ADVERTISEMENT

ಬಾಗೇಪಲ್ಲಿ: ಗುರುಭವನ ಕಾಮಗಾರಿಗೆ ಚಾಲನೆ

ಬಾಗೇಪಲ್ಲಿಯಲ್ಲಿ ಶಿಕ್ಷಕರ ದಿನಾಚರಣೆಯಲ್ಲಿ ಶಾಸಕ ಭಾಗಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 6:29 IST
Last Updated 12 ಸೆಪ್ಟೆಂಬರ್ 2025, 6:29 IST
ಬಾಗೇಪಲ್ಲಿಯ ಜೂನಿಯರ್ ಕಾಲೇಜು ಆಟದ ಮೈದಾನದಲ್ಲಿ ಗುರುಭವನದ ಕಟ್ಟಡ ಕಾಮಗಾರಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿ ಪೂಜೆ ಮಾಡಿದರು
ಬಾಗೇಪಲ್ಲಿಯ ಜೂನಿಯರ್ ಕಾಲೇಜು ಆಟದ ಮೈದಾನದಲ್ಲಿ ಗುರುಭವನದ ಕಟ್ಟಡ ಕಾಮಗಾರಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿ ಪೂಜೆ ಮಾಡಿದರು   

ಬಾಗೇಪಲ್ಲಿ: ಜೂನಿಯರ್ ಕಾಲೇಜು ಆಟದ ಮೈದಾನದಲ್ಲಿ ₹2.5 ಕೋಟಿ ವೆಚ್ಚದಲ್ಲಿ ಗುರುಭವನ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಗುರುವಾರ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಾಲೆಗಳ ಒಕ್ಕೂಟದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಜೂನಿಯರ್ ಕಾಲೇಜಿನ ಆಟದ ಮೈದಾನದಲ್ಲಿ ಗುರುಭವನ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಮುಂದಿನ ವರ್ಷದ ಸೆಪ್ಟೆಂಬರ್ ಒಳಗೆ ಶಿಕ್ಷಕರ ಸಂಘಟನೆಗಳ ₹50 ಲಕ್ಷ, ಶಾಸಕರ ಅನುದಾನದ ₹50 ಲಕ್ಷ ಹಾಗೂ ದಾನಿಗಳ ನೆರವಿನಿಂದ ಗುರುಭವನ ನಿರ್ಮಿಸಲಾಗುವುದು ಎಂದರು. 

ADVERTISEMENT

ಬಾಗೇಪಲ್ಲಿಯಲ್ಲಿ ₹100 ಕೋಟಿ ವೆಚ್ಚದಲ್ಲಿ ಮೂರು ವಸತಿ ಶಾಲೆ ಆರಂಭಿಸಲಾಗುವುದು. ಈ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡುವ ಗುರಿ ಇದೆ ಎಂದರು. 

ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಮಾತನಾಡಿ, ‘ಶಿಕ್ಷಕರು ಮತ್ತು ಪೋಷಕರ ಶ್ರಮದಿಂದ ಹಿಂದಿನ ವರ್ಷದ ಮೂರು ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳ ಫಲಿತಾಂಶದಲ್ಲಿ ಬಾಗೇಪಲ್ಲಿ ತಾಲ್ಲೂಕು ಪ್ರಥಮಸ್ಥಾನ ಪಡೆದಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸುಧಾರಿಸಲು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಎಂ.ವಿ.ರಾಮಕೃಷ್ಣಪ್ರಸಾದ್ ಪ್ರಧಾನ ಭಾಷಣ ಮಾಡಿದರು.

ಪಟ್ಟಣದ ಡಿವಿಜಿ ಮುಖ್ಯರಸ್ತೆಯ ಮೂಲಕ ರಾಮಕೃಷ್ಣ ಕಲ್ಯಾಣ ಮಂಟಪದವರಿಗೆ ತಮಟೆವಾದನ ಹಾಗೂ ವಿದ್ಯಾರ್ಥಿನಿಯರ ಬ್ಯಾಂಡ್‍ಸೆಟ್ ಮೂಲಕ ಸರ್ವೆಪಲ್ಲಿ ರಾಧಾಕೃಷ್ಣನ್‍ ಅವರ ಭಾವಚಿತ್ರವನ್ನು ಸಿಂಗರಿಸಿದ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸರ್ವೆಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಫುಲೆ ಭಾವಚಿತ್ರಗಳಿಗೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ನಿವೃತ್ತ ಶಿಕ್ಷಕ, ಶಿಕ್ಷಕಿಯರಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಶಾಲು ಹೊದಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅತೀಕ್ ಅಹಮದ್, ತಹಶೀಲ್ದಾರ್ ಮನೀಷಾ ಎನ್. ಪತ್ರಿ, ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ, ಇಒ ಜಿ.ವಿ.ರಮೇಶ್, ಎನ್.ವೆಂಕಟೇಶಪ್ಪ, ಆರ್.ವೆಂಕಟರಾಮಪ್ಪ, ಎ.ಶ್ರೀನಿವಾಸ್, ಸುಜಾತಾನಾಯ್ಡು, ಆರ್.ಹನುಮಂತರೆಡ್ಡಿ, ರಾಮಚಂದ್ರ, ವೆಂಕಟರವಣಪ್ಪ, ವೈ.ಶ್ರೀನಿವಾಸರೆಡ್ಡಿ, ನಂಜುಂಡಪ್ಪ, ಮಂಜುನಾಥರೆಡ್ಡಿ, ಲಕ್ಷ್ಮಿನರಸಿಂಹಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.