ಚಿಕ್ಕಬಳ್ಳಾಪುರ: ₹10 ಲಕ್ಷ ನಮೂದಿಸುವ ವೇಳೆ ₹1 ಲಕ್ಷ ಎಂದು ನಮೂದಿಸಿದ ಚಿಕ್ಕಬಳ್ಳಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಿಬ್ಬಂದಿ. ಈ ಎಡವಟ್ಟಿನ ಕಾರಣದಿಂದ ನಾಲ್ಕು ತಿಂಗಳಾದರೂ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳ 65 ಅತಿಥಿ ಶಿಕ್ಷಕರಿಗೆ ಮಾರ್ಚ್ ತಿಂಗಳ ಗೌರವ ಧನ ಇಂದಿಗೂ ಬಿಡುಗಡೆ ಆಗಿಲ್ಲ!
ಇಂತಹ ಎಡವಟ್ಟು ಚಿಕ್ಕಬಳ್ಳಾಪುರ ತಾಲ್ಲೂಕು ಶಿಕ್ಷಣ ಇಲಾಖೆಯಿಂದ ನಡೆದಿದೆ. ಅತಿಥಿ ಶಿಕ್ಷಕರು ‘ಮಾರ್ಚ್ ಗೌರವ ಧನ ಬಿಡುಗಡೆ ಮಾಡಿ’ ಎಂದು ಶಾಸಕರು, ಬಿಇಒಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ನಿವೃತ್ತರಾಗಿದ್ದು ಈಗ ಹೊಸ ಬಿಇಒ ನೇಮಕವಾಗಿದ್ದಾರೆ.
ಗೌರವಧನ ಬರುತ್ತದೆ ಎಂದು ಅಧಿಕಾರಿಗಳು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳುತ್ತಲೇ ಇದ್ದಾರೆ. ಆದರೆ ತಾವು ಕೆಲಸ ಮಾಡಿದ ಹಣ ಬರುತ್ತದೆ ಎನ್ನುವ ಖಚಿತ ನಂಬಿಕೆ ಅತಿಥಿ ಶಿಕ್ಷಕರಿಗೆ ಇಲ್ಲ.
2024–25ನೇ ಶೈಕ್ಷಣಿಕ ಸಾಲಿನಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 65 ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಅತಿಥಿ ಶಿಕ್ಷಕರಿಗೆ ಮಾಸಿಕ ₹10 ಸಾವಿರ ಗೌರವಧನವನ್ನು ಇಲಾಖೆ ಪಾವತಿಸುತ್ತದೆ.
ಜಿಲ್ಲೆಯ ಚಿಕ್ಕಬಳ್ಳಾಪುರ ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕುಗಳ ಅತಿಥಿ ಶಿಕ್ಷಕರಿಗೆ ಮಾರ್ಚ್‌ನಲ್ಲಿ ಗೌರವಧನ ಬಿಡುಗಡೆಯಾಗಿದೆ. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ತಾಲ್ಲೂಕಿನ ಅತಿಥಿಗಳಿಗೆ ಮಾತ್ರ ಗೌರವಧನದ ಭಾಗ್ಯವಿಲ್ಲ!
ಚಿಕ್ಕಬಳ್ಳಾಪುರ ತಾಲ್ಲೂಕಿನ ಅತಿಥಿ ಶಿಕ್ಷಕರಿಗೆ ನೀಡಲು ₹47.41 ಲಕ್ಷ ಹಾಗೂ ₹1 ಲಕ್ಷವು ತಲಾ ಎರಡು ಬಾರಿ ಬಿಡುಗಡೆಯಾಗಿದೆ. ಈ ಮೂಲಕ ಒಟ್ಟು ₹48.41 ಲಕ್ಷ ಅನುದಾನ ಬಿಡುಗಡೆಯಾಗಿದೆ.
ಆದರೆ ಎರಡನೇ ಕಂತಿಗೆ ಗೌರವಧನ ನೀಡುವ ಸಲುವಾಗಿ ₹10 ಲಕ್ಷ ಅನುದಾನ ಕೊರತೆ ಎದುರಾಗಿತ್ತು. ಅನುದಾನ ದೊರಕಿಸಿಕೊಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯು ಕೋರಿತ್ತು. ಈ ಕೋರಿಕೆ ವೇಳೆ ₹10 ಲಕ್ಷಕ್ಕೆ ಬದಲಾಗಿ ₹1 ಲಕ್ಷ ಬಿಡುಗಡೆಯಾಗಿದೆ.
