಿಂದ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ 8ರಂದು ಪಟ್ಟಣದ ಟಿ ಪಿ. ಕೈಲಾಸಂ ವೇದಿಕೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಗಿತ್ತು.

ಭೂ ಸುರಕ್ಷಾ ಯೋಜನೆಗೆ ಚಾಲನೆ: ತಾಲ್ಲೂಕು ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆಗೆ ಮಾರ್ಚ್‌ನಲ್ಲಿ ಚಾಲನೆ ನೀಡಲಾಗಿತ್ತು.

ದಾಖಲೆಗಳು ರೈತರಿಗೆ ಡಿಜಿಟಲೀಕರಣದ ಮೂಲಕ ಕುಳಿತಲ್ಲೇ ಸಿಗಬೇಕೆಂಬ ಉದ್ದೇಶದಿಂದ ಭೂ ಸುರಕ್ಷಾ ಯೋಜನೆ ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದರು.

ಕಂದಾಯ ಇಲಾಖೆ ಅಭಿಲೇಖಾಲಯದಲ್ಲಿ ಸಿಗುವ ಹಳೆ ಪಹಣಿ, ಇತರೆ ಪ್ರತಿಗಳಿಗೆ ರೈತರು ಅರ್ಜಿ ಹಾಕಿ ವಾರಗಟ್ಟಲೆ ಕಾಯಬೇಕು. ಇದರಿಂದ ರೈತರಿಗೆ ತೊಂದರೆಯಾಗಿ ಕಚೇರಿಗೆ ಅಲೆಯುವಂತಾಗುತ್ತದೆ. ಇದನ್ನು ತಪ್ಪಿಸಿ ದಾಖಲೆಗಳು ಇಲಾಖೆಯ ವೆಬ್‌ಸೈಟ್‌ನಲ್ಲಿ ದೊರೆಯುವಂತೆ ಮಾಡುವ ಉದ್ದೇಶದಿಂದ ಭೂ ಸುರಕ್ಷಾ ಯೋಜನೆ ಜಾರಿಗೆ ತರುತ್ತಿದ್ದು, ಇದರಿಂದ ರೈತರು ಕಚೇರಿಗೆ ಅಲೆಯುವುದನ್ನು ತಪ್ಪಿಸಬಹುದು ಎಂದಿದ್ದರು.

ಅಭಿಲೇಖಾಲಯದಲ್ಲಿ ಸುಮಾರು 100ರಿಂದ 150 ವರ್ಷಗಳ ಹಳೆ ದಾಖಲೆ ಇದ್ದು, ಅವುಗಳಲ್ಲಿ ಕೆಲವು ಮುಟ್ಟಿದರೆ ಪುಡಿ ಪುಡಿಯಾಗುವಂತಹ ದಾಖಲೆ ಸಹ ಇವೆ. ಕೆಲವು ದಾಖಲೆ ಕಳೆದು ಹೋಗಿದೆಯಂತಲೂ, ಇನ್ನೂ ಕೆಲವು ದಾಖಲೆಗಳು ಎಲ್ಲೋ ಇಟ್ಟು ಸಿಕ್ಕಿಲ್ಲವೆಂದು ಸಿಬ್ಬಂದಿ ರೈತರನ್ನು ಕಚೇರಿ ಅಲೆಯುವಂತೆ ಮಾಡುತ್ತಿದ್ದರು. ಡಿಜಿಟಲೀಕರಣದಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದರು.

ಪುತ್ಥಳಿ ವಿವಾದ ಸಂದರ್ಭದಲ್ಲಿ ಬಲಿಜ ಸಮುದಾಯದವರು ಫೋಟೊ ಇಟ್ಟು ಪೂಜೆ ಮಾಡಿದರೆ ಒಕ್ಕಲಿಗ ಸಮುದಾಯದವರು ರಸ್ತೆಯಲ್ಲಿ ಕೂತು ಪ್ರತಿಭಟನೆ ಮಾಡಿದ್ದರು
ಗುಡಿಬಂಡೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ 8ರಂದು ನಡೆದಿತ್ತು
ಭೂ ಸುರಕ್ಷಾ ಯೋಜನೆಗೆ ಚಾಲನೆ ನೀಡಿದ ಸಂದರ್ಭ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.