‘ಈ ಕಚೇರಿಯಿಂದ ₹10 ಲಕ್ಷಗಳ ಅನುದಾನ ಬೇಡಿಕೆ ಸಲ್ಲಿಸಲಾಗಿತ್ತು. ಮೇಲಿನ ಕಚೇರಿಯಲ್ಲಿ ಕ್ರೋಡೀಕರಣದ ವೇಳೆ ಕೈ ತಪ್ಪಿನಿಂದ ₹1 ಲಕ್ಷ ಎಂದು ನಮೂದಿಸಿ ಸಲ್ಲಿಸಿರುವ ಪ್ರಯುಕ್ತ ಅನುದಾನದ ಕೊರತೆ ಆಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಏಪ್ರಿಲ್‌ನಲ್ಲಿ ಚಿಕ್ಕಬಳ್ಳಾಪುರ ಡಿಡಿಪಿಐ ಅವರಿಗೆ ಪತ್ರ ಸಹ ಬರೆದಿದ್ದಾರೆ.
‘ಈ ಕಾರಣದಿಂದ ಮಾರ್ಚ್ ಗೌರವಧನ ನೀಡಲು ಸಾಧ್ಯವಾಗಿಲ್ಲ. 2024–25ನೇ ಸಾಲಿನಲ್ಲಿ ₹48.41 ಲಕ್ಷ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ₹48.19 ಲಕ್ಷ ವೆಚ್ಚವಾಗಿದೆ. ₹21,725 ಅನುದಾನ ಉಳಿಕೆ ಇದೆ. ₹6.5 ಲಕ್ಷ ಹೆಚ್ಚುವರಿ ಅನುದಾನದ ಅಗತ್ಯವಿದೆ. ಈ ಅನುದಾನ ಮಂಜೂರು ಮಾಡಿಸಿಕೊಡಲು ಕೋರಿದೆ’ ಎಂದು ಪತ್ರದಲ್ಲಿ ಬಿಇಒ ಮನವಿ ಮಾಡಿದ್ದಾರೆ.
ಅತಿಥಿ ಶಿಕ್ಷಕರ ಒಕ್ಕೂಟವೂ ಮನವಿ: ಗೌರವಧನ ಬಿಡುಗಡೆ ಮಾಡುವಂತೆ ಅತಿಥಿ ಶಿಕ್ಷಕರ ಒಕ್ಕೂಟ ಮನವಿ ಸಹ ಮಾಡುತ್ತಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಅತಿಥಿ ಶಿಕ್ಷಕರಿಗೆ ಮಾರ್ಚ್ ಗೌರವಧನವು ಬಿಡುಗಡೆಯಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಸಹ ಗಮನಹರಿಸಬೇಕು ಎಂದು ಒಕ್ಕೂಟವು ಕೋರಿದೆ.
‘ಕನಿಷ್ಠ ವೇತನ ನಂಬಿ ಜೀವನ’
ಕೊಡುವ ಅಲ್ಪ ವೇತನದಲ್ಲೇ ಬಹಳಷ್ಟು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಅತಿಥಿ ಶಿಕ್ಷಕರು ಬಡತನ ರೇಖೆಗಿಂತ ಕೆಳಗಿರುವವರೇ ಆಗಿದ್ದಾರೆ. ಕೇವಲ ₹10 ಸಾವಿರ ಕನಿಷ್ಠ ವೇತನ ನಂಬಿ ಸಂಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಅತಿಥಿ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಕಳೆದ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದ ಎಲ್ಲ ಶೈಕ್ಷಣಿಕ ಚಟುವಟಿಕೆಗಳನ್ನು ಪೂರ್ಣಗೊಳಿಸಿದ್ದೇವೆ. ನಾಲ್ಕು ತಿಂಗಳು ಕಳೆದರೂ ಮಾರ್ಚ್‌ನ ಅತಿಥಿ ಶಿಕ್ಷಕರ ವೇತನ ನಮ್ಮ ಕೈ ಸೇರದೆ ಇರುವುದು ದುರ್ದೈವ. ಈ ಬಗ್ಗೆ ಶಾಸಕರ ಕಚೇರಿಗೂ ಮನವಿ ನೀಡಿದ್ದೇವೆ. ದಯವಿಟ್ಟು ನಮಗೆ ಗೌರವಧನ ದೊರಕಿಸಿಕೊಡಬೇಕು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.